ಕನ್ನಡಪ್ರಭ ಸರಣಿ ವರದಿ ಭಾಗ : 130
ಆನಂದ್ ಎಂ. ಸೌದಿಕನ್ನಡಪ್ರಭ ವಾರ್ತೆ ಯಾದಗಿರಿ
"2011 ರಲ್ಲಿ ಕಡೇಚೂರು ಕೈಗಾರಿಕಾ ಪ್ರದೇಶಕ್ಕೆಂದು ಭೂಸ್ವಾಧೀನ ವೇಳೆ ಸರ್ಕಾರ ನೀಡಿದ್ದ ಭರವಸೆಗಳು ಹುಸಿಯಾದವು. ನಂತರ ಬಂದ ಸರ್ಕಾರಗಳು ಜನರ ಜೀವದ ಜೊತೆ ಚೆಲ್ಲಾಟವಾಡಿ, ಲಕ್ಷಾಂತರ ಜನರ ಬದುಕನ್ನೇ ಜೀವಚ್ಛವದಂತಾಗಿಸಿದರು. ಮಾನಸಿಕವಾಗಿ ನೊಂದವರು ಜೀವ ಬಿಟ್ಟರೆ, ಬದುಕಲು ಕೆಲವರು ಬೆಂಗಳೂರು ಮುಂಬೈನಂತಹ ಮಹಾನಗರಗಳಿಗೆ ಗುಳೇ ಹೋದರು... "- ಕೈಗಾರಿಕೆಗೆಂದು ಭೂಮಿ ನೀಡಿದ ರೈತರ ಪರಿಸ್ಥಿತಿ ವಿವರಿಸುತ್ತಿದ್ದ ಕಡೇಚೂರಿನ ಅಬ್ದುಲ್ ಗನಿ, ತಮ್ಮೆಲ್ಲರ ದುಸ್ಥಿತಿಯ ಬಗ್ಗೆ ಗೋಳು ತೋಡಿಕೊಂಡರು. "ಕನ್ನಡಪ್ರಭ "ದೊಂದಿಗೆ ಮಾತನಾಡಿದ ಅವರು, ಇಲ್ಲಿ ಮನುಷ್ಯರು ವಾಸಿಸಲು ಆಗದಷ್ಟು ಅಸಾಧ್ಯವಾದ ದುರ್ನಾತ, ವಿಷಗಾಳಿ ಹೊರಹೊಮ್ಮುತ್ತಿದೆ. ಕೆಮಿಕಲ್ ಕಂಪನಿಗಳ ಕಳ್ಳಾಟ ಸದ್ದಿಲ್ಲದೆ ಜನರ ಜೀವ ತೆಗೆಯುತ್ತಿದೆ. ಪರಿಹಾರ ತೆಗೆದುಕೊಂಡರೂ, ಬದುಕಲು ಆಗದಷ್ಟು ಅಸಹನೀಯ ವಾತಾವರಣ ಇಲ್ಲಿದೆ ಎಂದು ಅವರು ನೋವು ವ್ಯಕ್ತಪಡಿಸಿದರು.
ಭೂಸ್ವಾಧೀನಕ್ಕೂ ಮುನ್ನ ಸರ್ಕಾರದ ಭರವಸೆಗಳಿಂದ ಜನರು ಖುಷಿಯಾಗಿದ್ದೆವು. ಆದರೆ, ನಂತರದಲ್ಲಿ ಒಂದೊಂದಾಗಿ ಎಲ್ಲವೂ ಮರೆತ ಸರ್ಕಾರ, ನಮ್ಮ ಒಪ್ಪಿಗೆಯಿಲ್ಲದೆ ಅಪಾಯಕಾರಿ ರಾಸಾಯನಿಕ ಕೆಮಿಕಲ್ ಕಂಪನಿಗಳಿಗೆ ಭೂಮಿ ನೀಡಿತು. ಇದು, ಜನರ ಬೆನ್ನಿಗೆ ಸರ್ಕಾರವೇ ಚೂರಿ ಹಾಕಿದಂತಾಯಿತು ಎಂದು ಭೀಮಣ್ಣ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಲಕ್ಷಾಂತರ ಜನರ ಜೀವಗಳ ರಕ್ಷಿಸಬೇಕಾದ ಸರ್ಕಾರ, ಕೈಗಾರಿಕೆಗಳ ಪರವಾಗಿ ನಿಂತಿರುವುದು ಅನ್ಯಾಯ ಎನ್ನಲಾಗುತ್ತಿದೆ.------------
ಭೂಮಿ ನೀಡಿ ನಾವು ತಪ್ಪು ಮಾಡಿದ್ದೇವೆ. ಜನರ ನಂಬಿಸಿ ಸರ್ಕಾರವೇ ಬೆನ್ನಿಗೆ ಚೂರಿ ಹಾಕಿದೆ. ಇಲ್ಲಿ ಜವಳಿ, ಕೋಕೋ ಕೋಲಾ ಸೇರಿದಂತೆ ಬೃಹತ್ ಪರಿಸರ ಸ್ನೇಹಿ ಕಂಪನಿಗಳು ತರುತ್ತೇವೆ , ನಿಮ್ಮೆಲ್ಲರಿಗೂ ಉದ್ಯೋಗ ದೊರೆಯುತ್ತದೆ ಎಂದಿತ್ತು. ಆದರೆ, ರಾಸಾಯನಿಕ ಕಂಪನಿಗಳನ್ನು ಸ್ಥಾಪಿಸಲು ಅನುಮತಿ ನೀಡಿ , ನಮ್ಮನ್ನು ಜೀವಂತವಾಗಿ ಮಣ್ಣು ಮಾಡುತ್ತಿದೆ. ಅದರ ಜತೆಯಲ್ಲಿ ಇಲ್ಲಿನ ಜಲಚರಗಳು, ಪಶು ಪಕ್ಷಿ ಪ್ರಾಣಿಗಳನ್ನು ಕೂಡ ಸಾಯಿಸುತ್ತಿದೆ.: ಭೀಮಣ್ಣ ಪೂಜಾರಿ, ಸಿವಿಲ್ ಎಂಜಿನೀಯರ್, ಕಡೇಚೂರು.
---------ಭೂಮಿ ನೀಡಿದರೆ ಈ ಪ್ರದೇಶದಲ್ಲಿ ಕೈಗಾರಿಕೆಗಳು ಬರುತ್ತವೆ. ಗುಳೆ ಹೋಗುವುದು ತಪ್ಪುತ್ತದೆ, ಸ್ಥಳೀಯವಾಗಿ ಎಲ್ಲರಿಗೂ ಉದ್ಯೋಗ ಸಿಗುತ್ತದೆ ಎಂದು ನಂಬಿದ್ದೆವು. ಈಗ ವಿಷ ಉಗುಳುವ ಕಂಪನಿಗಳನ್ನು ಹಾಕಿ ನಮಗೆ ಮೋಸ ಮಾಡಿದೆ. ನಮ್ಮೂರಲ್ಲಿಯೇ ಒರ್ವ ವ್ಯಕ್ತಿ ಮಾನಸಿಕ ಅಸ್ವಸ್ಥತೆಯಿಂದ ಆತ್ಮಹತ್ಯೆ ಮಾಡಿಕೊಂಡ. ಇದಕ್ಕೆ ನೇರ ಕಾರಣ ಸರಕಾರ. ನಮ್ಮಲ್ಲಿ ಹಣ ಉಳಿಯಲಿಲ್ಲ, ಉದ್ಯೋಗವೂ ಸಿಗಲಿಲ್ಲ, ಕನಿಷ್ಠ ಆರೋಗ್ಯವೂ ಉಳಿಯುತ್ತಿಲ್ಲ.
: ಅಬ್ದುಲ್ ಘನಿ, ಗ್ರಾ.ಪಂ.ಸದಸ್ಯ ಕಡೇಚೂರು.