ಸರ್ಕಾರ ಸಮಗ್ರ ಬೆಳೆಗಳಿಗೆ ಪರಿಹಾರ ನೀಡಲಿ: ವಿಜಯ ಕುಲಕರ್ಣಿ

KannadaprabhaNewsNetwork |  
Published : Sep 16, 2025, 12:04 AM IST
(13ಎನ್.ಆರ್.ಡಿ1 ಬೆಳೆ ಹಾನಿ ಪರಿಹಾರ ಬಿಡುಗಡೆ ಮಾಡಬೇಕೆಂದು ರೈತರು ತಹಸೀಲ್ದಾರ ಮುಖಾಂತರ ಸರ್ಕಾರಕ್ಕೆ ಮನವಿ ನೀಡಿದರು.)      | Kannada Prabha

ಸಾರಾಂಶ

ಸಮಗ್ರ ಬೆಳೆಹಾನಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಕೇಂದ್ರ ಕಳಸಾ ಬಂಡೂರಿ ನಾಲಾ ಯೋಜನೆ ಹೋರಾಟ ಸಮಿತಿ ಹಾಗೂ ತಾಲೂಕು ಕೃಷಿಕ ಸಮಾಜದ ಸಂಯುಕ್ತ ಆಶ್ರಯದಲ್ಲಿ ನರಗುಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ನರಗುಂದ: ತಾಲೂಕಿನ ರೈತರು ಈ ವರ್ಷ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಎಲ್ಲ ಬೆಳೆಗಳು ಅತಿವೃಷ್ಟಿಯಿಂದ ಹಾನಿಯಾಗಿದೆ. ಆದ್ದರಿಂದ ಸಮಗ್ರ ಬೆಳೆಗಳಿಗೆ ಸರ್ಕಾರ ಬೆಳೆ ಹಾನಿ ಪರಿಹಾರ ಬಿಡುಗಡೆ ಮಾಡಬೇಕು ಎಂದು ಕೇಂದ್ರ ಕಳಸಾ ಬಂಡೂರಿ ನಾಲಾ ಯೋಜನೆ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಆಗ್ರಹಿಸಿದರು.

ಕೇಂದ್ರ ಕಳಸಾ ಬಂಡೂರಿ ನಾಲಾ ಯೋಜನೆ ಹೋರಾಟ ಸಮಿತಿ ಹಾಗೂ ತಾಲೂಕು ಕೃಷಿಕ ಸಮಾಜದ ಸಂಯುಕ್ತ ಆಶ್ರಯದಲ್ಲಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಿ, ತಹಸೀಲ್ದಾರ್‌ ಮುಖಾಂತರ ಸರ್ಕಾರಕ್ಕೆ ಮನವಿ ನೀಡಿ ಆನಂತರ ಅವರು ಮಾತನಾಡಿದರು. ಅತಿವೃಷ್ಟಿಯಿಂದ ತಾಲೂಕಿನ ಹೆಸರು, ಗೋವಿನಜೋಳ, ಹತ್ತಿ, ಈರುಳ್ಳಿ, ಮುಂತಾದ ಬೆಳೆಗಳು ಹಾಳಾಗಿವೆ. ಈಗಾಗಲೇ ತಾಲೂಕಿನ ರೈತರು ಸಾಕಷ್ಟು ಬಾರಿ ಮನವಿ ಮಾಡಿದ್ದಾರೆ. ಆದರೂ ಸರ್ಕಾರ ರೈತರ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಆರೋಪಿಸಿದರು.

ತಾಲೂಕಿನ ರೈತರು ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಗೋವಿನಜೋಳ ಸಮರ್ಪಕ ಫಸಲು ನೀಡುವ ಹಂತದಲ್ಲಿತ್ತು. ಆದರೆ ಸರ್ಕಾರ ಯೂರಿಯಾ ಗೊಬ್ಬರವನ್ನು ಸಮರ್ಪಕವಾಗಿ ಪೂರೈಕೆ ಮಾಡಿಲ್ಲ. ಹೀಗಾಗಿ ಗೋವಿನ ಜೋಳದ ಬೆಳೆಯೂ ನಾಶವಾಯಿತು. ಈ ಎಲ್ಲ ಬೆಳೆಗಳ ನಷ್ಟಕ್ಕೆ ಸರ್ಕಾರವೇ ನೇರ ಹೊಣೆಯಾಗುತ್ತದೆ. ಅದರಂತೆ ಅತಿವೃಷ್ಟಿಯಿಂದ ಹೆಸರು ಇಳುವರಿ ಅತಿ ಕಡಿಮೆಯಾಗಿ ರೈತ ಅಲ್ಲೂ ನಷ್ಟ ಅನುಭವಿಸುತ್ತಿದ್ದಾರೆ. ಅಲ್ಪಸ್ವಲ್ಪ ಉಳಿದ ಹೆಸರು ಕಾಳು ಮಳೆಯಿಂದ ಹಾನಿಯಾಗಿದ್ದರಿಂದ ವ್ಯಾಪಾರಸ್ಥರು ಖರೀದಿ ಮಾಡುತ್ತಿಲ್ಲ. ಬೇಗ ಸರ್ಕಾರ ಬೆಂಬಲ ಬೆಲೆ ಕೇಂದ್ರ ಪ್ರಾರಂಭ ಮಾಡಿ, ಹೆಸರುಕಾಳು ಖರೀದಿಸಬೇಕು ಎಂದು ಆಗ್ರಹಿಸಿದರು.

ಕೃಷಿಕ ಸಮಾಜದ ತಾಲೂಕಾಧ್ಯಕ್ಷ ಬಸವರಡ್ಡಿ ರಾಯರಡ್ಡಿ ಮಾತನಾಡಿ, ರೈತ ಸಮುದಾಯ ಸದ್ಯ ಸಂಕಷ್ಟಕ್ಕೆ ಸಿಲುಕಿದೆ. ಆದ್ದರಿಂದ ಸರ್ಕಾರ ಬೆಳೆ ನಷ್ಟ ಪರಿಹಾರ ರೈತರ ಖಾತೆಗೆ ಪ್ರತಿ ಎಕರೆಗೆ ₹25 ಸಾವಿರ ಪರಿಹಾರ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿಕೊಂಡರು.

ಕಂದಾಯ ನಿರೀಕ್ಷಕ ಎಸ್.ಎಲ್. ಪಾಟೀಲ ಅವರು ಮನವಿ ಸ್ವೀಕರಿಸಿದರು. ಅಣ್ಣಪ್ಪಗೌಡ ಪಾಟೀಲ, ಎಚ್.ಎನ್. ಹಳಕಟ್ಟಿ, ಸುರೇಶಗೌಡ ಈರನಗೌಡ್ರ, ಉಮಪತಿಗೌಡ ಪಾಟೀಲ, ತಿರಕನಗೌಡ್ರ, ಈರನಗೌಡ ಪಾಟೀಲ, ಚನ್ನಪ್ಪಗೌಡ ಪಾಟೀಲ, ಎಸ್.ಬಿ. ಸಿದ್ನಾಳ, ಸಂಗಪ್ಪ ಮಾಳಕ್ಕನವರ, ವಿ.ಬಿ. ಹಳಕಟ್ಟಿ, ನಬಿಸಾಬ್‌ ಮೇಯಖಾನ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ