ಕನ್ನಡಪ್ರಭ ವಾರ್ತೆ ವಿಜಯಪುರ
ಛಾಯಾಗ್ರಾಹಕರು ಇಂದು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಛಾಯಾಗ್ರಹಣ ಅಕಾಡೆಮಿ ಪ್ರಾರಂಭ ಮಾಡಿದರೆ ಅದರಿಂದ ಛಾಯಾಗ್ರಾಹಕರಿಗೆ ಹೆಚ್ಚಿನ ಜ್ಞಾನ ವಿಸ್ತರಿಸಿಕೊಳ್ಳಲು ಮತ್ತು ಸರ್ಕಾರದ ಸವಲತ್ತುಗಳನ್ನು ಪಡೆಯಲು ಅನುಕೂಲವಾಗುತ್ತದೆ ಎಂದು ಯುವ ಭಾರತ್ ಸಮಿತಿಯ ಅಧ್ಯಕ್ಷ ಉಮೇಶ ಕಾರಜೋಳ ಹೇಳಿದರು.ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘ ಹಾಗೂ ಕರ್ನಾಟಕ ರಾಜ್ಯ ಛಾಯಾಚಿತ್ರಗ್ರಾಹಕರ ಸಂಘದ ಸಹಯೋಗದಲ್ಲಿ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಛಾಯಾಗ್ರಹಣ ದಿನಾಚರಣೆ ಹಾಗೂ ಹಿರಿಯ ಛಾಯಾಗ್ರಾಹಕರಿಗೆ ಗೌರವ ಸನ್ಮಾನ, ಛಾಯಾಗ್ರಾಹಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಛಾಯಾಚಿತ್ರಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲರಿಗೂ ಸಿಗುವ ಹಾಗೆ ಸರ್ಕಾರದ ಎಲ್ಲಾ ಸವಲತ್ತುಗಳು ಛಾಯಾಗ್ರಾಹಕರಿಗೆ ಸಿಗುವಂತಾಗಲಿ ಎಂದರು.
ಮುಖ್ಯ ಅತಿಥಿ, ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಒಂದು ಚಿತ್ರ ಸಾವಿರ ಕಥೆ ಹೇಳುವ ಸಾಮರ್ಥ್ಯ ಹೊಂದಿದೆ. ಅದರಲ್ಲೂ ಛಾಯಾಗ್ರಹಣ ಐತಿಹಾಸಿಕ ದಾಖಲೆ ಸೃಷ್ಟಿಸುವ, ದಾಖಲಿಸುವ ಒಂದು ಅದ್ಭುತ ಮಾಧ್ಯಮವಾಗಿದೆ ಎಂದರು. ಜಿಲ್ಲಾ ನೂತನ ಛಾಯಾಗ್ರಹಾಕರ ಸಂಘ ತನ್ನ ಜಿಲ್ಲೆಯ ಹಿರಿಯ ಛಾಯಾಗ್ರಾಹಕರಿಗೆ ಗೌರವಿಸುವ ಮೂಲಕ, ಅವರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಛಾಯಾಗ್ರಹಣ ದಿನಾಚರಣೆಯನ್ನು ಆಚರಣೆ ಮಾಡುತ್ತಿರುವುದರಿಂದ ಅವರಿಗೆ ಅಭಿನಂದನೆ ಎಂದರು.ಕರ್ನಾಟಕ ಛಾಯಾಗ್ರಾಹಕರ ಸಂಘದ ನಿರ್ದೇಶಕ ನಾಗರಾಜ್.ಟಿ.ಸಿ, ಶ್ರೀಶೈಲಗೌಡ ಬಿರಾದಾರ, ಶರಣಯ್ಯ ಬಂಡಾರಿಮಠ, ಸಂಘದ ಅಧ್ಯಕ್ಷ ರಮೇಶ ಚವ್ಹಾಣ ಮಾತನಾಡಿದರು. ಸಂಘದ ಪದಾಧಿಕಾರಿಗಳಾದ ಪ್ರಶಾಂತ ಪಟ್ಟಣಶಟ್ಟಿ, ಸುರೇಶ ರಾಠೋಡ, ಸತೀಶ ಕಲಾಲ, ರಾಜುಸಿಂಗ ರಜಪೂತ, ಗುರುಬಾಳಪ್ಪ ಗಲಗಲಿ, ಮಲ್ಲಿಕಾರ್ಜುನ ಪಾರ್ವತಿ, ಪವನ ಅಂಗಡಿ. ಮಹೇಶ ಕುಂಬಾರ, ವಿನೊದ ಮಣೂರ, ವಿದ್ಯಾಧರ ಸಾಲಿ ಉಪಸ್ಥಿತರಿದ್ದರು.