ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಸರ್ಕಾರ ಎಚ್ಚರಿಕೆ ವಹಿಸಲಿ

KannadaprabhaNewsNetwork |  
Published : Jul 18, 2026, 12:15 AM IST
ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಸರ್ಕಾರ ಎಚ್ಚರಿಕೆ ವಹಿಸಲಿ ಮಹಿಳೆಯರ ಮೇಲಿನ ವರ್ತನೆ ಖಂಡಿಸಿ ಹಸಿರು ಸೇನೆ ಆಗ್ರಹ | Kannada Prabha

ಸಾರಾಂಶ

ಬಿಡದಿಯ ಟೌನ್‌ಶಿಪ್ ವಿಚಾರದಲ್ಲಿ ಮುಂದುವರಿಯಬೇಕು ಎಂದು ಅಖಿಲ ಕರ್ನಾಟಕ ಭ್ರಷ್ಟಾಚಾರ ನಿರ್ಮೂಲನೆ ರೈತ ಸಂಘ ಹಾಗೂ ಹಸಿರು ಸೇನೆ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಮಹಾದೇವಿ ಕುವಿಲ್ಗೋಡು ತಿಳಿಸಿದರು. ಈ ಕುರಿತು ಮಹಿಳಾ ಆಯೋಗ ಹಾಗೂ ಮಹಿಳಾ ಪ್ರತಿನಿಧಿಗಳು ಯಾಕೆ ಧ್ವನಿ ಎತ್ತುತ್ತಿಲ್ಲ ಎಂದು ಪ್ರಶ್ನಿಸಿದರು. ಅಲ್ಲಿನ ರೈತರಿಗೆ ಭೂಸ್ವಾಧೀನ ಬೇಡ, ಅವರಿಗೆ ತಮ್ಮ ಫಲವತ್ತಾದ ಜಮೀನು ಬೇಕು. ಅದರಲ್ಲಿ ನಾವು ಕೃಷಿ ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದರೂ, ಅನ್ಯಾಯವಾಗಿ ಬಲವಂತದ ಭೂಸ್ವಾಧೀನಕ್ಕೆ ಮುಂದಾಗಿರುವುದು ಸರಿಯಲ್ಲ ಎಂದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಹೆಣ್ಣು ಒಲಿದರೆ ನಾರಿ, ಮುನಿದರೆ ಮಾರಿ ಎಂಬುದನ್ನು ಸರ್ಕಾರ ಮನದಲ್ಲಿಟ್ಟುಕೊಂಡು ಬಿಡದಿಯ ಟೌನ್‌ಶಿಪ್ ವಿಚಾರದಲ್ಲಿ ಮುಂದುವರಿಯಬೇಕು ಎಂದು ಅಖಿಲ ಕರ್ನಾಟಕ ಭ್ರಷ್ಟಾಚಾರ ನಿರ್ಮೂಲನೆ ರೈತ ಸಂಘ ಹಾಗೂ ಹಸಿರು ಸೇನೆ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಮಹಾದೇವಿ ಕುವಿಲ್ಗೋಡು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲರಿಗಿಂತ ಮುಖ್ಯವಾಗಿ ಹೆಣ್ಣು ಮಕ್ಕಳಲ್ಲಿ ತಾಳ್ಮೆ ಹೆಚ್ಚಿರುತ್ತದೆ. ಆದರೆ ತಾಳ್ಮೆಯ ಕಟ್ಟೆ ಒಡೆದ ನಂತರ ಬಿಡದಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಅದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ಬಿಡದಿಯಲ್ಲಿ ನಡೆಯುತ್ತಿರುವ ಅನ್ಯಾಯವನ್ನು ಖಂಡಿಸಲು ವಿರೋಧ ಪಕ್ಷಗಳು ಮೌನ ವಹಿಸಿವೆ. ಚಿಕ್ಕ- ಚಿಕ್ಕ ವಿಷಯವನ್ನೂ ದೊಡ್ಡದಾಗಿ ಬಿಂಬಿಸುವ ಪ್ರತಿಪಕ್ಷಗಳಿಗೆ ಬಿಡದಿಯಲ್ಲಿ ನಡೆಯುತ್ತಿರುವ ಅನ್ಯಾಯ ಕಾಣಿಸುತ್ತಿಲ್ಲವೇ ಎಂದು ಪ್ರಶ್ನಿಸಿದರು. ಮಹಿಳೆಯರು ಹಾಗೂ ರೈತರಿಗೆ ಯಾವುದೇ ಪೂರ್ವ ನೋಟಿಸ್ ಜಾರಿ ಮಾಡದೆ ಅಧಿಕಾರಿಗಳು ರೈತರ ಹೊಲಗಳಿಗೆ ನುಗ್ಗಿರುವುದು ಮೊದಲನೇ ತಪ್ಪು. ರೈತರು ಈ ಕುರಿತು ಎಫ್‌ಐಆರ್‌ ದಾಖಲಿಸಬೇಕಾಗಿತ್ತು. ಮಹಿಳೆಯರನ್ನು ಯಾವುದೇ ಮುಲಾಜಿಲ್ಲದೆ ಎಳೆದಾಡಲಾಗುತ್ತಿದೆ. ಈ ಕುರಿತು ಮಹಿಳಾ ಆಯೋಗ ಹಾಗೂ ಮಹಿಳಾ ಪ್ರತಿನಿಧಿಗಳು ಯಾಕೆ ಧ್ವನಿ ಎತ್ತುತ್ತಿಲ್ಲ ಎಂದು ಪ್ರಶ್ನಿಸಿದರು. ಅಲ್ಲಿನ ರೈತರಿಗೆ ಭೂಸ್ವಾಧೀನ ಬೇಡ, ಅವರಿಗೆ ತಮ್ಮ ಫಲವತ್ತಾದ ಜಮೀನು ಬೇಕು. ಅದರಲ್ಲಿ ನಾವು ಕೃಷಿ ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದರೂ, ಅನ್ಯಾಯವಾಗಿ ಬಲವಂತದ ಭೂಸ್ವಾಧೀನಕ್ಕೆ ಮುಂದಾಗಿರುವುದು ಸರಿಯಲ್ಲ. ಕೆಲವರ ಆಸ್ತಿಯ ಮೌಲ್ಯ ಹೆಚ್ಚಿಸುವ ಉದ್ದೇಶದಿಂದ ಸ್ಮಾರ್ಟ್‌ ಸಿಟಿ ನಿರ್ಮಿಸಲು ಹೊರಟಿದ್ದಾರೆ ಎಂದು ಆರೋಪಿಸಿದರು.

ಸರ್ಕಾರಕ್ಕೆ ಸ್ಮಾರ್ಟ್‌ ಸಿಟಿ ನಿರ್ಮಿಸುವ ಉದ್ದೇಶವೇ ಇದ್ದರೆ ಉತ್ತರ ಕರ್ನಾಟಕದಲ್ಲಿ ಸರ್ಕಾರಕ್ಕೆ ಸೇರಿರುವ ಸಾಕಷ್ಟು ಗೋಮಾಳ ಜಾಗಗಳಿವೆ. ಅಲ್ಲಿನ ರೈತರು ಸಹ ಅಭಿವೃದ್ಧಿಗಾಗಿ ಜಮೀನು ನೀಡಲು ಸಿದ್ಧರಿದ್ದಾರೆ. ಉತ್ತರ ಕರ್ನಾಟಕವನ್ನು ಅಭಿವೃದ್ಧಿಪಡಿಸಿ. ಅದನ್ನು ಬಿಟ್ಟು ರೈತರಿಗೆ ಬೇಡವಾದರೂ ಇಲ್ಲಿ ಸ್ಮಾರ್ಟ್ ಸಿಟಿ ಮಾಡಲು ಹೊರಟಿದ್ದೀರಿ. ಎರಡನೇ ಬೆಂಗಳೂರನ್ನು ಮಾಡಲು ಹೊರಟಿರುವ ಡಿ.ಕೆ. ಶಿವಕುಮಾರ್‌ ಅವರೇ, ಎರಡನೇ ಬೆಂಗಳೂರನ್ನು ಬೆಂಗಳೂರಿನ ಸುತ್ತಮುತ್ತಲೇ ಮಾಡುವ ಅಗತ್ಯವಿಲ್ಲ. ಕರ್ನಾಟಕ ಎಂದರೆ ಬೆಂಗಳೂರು ಮಾತ್ರವಲ್ಲ; ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಇತರ ಭಾಗಗಳ ಅಭಿವೃದ್ಧಿಗೂ ಆದ್ಯತೆ ನೀಡಬೇಕು. ಅಲ್ಲಿನ ವಿದ್ಯಾವಂತರು ಉದ್ಯೋಗಕ್ಕಾಗಿ ಬೆಂಗಳೂರಿಗೆ ವಲಸೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ವಯಸ್ಸಾದ ತಂದೆ-ತಾಯಿಯನ್ನು ಬಿಟ್ಟು ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಈ ರೀತಿಯ ಅಸಮಾನ ಅಭಿವೃದ್ಧಿ ಮುಂದುವರಿದರೆ ಈಗಾಗಲೇ ನಡೆಯುತ್ತಿರುವ ಪ್ರತ್ಯೇಕ ರಾಜ್ಯ ಹೋರಾಟ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.ಅಖಿಲ ಕರ್ನಾಟಕ ಭ್ರಷ್ಟಾಚಾರ ನಿರ್ಮೂಲನೆ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಿ. ಎಚ್. ನವಲಗುಂದ್ ಮಾತನಾಡಿ ನಮ್ಮ ಕರ್ನಾಟಕ ರಾಜ್ಯ ಬರಗಾಲದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರ ತಕ್ಷಣ ಬರಗಾಲ ಘೋಷಿಸಿ ಸೂಕ್ತ ಕ್ರಮ ಕೈಗೊಂಡು ರೈತರಿಗೆ ಅಗತ್ಯ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಸಂಪೂರ್ಣ ಮಳೆಯ ಕೊರತೆಯಿಂದ ಮಳೆಯಾಶ್ರಿತ ಕೃಷಿ ನಡೆಸುತ್ತಿರುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಪರಿಹಾರ ವ್ಯವಸ್ಥೆ ಕಲ್ಪಿಸಬೇಕು ಎಂದು ಕೋರಿದರು. ಅದೇ ರೀತಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ಘೋಷಿಸಿರುವುದು ಸ್ವಾಗತಾರ್ಹ. ಅದನ್ನು ಆದಷ್ಟು ಬೇಗ ಜಾರಿಗೆ ತಂದು ರೈತರಿಗೆ ಪ್ರಯೋಜನವಾಗುವಂತೆ ಮಾಡಬೇಕು. ಎಂಎಸ್‌ಪಿ ದರದಲ್ಲಿ ಬೆಳೆ ಖರೀದಿ ಮಾಡುವ ಕುರಿತು ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಶಾಸಕರು ಗಮನಹರಿಸಿ, ಬೆಳೆ ಬರುವ ಮೊದಲೇ ಬೆಂಬಲ ಬೆಲೆ ಘೋಷಿಸುವಂತೆ ಒತ್ತಾಯಿಸಿದರು.

ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ದಯಾನಂದ್ ಪಾಟೀಲ್ ಅವರನ್ನು ಸಂಘಟನೆಯ ಶಿಸ್ತು ಹಾಗೂ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಸಂಘಟನೆಯಿಂದ ಉಚ್ಚಾಟಿಸಲಾಗಿದೆ. ಆದ್ದರಿಂದ ಅವರೊಂದಿಗೆ ಯಾವುದೇ ಅಧಿಕಾರಿಗಳು ಅಥವಾ ಸದಸ್ಯರು ಸಂಘಟನೆಯ ಹೆಸರಿನಲ್ಲಿ ವ್ಯವಹರಿಸಬಾರದು. ಸಂಘಟನೆಗೆ ಸಂಬಂಧಿಸಿದ ಯಾವುದೇ ವಿಷಯಗಳಿದ್ದರೂ ಜಿಲ್ಲಾಧ್ಯಕ್ಷ ಕುಮಾರ್‌ ಕೋಡಿಹಳ್ಳಿ ಅವರನ್ನು ಸಂಪರ್ಕಿಸುವಂತೆ ತಿಳಿಸಿದರು.ಈ ಸಂದರ್ಭದಲ್ಲಿ ಕಾರ್ಯಕರ್ತರಾದ ರೇಣುಕ ಮಣ್ಣೂರು, ಭಾಗ್ಯಶ್ರೀ, ಕುಮಾರ್‌ ಕೋಡಿಹಳ್ಳಿ, ಮಲ್ಲಿಕಾರ್ಜುನ್ ಮೈಲನಹಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬರ ನಿರ್ವಹಣೆಗೆ ರೈತರಿಗೆ ಸಲಹೆ
ಬೈಕ್‌ನ ಗಾಲಿಗೆ ಬುರ್ಕಾ ಸಿಲುಕಿ ಮಹಿಳೆ ಸಾವು