ದಲಿತರ ಹಣ ಬಳಸಿ ಸರ್ಕಾರದಿಂದ ಮಲ ತಿನ್ನುವ ಕೆಲಸ

KannadaprabhaNewsNetwork | Published : Mar 4, 2025 12:32 AM

ಸಾರಾಂಶ

ಪಂಚ ಗ್ಯಾರಂಟಿ ಯೋಜನೆಗಾಗಿ ಎಸ್‌ಸಿಪಿ- ಟಿಎಸ್‌ಪಿ ಅನುದಾನ ಬಳಸುವ ಮೂಲಕ ಬಡವರ ಹೊಲಸು, ಎಂಜಲು ತಿನ್ನುವ ಕೆಲಸವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಎನ್‌.ಮೂರ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- ಗ್ಯಾರಂಟಿ ಯೋಜನೆಗೆ ಎಸ್‌ಸಿಪಿ-ಟಿಎಸ್‌ಪಿ ಅನುದಾನ ಬಳಕೆ ಹಗಲು ದರೋಡೆ: ದಸಂಸ ಎನ್.ಮೂರ್ತಿ ಆಕ್ರೋಶ - - - ಕನ್ನಡಪ್ರಭ ವಾರ್ತೆ ದಾವಣಗೆರೆ ಪಂಚ ಗ್ಯಾರಂಟಿ ಯೋಜನೆಗಾಗಿ ಎಸ್‌ಸಿಪಿ- ಟಿಎಸ್‌ಪಿ ಅನುದಾನ ಬಳಸುವ ಮೂಲಕ ಬಡವರ ಹೊಲಸು, ಎಂಜಲು ತಿನ್ನುವ ಕೆಲಸವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಎನ್‌.ಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದ ಪರಿಶಿಷ್ಟರಿಗೆ ಮೀಸಲಾದ ಹಣವನ್ನು ತನ್ನ ಪಂಚ ಗ್ಯಾರಂಟಿ ಯೋಜನೆಗಾಗಿ ಬಳಸಿ, ದಲಿತ ಸಮಾಜಕ್ಕೆ ನಂಬಿಕೆ ದ್ರೋಹ, ವಂಚನೆ, ಹಗಲು ದರೋಡೆ ಮಾಡುತ್ತಿದೆ ಎಂದು ದೂರಿದರು.

ಸಿದ್ದರಾಮಯ್ಯ ತಮ್ಮನ್ನು ತಾವು ಸಾಮಾಜಿಕ ನ್ಯಾಯದ ಹರಿಕಾರ, ಅಹಿಂದ ಉದ್ಧಾರಕನೆಂದು ಘೋಷಿಸಿಕೊಂಡಿದ್ದಾರೆ. ಈಗ ಕೋಮುವಾದಿಯಾಗಿದ್ದಾರೆ. ದಲಿತರ ಅಭಿವೃದ್ಧಿಗೆಂದು ಮೀಸಲಿಟ್ಟ ಅನುದಾನವನ್ನು ಚುನಾವಣೆಯಲ್ಲಿ ಮತ ಗಳಿಕೆಗೆ ಬಳಸುವ ಚಾಳಿಯನ್ನು ತೋರಿದ್ದಾರೆ. ಎಸ್‌ಸಿಪಿ- ಟಿಎಸ್‌ಪಿ ಅನುದಾನವನ್ನು ಹುಲಿ ಸಂರಕ್ಷಣೆಗೆ ಬಳಸುವ ಮೂಲಕ ಹುಲಿಗಳು ದಷ್ಟಪುಷ್ಟವಾಗಿರಲೆಂದು ಬಯಸುವ ಕಾಂಗ್ರೆಸ್ ಸರ್ಕಾರ ದಲಿತ ಸಮುದಾಯ ಬೀದಿಗೆ ಬರುವಂತೆ ಮಾಡಿದೆ ಎಂದು ಆರೋಪಿಸಿದರು.

ಎಸ್‌ಸಿಪಿ- ಟಿಎಸ್‌ಪಿ ಅನುದಾನವನ್ನು ಲೋಕೋಪಯೋಗಿ, ನೀರಾವರಿ, ಸಾರಿಗೆ, ಇಂಧನ ಇಲಾಖೆ, ರಸ್ತೆ, ಸೇತುವೆ, ಡ್ಯಾಂಗಳಿಗೆ ಬಳಸಲಾಗುತ್ತಿದೆ. ಈ ಬಗ್ಗೆ ಪ್ರಶ್ನಿಸಿದರೆ ದಲಿತರು ರಸ್ತೆ, ಸೇತುವೆ ಮೇಲೆ ಅಡ್ಡಾಡುವುದಿಲ್ಲವೇ ಅಂತಾ ಉಡಾಫೆಯಾಗಿ ಆಳುವವರು ಪ್ರಶ್ನಿಸುತ್ತಾರೆ. ಸಿದ್ದರಾಮಯ್ಯಗೆ ಹುಲಿಗಳ ಮೇಲಿನ ಮೇಲಿನ ಕಾಳಜಿ ದಲಿತರ ಮೇಲೆಯೇ ಇಲ್ಲ. 2014ರಿಂದ 2025ರವರೆಗೆ ಒಟ್ಟು ₹11 ಲಕ್ಷ ಕೋಟಿ ಅನುದಾನವನ್ನು ಎಸ್‌ಸಿಪಿ- ಟಿಎಸ್‌ಪಿಯಡಿ ಬಿಡುಗಡೆ ಮಾಡಿದ್ದಾಗಿ ಹೇಳಿದರೂ, ಖರ್ಚು ಮಾಡಿದ್ದು ಮಾತ್ರ ಕೇವಲ ₹39 ಸಾವಿರ ಕೋಟಿ ಎಂದು ದೂರಿದರು.

ಹಣ ಖರ್ಚು ಮಾಡಿದ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಲಿ. 2023ರಲ್ಲಿ ಎಸ್‌ಸಿಪಿ-ಟಿಎಸ್‌ಪಿಯಿಂದ ₹11 ಸಾವಿರ ಕೋಟಿ, 2024ರಲ್ಲಿ ₹14,282 ಕೋಟಿ ಹಾಗೂ ಮಾ.7ರಂದು ಮಂಡಿಸುವ ಬಜೆಟ್‌ಗೆ ₹14,480 ಕೋಟಿ ಅನುದಾನ ಬಳಸಲು ಮುಂದಾಗಿದ್ದಾರೆ. ದಲಿತರ ಅಭಿವೃದ್ಧಿಯೆಂದು ಹೇಳುವ ಕಾಂಗ್ರೆಸ್ ಸರ್ಕಾರ ಮಾತ್ರ ಒಂದೇ ಒಂದು ದಲಿತರ ಪರ ಕಾರ್ಯಕ್ರಮ ಜಾರಿಗೆ ತಂದಿಲ್ಲ. ಇನ್ನು ಪರಿಶಿಷ್ಟ ಸಮುದಾಯಕ್ಕೆ ಸೇರಿದ ಸಚಿವರು, ಶಾಸಕರೇ ಈ ಅನುದಾನ ಬಳಕೆ ಬಗ್ಗೆ ಸರ್ಕಾರವನ್ನು ಪ್ರಶ್ನಿಸದಂತಾಗಿದ್ದಾರೆ. ಆಡಳಿತ- ವಿಪಕ್ಷ ಎರಡೂ ಪಕ್ಷದ ದಲಿತ ಶಾಸಕರು ಮೌನವಾಗಿದ್ದಾರೆ ಎಂದು ಕಿಡಿಕಾರಿದರು.

ಸಮಿತಿ ಜಿಲ್ಲಾಧ್ಯಕ್ಷ ಎಚ್.ಮಂಜುನಾಥ, ಆರ್.ಯಶವಂತ, ಪುಲ್ಲಯ್ಯ, ಶಶಿಧರ, ಬೈಲಹೊನ್ನಯ್ಯ, ನವೀನ, ಸಂತೋಷ ಇತರರು ಇದ್ದರು.

- - -

ಬಾಕ್ಸ್‌

* ಡೋಂಗಿ ಸಾಮಾಜಿಕ ನ್ಯಾಯದ ಹರಿಹಾರ ಸಿದ್ದರಾಮಯ್ಯ

ಸಿದ್ದರಾಮಯ್ಯರಲ್ಲಿ ಸಾಮಾಜಿಕ ನ್ಯಾಯವೇ ಕಾಣೆಯಾಗಿದೆ. ಸಿದ್ದರಾಮಯ್ಯ ಡೋಂಗಿ ಸಾಮಾಜಿಕ ನ್ಯಾಯದ ಹರಿಹಾರ, ಡೋಂಗಿ ಸಮಾಜವಾದಿಯಾಗಿದ್ದಾರೆ. ಇಂತಹ ಸಿಎಂ ಕರುಣೆಯಿಂದಲೇ ದಲಿತ ಸಮುದಾಯವನ್ನೇ ಕೊಲ್ಲುತ್ತಿದ್ದಾರೆ ಎಂದು ಎನ್‌.ಮೂರ್ತಿ ಟೀಕಿಸಿದರು.

2025- 26ನೇ ಸಾಲಿನ ಬಜೆಟ್‌ನಲ್ಲಿ ಪರಿಶಿಷ್ಟರ ಜನಸಂಖ್ಯೆ ಆಧರಿಸಿ, ಹೆಚ್ಚು ಅನುದಾನ ನೀಡಬೇಕು, ಹೆಚ್ಚುವರಿ ಅನುದಾನ ಮೀಸಲಿಡಬೇಕು. ದಲಿತಪರ ಸಂಘಟನೆಗಳ ನಾಯಕರಿಗೆ ಅಧಿಕಾರ, ಸ್ಥಾನಮಾನದ ಆಮಿಷವೊಡ್ಡಿ, ಹೋರಾಟದ ಹಾದಿ ತಪ್ಪಿಸುವ ಕೆಲಸ ಸಿದ್ದರಾಮಯ್ಯ ಮಾಡಿದ್ದಾರೆ. ಎಸ್‌ಸಿಪಿ-ಟಿಎಸ್‌ಪಿ ಕಾಯ್ದೆಯ 7 ಬಿ ಮತ್ತು 7 ಸಿ ರದ್ದುಪಡಿಸಬೇಕು. ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ದಾವಣಗೆರೆಯಲ್ಲಿ ಬೃಹತ್ ಬೈಕ್ ರ್ಯಾಲಿ ಮೂಲಕ ಜಿಲ್ಲಾಡಳಿತ ಮೂಲಕ ರಾಜ್ಯ ಸರ್ಕಾರ, ರಾಜ್ಯಪಾಲರು, ಕೇಂದ್ರ ಸರ್ಕಾರ, ರಾಷ್ಟ್ರಪತಿಗಳಿಗೆ ಮನವಿ ಅರ್ಪಿಸುತ್ತಿದ್ದೇವೆ. ಬೇಡಿಕೆಗಳನ್ನು ಈಡೇರಿಸದಿದ್ದರೆ, ರಾಜ್ಯವ್ಯಾಪಿ ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿ ಎನ್.ಮೂರ್ತಿ ಎಚ್ಚರಿಸಿದರು.

- - - -3ಕೆಡಿವಿಜಿ6.ಜೆಪಿಜಿ: ದಾವಣಗೆರೆಯಲ್ಲಿ ಸೋಮವಾರ ಡಿಎಸ್‌ಎಸ್‌ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಎನ್‌.ಮೂರ್ತಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Share this article