ಡಬಲ್ ಎಂಜಿನ್ ಸರ್ಕಾರದ ಭರವಸೆ ಹುಸಿ

KannadaprabhaNewsNetwork |  
Published : Apr 21, 2024, 02:26 AM IST
(ಪೋಟೊ 20 ಬಿಕೆಟಿ7,ಮುಚಖಂಡಿ ಗ್ರಾಮದಲ್ಲಿ ಆಯೋಜಿಸಿದ್ದ ಸಭೆಯಲ್ಲಿಮಲ್ಲಿಕಾರ್ಜುನ ಚರಂತಿಮಠ, ರುದ್ರಪ್ಪ ಲಮಾಣಿ, ಸಂಯುಕ್ತ ಪಾಟೀ, ಬಾಯಕ್ಕ ಮೇಟಿ, ಕಾಂತಾ ಭಾಗವಹಿಸಿದ್ದರು). | Kannada Prabha

ಸಾರಾಂಶ

ತಾವು ಆಶೀರ್ವಾದ ಮಾಡಿದರೆ ಯುಕೆಪಿ ಸಂತ್ರಸ್ತರ ಸಮಸ್ಯೆ ಪರಿಹಾರಕ್ಕೆ ಮೊದಲ ಆದ್ಯತೆ ನೀಡುತ್ತೇನೆ ಎಂದು ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ ಬಿಜೆಪಿ ಡಬಲ್ ಎಂಜಿನ್ ಸರ್ಕಾರದ ಭರವಸೆಗಳು ಹುಸಿಯಾಗಿವೆ. ಕೇಂದ್ರ ಮತ್ತು ರಾಜ್ಯ ಎರಡೂ ಕಡೆ ಬಿಜೆಪಿ ಸರ್ಕಾರ ಇದ್ದರೆ ರಾಜ್ಯಕ್ಕೆ ಹೆಚ್ಚು ಅನುದಾನ ತರಲು ಸಾಧ್ಯ ಎಂದು ಬಿಜೆಪಿ ಮುಖಂಡರು ಭರವಸೆ ನೀಡಿದ್ದರು. ಆದರೆ, ಎರಡೂ ಕಡೆ ಅಧಿಕಾರ ಹಿಡಿದರೂ ಯುಕೆಪಿ ಸಂತ್ರಸ್ತರ ಸಮಸ್ಯೆ ಪರಿಹರಿಸಲು ಸಾಧ್ಯವಾಗಲಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಟೀಕಿಸಿದರು.ಮುಚಖಂಡಿ ತಾಂಡಾದಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ತಾವು ಆಶೀರ್ವಾದ ಮಾಡಿದರೆ ಯುಕೆಪಿ ಸಂತ್ರಸ್ತರ ಸಮಸ್ಯೆ ಪರಿಹಾರಕ್ಕೆ ಮೊದಲ ಆದ್ಯತೆ ನೀಡುತ್ತೇನೆ ಎಂದು ಭರವಸೆ ನೀಡಿದರು. ಬಾಗಲಕೋಟೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ಕನಸನ್ನು ಹೊಂದಿದ್ದೇನೆ. ಉದ್ಯೋಗ ಸೃಷ್ಟಿಗೆ ಹೊಸ ಹೊಸ ಕೈಗಾರಿಕೆಗಳ ಸ್ಥಾಪನೆ, ಜವಳಿ ಪಾರ್ಕ ನಿರ್ಮಾಣ, ನೇಕಾರರ ಸಮಸ್ಯೆ ಪರಿಹಾರ ಸೇರಿದಂತೆ ಹಲವಾರು ಕನಸುಗಳನ್ನು ಹೊಂದಿದ್ದೇನೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ವಿಶೇಷ ಅನುದಾನ ತಂದು ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿಗಳಿಗೆ ಬಜೆಟ್‌ನಲ್ಲಿ ₹5,400 ಕೋಟಿ ಘೋಷಣೆ ಮಾಡಿತ್ತು. ಆದರೆ, ಈ ಅನುದಾನ ಬಿಡುಗಡೆ ಮಾಡಲೇ ಇಲ್ಲ. ಕೇಂದ್ರ ಸರ್ಕಾರ ಕೊಟ್ಟಿದ್ದ ಭರವಸೆಗಳೆಲ್ಲವೂ ಹುಸಿಯಾಗಿವೆ.

ವಾಸಿಸುವವರಿಗೆ ಮನೆಯ ಹಕ್ಕು ಪತ್ರ ನೀಡಿದ ಹೆಗ್ಗಳಿಕೆಯ ಮೊದಲ ಪ್ರಕರಣ ಜಾಲಿಹಾಳ ತಾಂಡದ್ದು. ಇದು ಕರ್ನಾಟಕದಲ್ಲೇ ಮೊದಲು. ಬಂಜಾರ ಸಮಾಜ ಬದುಕು ಕಟ್ಟಿಕೊಳ್ಳಲು ಗುಳೇ ಹೋಗುವುದು ಸಾಮಾನ್ಯವಾಗಿದೆ. ಅವರಿಗೆ ಜಿಲ್ಲೆಯಲ್ಲೇ ಉದ್ಯೋಗ ಒದಗಿಸಿದರೆ ಗುಳೆ ಹೋಗುವ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಹೇಳಿದರು.

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಲಂಬಾಣಿ ಸಮಾಜಕ್ಕೆ ನೀಡಿರುವ ಕೊಡುಗೆಗಳ ಬಗ್ಗೆ ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ವಿವರಿಸಿದರು.

ಜಿಪಂ ಉಪಾಧ್ಯಕ್ಷೆ ಬಾಯಕ್ಕ ಮೇಟಿ ಮಾತನಾಡಿ, ಲೋಕಸಭೆಯಲ್ಲಿ ಜಿಲ್ಲೆಯ ಪರವಾಗಿ ಧ್ವನಿ ಎತ್ತಲು ಸಂಯುಕ್ತಾ ಪಾಟೀಲರನ್ನು ಬಹುಮತದಿಂದ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು. ಲಂಬಾಣಿ ಸಮಾಜ ಕಾಂಗ್ರೆಸ್‌ಗೆ ನಿಷ್ಠೆ ಹೊಂದಿದ್ದು, ನಿಮ್ಮನ್ನು ಅತ್ಯಧಿಕ ಮತಗಳ ಅಂತರದಿಂದ ಆಯ್ಕೆ ಮಾಡುತ್ತೇವೆ. ಸಂಸದರಾಗಿ ಆಯ್ಕೆಯಾದ ನಂತರ ತಾಂಡಾಗಳ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಬೇಕು ಎಂದು ಸಮಾಜದ ಮುಖಂಡರು ಮನವಿ ಮಾಡಿದರು.

ಮುಚಕಿಂಡಿ ತಾಂಡಾ ಪ್ರಚಾರ ಸಭೆಗೂ ಮುನ್ನ ಬಾಗಲಕೋಟೆಯ ವಿದ್ಯಾಗಿರಿಯಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. ಕೆಪಿಸಿಸಿ ಉಪಾಧ್ಯಕ್ಷ ಅಜಯಕುಮಾರ ಸರನಾಯಕ, ಕೌಶಲಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯ್ಕ, ಮುತ್ತು ಜೋಳದ, ಶ್ರೀಶೈಲ ಕರಿಶಂಕರ, ಮಲ್ಲಿಕಾರ್ಜುನ ಚರಂತಿಮಠ, ಶಂಕರ ತಪಶೆಟ್ಟಿ ಮತ್ತಿತರರು ಇದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌