ಗಜೇಂದ್ರಗಡ: ಪಟ್ಟಣದ ಡಿ. ದೇವರಾಜ ಅರಸು ಬಾಲಕರ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ಎಸ್‌ಎಫ್‌ಐ ತಾಲೂಕು ಸಮಿತಿ ನೇತೃತ್ವದಲ್ಲಿ ರಾಜ್ಯಮಟ್ಟದ ಅಧ್ಯಯನ ಶಿಬಿರದ ಕರಪತ್ರ ಬಿಡುಗಡೆ ಮಾಡಲಾಯಿತು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಜೆಟ್‌ನಲ್ಲಿ ಶಿಕ್ಷಣಕ್ಕೆ ವರ್ಷದಿಂದ ವರ್ಷಕ್ಕೆ ಅನುದಾನವನ್ನು ಕಡಿತ ಮಾಡುತ್ತಾ, ಶಿಕ್ಷಣವನ್ನು ಬಲಹೀನಗೊಳಿಸುತ್ತಿದೆ. ಪರಿಣಾಮ ಸರ್ಕಾರಿ ಶಾಲೆಗಳನ್ನು ಮುಚ್ಚುವ, ಇಲ್ಲವೆ ಇತರ ಶಾಲೆಗಳೊಂದಿಗೆ ವಿಲೀನಗೊಳಿಸಿ, ವಿದ್ಯಾರ್ಥಿಗಳು ಬಲವಂತವಾಗಿ ಖಾಸಗಿ ಶಾಲೆಗಳತ್ತ ಮುಖಮಾಡುವ ಅನಿವಾರ್ಯ ಸ್ಥಿತಿಯನ್ನು ಸರ್ಕಾರ ಸೃಷ್ಟಿ ಮಾಡುತ್ತಿವೆ ಎಂದು ದೂರಿದರು.
ಶಿಕ್ಷಣದ ಹಕ್ಕುಗಳ ಪರವಾಗಿ ಮಾತನಾಡುವ ಉಪನ್ಯಾಸಕರನ್ನು ಹಾಗೂ ಪ್ರಶ್ನೆ ಮಾಡುವ ವಿದ್ಯಾರ್ಥಿಗಳ ಮೇಲೆ ಹಿಂಸಾತ್ಮಕ ದಾಳಿಗಳನ್ನು ನಡೆಸಲಾಗುತ್ತಿದೆ. ಶೈಕ್ಷಣಿಕ ಕ್ಷೇತ್ರದ ಮೇಲೆ ನಡೆಯುತ್ತಿರುವ ಈ ಎಲ್ಲ ದಾಳಿಗಳನ್ನು ಹಿಮ್ಮೆಟ್ಟಿಸಲು ಹಾಗೂ ಶಿಕ್ಷಣ ಸಾರ್ವತ್ರೀಕರಣಗೊಳಿಸಲು, ವಿದ್ಯಾರ್ಥಿಗಳಲ್ಲಿ ಶಾಂತಿ, ಸೌಹಾರ್ದತೆ, ಐಕ್ಯತೆ ಹಾಗೂ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಗಾಗಿ, ಸಾರ್ವಜನಿಕ ಶಿಕ್ಷಣ ಬಲಪಡಿಸಲು ಆಗ್ರಹಿಸಿ, ವಿದ್ಯಾರ್ಥಿ ಚಳವಳಿಯನ್ನು ಬಲಿಷ್ಠಗೊಳಿಸಲು ರಾಮನಗರ ಜಿಲ್ಲೆಯ ಜಾನಪದ ಲೋಕದ ದೊಡ್ಡಮನಿ, ಮಂಟಪ ಸಭಾಂಗಣದಲ್ಲಿ ಮೇ ೨೯ರಿಂದ ಜೂ. ೧ರ ವರೆಗೆ ನಾಲ್ಕು ದಿನಗಳ ಕಾಲ ರಾಜ್ಯಮಟ್ಟದ ಸೈದ್ಧಾಂತಿಕ ಅಧ್ಯಯನ ಶಿಬಿರ ನಡೆಸಲಾಗುತ್ತದೆ ಎಂದರು.ಶಿಬಿರವನ್ನು ಅಧ್ಯಕ್ಷರು, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಉದ್ಘಾಟಿಸಲಿದ್ದು, ಶಿಬಿರದ ಸಮಾರೋಪಕ್ಕೆ ಹಿರಿಯ ನಟ ಡಾ. ಅಶೋಕ ಆಗಮಿಸಲಿದ್ದಾರೆ. ವಿವಿಧ ಜಿಲ್ಲೆಗಳಿಂದ 200ಕ್ಕೂ ಹೆಚ್ಚು ವಿದ್ಯಾರ್ಥಿ ಮುಖಂಡರು, ಶಿಬಿರಾರ್ಥಿಗಳು ಭಾಗವಹಿಸಲಿದ್ದಾರೆ ಎಂದರು.
ಅನಿಲ ರಾಠೋಡ, ಮಾಸಪ್ಪ ಮ್ಯಾಗಲಮನಿ, ಕೃಷ್ಣ ತಳವಾರ, ರಮೇಶ ಭಜಂತ್ರಿ, ಯಮನೂರಪ್ಪ ಕಂಬಳಿ, ಮಂಜುನಾಥ ತೇಗ್ಗಿ, ಭೀಮೇಶ ಕರೆಕಲ್ಲ ಇದ್ದರು.