ಹೊಸ ಕೈಗಾರಿಕೆಗಳ ಸ್ಥಾಪನೆಗೆ ಸರ್ಕಾರ ಗಮನ ನೀಡಬೇಕು-ಶೆಟ್ಟರ್‌

KannadaprabhaNewsNetwork |  
Published : Mar 04, 2025, 12:32 AM IST
ಸಮಾರಂಭವನ್ನು ಮಾಜಿ ಸಿಎಂ, ಬೆಳಗಾವಿ ಸಂಸದ ಜಗದೀಶ ಶೆಟ್ಟರ ಧಾನ್ಯಗಳನ್ನು ತೂರುವ ಮೂಲಕ ಉದ್ಘಾಟಿಸಿದರು.  | Kannada Prabha

ಸಾರಾಂಶ

ಉತ್ತರ ಕರ್ನಾಟಕದಲ್ಲಿ ವಾಣಿಜ್ಯ ವಹಿವಾಟು ಸುಧಾರಣೆಗೆ ಅಂತಾರಾಷ್ಟ್ರೀಯ ವಿಮಾನ ನಿರ್ಮಾಣ ಸ್ಥಾಪನೆ ಮತ್ತು ಹೊಸ ಕೈಗಾರಿಕೆಗಳ ಸ್ಥಾಪನೆಗೆ ಸರ್ಕಾರ ಗಮನ ನೀಡಬೇಕು ಎಂದು ಮಾಜಿ ಸಿಎಂ, ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಹೇಳಿದರು.

ಮುಂಡರಗಿ: ಉತ್ತರ ಕರ್ನಾಟಕದಲ್ಲಿ ವಾಣಿಜ್ಯ ವಹಿವಾಟು ಸುಧಾರಣೆಗೆ ಅಂತಾರಾಷ್ಟ್ರೀಯ ವಿಮಾನ ನಿರ್ಮಾಣ ಸ್ಥಾಪನೆ ಮತ್ತು ಹೊಸ ಕೈಗಾರಿಕೆಗಳ ಸ್ಥಾಪನೆಗೆ ಸರ್ಕಾರ ಗಮನ ನೀಡಬೇಕು ಎಂದು ಮಾಜಿ ಸಿಎಂ, ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಹೇಳಿದರು.

ಅವರು ಮುಂಡರಗಿ ಪಟ್ಟಣದಲ್ಲಿ ಎಪಿಎಂಸಿ ವರ್ತಕರ ಸಂಘದ ವಾರ್ಷಿಕೋತ್ಸವ ಹಾಗೂ ಸಾಧಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಎಪಿಎಂಸಿಗಳಲ್ಲಿ ಕೋಲ್ಡ್ ಸ್ಟೋರೇಜ್ ಅವಶ್ಯಕತೆ ಇದ್ದು, ಈಗಾಗಲೇ ಆಯ್ಕೆಯಾದ ಸ್ಥಳಗಳಲ್ಲಿ 9 ಕೋಟಿಯ ಕೋಲ್ಡ್ ಸ್ಟೋರೇಜ್‌ಗೆ ಹಣ ಮಂಜೂರಾಗಿದೆ. ಈ ಭಾಗದಲ್ಲಿಯೂ ರಾಜ್ಯ, ಕೇಂದ್ರ ಸರಕಾರದ ಗಮನಕ್ಕೆ ತಂದು ಯೋಜನೆ ಅನುಷ್ಠಾನಕ್ಕೆ ಪ್ರಯತ್ನ ಮಾಡಲಾಗುವುದು ಎಂದರು. ನಗರ, ಪಟ್ಟಣಗಳಲ್ಲಿ ನಿರುದ್ಯೋಗ ಯುವಕರಿಗೆ ಉದ್ಯೋಗ ಅವಕಾಶಕ್ಕಾಗಿ ಕೈಗಾರಿಕೆಗಳ ಸ್ಥಾಪನೆಗೆ ಸರಕಾರ ಮುಂದಾದರೂ ಜಮೀನುಗಳ ಕೊರತೆ ಇದೆ. ಖಾಸಗಿ ಉದ್ಯಮಿಗಳು ಬೆಳೆಯಲು ಸರಕಾರ ಉತ್ತೇಜನ ನೀಡುವಂತೆ ಸರಕಾರವೂ ಉದ್ಯಮ ಸ್ಥಾಪನೆಗೆ ಕ್ರಮ ಕೈಗೊಳ್ಳುವಂತೆ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಅವರಿಗೆ ಮನವಿ ಮಾಡಲಾಗುವದು. ಕಾರಣ ಹೊಸ ಉದ್ಯಮಕ್ಕೆ ರಾಜ್ಯ ಸರಕಾರದ ಪಾತ್ರ ಪ್ರಮುಖವಾಗಿದೆ. ಈ ದಿಸೆಯಲ್ಲಿ ತಾವು ಸಂಸದ ಬಸವರಾಜ ಬೊಮ್ಮಾಯಿ ಅವರೊಂದಿಗೆ ಪ್ರಯತ್ನ ಮಾಡುವುದಾಗಿ ತಿಳಿಸಿದ ಅವರು, ಲೋಕಾಪುರ, ರಾಮದುರ್ಗ, ಸವದತ್ತಿ ಯಲ್ಲಮ್ಮದೇವಸ್ಥಾನಕ್ಕೆ ರೈಲ್ವೆ ಹೊಸ ಮಾರ್ಗಕ್ಕೆ ಸರ್ವೆಗೆ ಒತ್ತಾಯಿಸಲಾಗಿದೆ ಎಂದರು.

ಮಾಜಿ ಸಚಿವ ಕಳಕಪ ಬಂಡಿ ಮಾತನಾಡಿ, ಎಲ್ಲಿ ರೈತರಿಗೆ ಸಂಬಂಧಪಟ್ಟ ಎಪಿಎಂಸಿ ವಹಿವಾಟು ಹೆಚ್ಚು ಇರುತ್ತದೆಯೊ ಆ ಪ್ರದೇಶದಲ್ಲಿ ಅಭಿವೃದ್ಧಿಯಾಗುತ್ತದೆ. ರೈತರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ತರುವ ಮೂಲಕ ಬಂದ ಹಣದಲ್ಲಿ ಇತರ ಖರೀದಿ ವ್ಯಾಪಾರ ಮಾಡುವುದರಿಂದ ಜನರಲ್ಲಿ ಹಣಕಾಸು ಚಲಾವಣೆಯಾಗಿ ಅಭಿವೃದ್ಧಿ ಸಾಧ್ಯ, ಎಪಿಎಂಸಿ ವರ್ತಕರು ದಲ್ಲಾಲಿಗಳು ಕೂಡಾ ಅನೇಕ ತಾಂತ್ರಿಕ ತೊಂದರೆಗಳನ್ನು ಅನುಭವಿಸುತ್ತಾರೆ, ಕಾನೂನುಗಳ ತೊಡಕು ಎದುರಿಸಿ ಮಾರುಕಟ್ಟೆಯಲ್ಲಿ ತಮ್ಮ ವಹಿವಾಟು ನಡೆಸುತ್ತಾರೆ, ಇಂತಹ ಸಂದರ್ಭದಲ್ಲಿ ವರ್ತಕರು ಒಟ್ಟಾಗಿ ಇದ್ದಾಗ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದರು. ವಿಪ ಸದಸ್ಯ ಎಸ್‌.ವಿ. ಸಂಕನೂರ ಮಾತನಾಡಿದರು. ವರ್ತಕರ ಸಂಘದ ಪರವಾಗಿ ಹಲವು ಬೇಡಿಕೆಗಳ ಮನವಿಯನ್ನು ವೆಂಕಟೇಶ ಹೆಗ್ಗಡಾಳ ಓದಿ ಸಲ್ಲಿಸಿದರು. ಮಾಜಿ ಸಚಿವ ಎಸ್.ಎಸ್.ಪಾಟೀಲ, ಡಾ.ಜಿ.ಬಿ. ಬೀಡನಾಳ, ಡಾ.ವಿರೇಶ ಹಂಚಿನಾಳ, ಪ್ರಶಾಂತ ತಾವರಗೇರಿ, ಶಿವರಾಮರೆಡ್ಡಿ, ತಾತನಗೌಡ ಪಾಟೀಲ ಅವರನ್ನು ಸನ್ಮಾನಿಸಲಾಯಿತು.

ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಕೊಟ್ರೇಶ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಕಲಾವಿದೆ ಮಹನ್ಯಾ ಪಾಟೀಲ ಅವರಿಂದ ರಸಮಂಜರಿ ಕಾರ್ಯಕ್ರಮ ಜರುಗಿತು. ವರ್ತಕರ ಸಂಘದ ಉಪಾಧ್ಯಕ್ಷ ಮುದುಕಪ್ಪ ಬೆಟಗೇರಿ, ಪವನ ಚೋಪ್ರಾ, ಅಮೀನಸಾಬ ಬಿಸನಹಳ್ಳಿ, ಭರಮಪ್ಪ ಬೀಡನಾಳ, ಕರಬಸಪ್ಪ ಹಂಚಿನಾಳ ಇತರರು ಉಪಸ್ಥಿತರಿದ್ದರು. ಸುರೇಶ ಬಣಕಾರ ಪ್ರಾರ್ಥಿಸಿದರು. ವೀರಣ್ಣ ಮೇಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಎಸ್.ಎಂ.ಅಗಡಿ ನಿರೂಪಿಸಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ