ಸೊರಬ: ಬಡವರು ಆರ್ಥಿಕವಾಗಿ ಪ್ರಗತಿ ಹೊಂದಬೇಕು ಎನ್ನುವುದು ರಾಜ್ಯ ಸರ್ಕಾರದ ನಿಲುವು. ಈ ಕಾರಣದಿಂದ ಬಡವರಿಗಾಗಿ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ರೂಪಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನದೊಂದಿಗೆ ಮುಖ್ಯಮಂತ್ರಿಗಳು ಶ್ರಮಿಸುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.ತಾಲೂಕಿನ ಕುಪ್ಪಗಡ್ಡೆ ಗ್ರಾಮದಲ್ಲಿ ಗ್ರಾಮಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಜಿಪಂ, ತಾಪಂ, ಮೆಸ್ಕಾಂ, ಕುಪ್ಪಗಡ್ಡೆ ಗ್ರಾಪಂ ವತಿಯಿಂದ ಹಮ್ಮಿಕೊಂಡಿದ್ದ ಗ್ರಾಪಂ ಕಟ್ಟಡದ ನೂತನ ಕೊಠಡಿ ಹಾಗೂ ಮೆಸ್ಕಾಂನ ನೂತನ ಶಾಖಾ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರದ ಇನ್ನುಳಿದ ಅವಧಿಯಲ್ಲಿ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಅನುದಾನ ತರುವ ಪ್ರಯತ್ನ ಮಾಡುತ್ತೇನೆ. ತಾಲೂಕಿನಲ್ಲಿ ಅಭಿವೃದ್ಧಿ ವೇಗ ಪಡೆದಿದ್ದು, ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗಿದೆ ಎಂದ ಅವರು, ತಾಲೂಕಿನಲ್ಲಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಪ್ರತಿ ತಿಂಗಳು ೧೦ ಕೋಟಿ ರು. ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ೫೬ ಸಾವಿರ ಕೋಟಿ ರು. ಮೊತ್ತದ ಗ್ಯಾರಂಟಿ ಯೋಜನೆಗಳ ಮೂಲಕ ಬಡವರು ಲಾಭ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.ತಾಲೂಕಿನ ಉಳವಿ, ಕುಪ್ಪಗಡ್ಡೆ ಹಾಗೂ ಮಾವಲಿ ಗ್ರಿಡ್ ನಿರ್ಮಾಣ ಕಾರ್ಯಕ್ಕೆ ಕ್ರಮ ಕೈಗೊಳ್ಳಲಾಗಿತ್ತು. ಈಗಾಗಲೇ ಮಾವಲಿ ಹಾಗೂ ಉಳವಿ ಗ್ರಿಡ್ ನಿರ್ಮಾಣವಾಗಿದ್ದು, ಉಳವಿ ಹೋಬಳಿಯ ಇಂಡಿವಳ್ಳಿ ಗ್ರಾಮ ಹಾಗೂ ಕುಪ್ಪಗಡ್ಡೆ ಗ್ರಾಮದಲ್ಲಿ ೫೬ ಕೋಟಿ ರು. ವೆಚ್ಚದಲ್ಲಿ ನಿರ್ಮಾಣಕ್ಕೆ ಟೆಂಡರ್ ಕರೆದು ಪೂರ್ವ ತಯಾರಿ ನಡೆಸಲು ಸೂಚಿಸಲಾಗಿದೆ. ಇದರಲ್ಲಿ ಕುಪ್ಪಗಡ್ಡೆ ಗ್ರಿಡ್ ನಿರ್ಮಾಣಕ್ಕೆ ಅರಣ್ಯ ಇಲಾಖೆಯಿಂದ ಅನುಮತಿ ಸಿಕ್ಕಿದೆ. ೬ ಫೀಡರ್ ಗ್ರಿಡ್ ನಿರ್ಮಾಣಕ್ಕೆ ಅವಕಾಶವಿತ್ತು. ಆದರೆ ಇದೀಗ ೨೦ ಫೀಡರ್ ಅಳವಡಿಕೆಗೆ ಅವಕಾಶ ಕಲ್ಪಿಸಲಾಗಿದೆ. ಹಂತ ಹಂತವಾಗಿ ಕ್ಷೇತ್ರದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದ್ದು, ರಸ್ತೆ ನಿರ್ಮಾಣಕ್ಕೆ ಮೊದಲು ಆದ್ಯತೆ ನೀಡಲಾಗುವುದು ಎಂದು ಹೇಳಿದರು.ಗ್ರಾಪಂ ಅಧ್ಯಕ್ಷ ಬಿ.ನೂರ್ ಅಹ್ಮದ್ ಅಧ್ಯಕ್ಷತೆ ಅಧ್ಯಕ್ಷತೆ ವಹಿಸಿದ್ದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿ ರಿಯಾಜ್ ಅಹ್ಮದ್, ಉಪಾಧ್ಯಕ್ಷೆ ಮಮತಾ, ಸದಸ್ಯರಾದ ಅನಿತಾ, ಲಲಿತಾ, ಮಮತಾ, ಮಲ್ಲಿಕಾರ್ಜುನ, ಮುಖಂಡರಾದ ಎಲ್.ಜಿ.ರಾಜಶೇಖರ್, ಪುರುಷೋತಮ, ಸದಾನಂದಗೌಡ, ತಾಪಂ ಮಾಜಿ ಅಧ್ಯಕ್ಷ ಎಚ್.ಗಣಪತಿ, ತಾಲೂಕು ಬಗರ್‌ಹುಕುಂ ಕಮಿಟಿ ಅಧ್ಯಕ್ಷ ಎಂ.ಡಿ.ಶೇಖರ್, ಭಾಸ್ಕರ ಬೆಂಗಳೂರು, ಸಂತೋಷ್, ಲಕ್ಷ್ಮಿ, ಪರಶುರಾಮ, ಯುವರಾಜ್, ರಾಜಶೇಖರ್ ಕೆರೆಕೊಪ್ಪ, ಆನವಟ್ಟಿ ಮೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ ನಾಯ್ಕ್, ಸುಮಾ ಇತರರಿದ್ದರು.ಸೊರಬ ತಾಲೂಕಿನ ಕುಪ್ಪಗಡ್ಡೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗ್ರಾಪಂ ಕಟ್ಟಡದ ನೂತನ ಕೊಠಡಿ ಹಾಗೂ ಮೆಸ್ಕಾಂನ ನೂತನ ಶಾಖಾ ಕಚೇರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿ ಮಾತನಾಡಿದರು.