ಕನ್ನಡಪ್ರಭ ವಾರ್ತೆ ಕೊರಟಗೆರೆ
ತಾಲೂಕಿನ ತೋವಿನಕೆರೆಯಲ್ಲಿ ನಡೆದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪಿ.ಎಂ.ಕಿಸಾನ್ ಉತ್ಸವ್ ದಿವಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ತುಮಕೂರು ಜಿಲ್ಲೆಯ ೨.೩೬ ಲಕ್ಷ ರೈತರಿಗೆ ೪೭.೨೯ ಕೋಟಿ ರು. ಜಮಾ ಆಗಿದೆ. ಪಿ.ಎಂ.ಕಿಸಾನ್ ಯೋಜನೆ ೨೦೧೮-೧೯ರಿಂದ ಅನುಷ್ಠಾನಗೊಂಡಿದೆ. ಪ್ರತಿ ರೈತ ಕುಟುಂಬಕ್ಕೆ ವರ್ಷಕ್ಕೆ ೬೦೦೦ ರು. (೪ತಿಂಗಳಿಗೊಮ್ಮೆ ೨೦೦೦ ರು.ನಂತೆ) ನೀಡಲಾಗುತ್ತದೆ. ತುಮಕೂರು ಜಿಲ್ಲೆಯಲ್ಲಿ ೨೩ನೇ ಕಂತಿನಲ್ಲಿ ೨,೩೦,೯೪೧ ರೈತರಿಗೆ ೪೬.೧೯ ಕೋಟಿ ರು. ನೀಡಲಾಗಿತ್ತು. ಇಂದು ೨೪ನೇ ಕಂತಿನಡಿ (೨೦೨೬-೨೭ನೇ ಸಾಲಿನ ಆಗಸ್ಟ್-ನವೆಂಬರ್) ೨,೩೬,೪೭೩ ರೈತರಿಗೆ ೪೭.೨೯ ಕೋಟಿ ರು. ಜಮೆಯಾಗಿದೆ ಎಂದು ಹೇಳಿದರು.ಸಿದ್ದರಬೆಟ್ಟ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಪೀಠಾಧ್ಯಕ್ಷ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ರೈತ ಸುಖವಾಗಿದ್ದರೆ ದೇಶ ಸುಖವಾಗಿರುತ್ತದೆ. ಅನ್ನದಾತನಿಗೆ ಕೇಂದ್ರ ಸರ್ಕಾರ ನೇರವಾಗಿ ಖಾತೆಗೆ ಹಣ ಜಮಾ ಮಾಡುತ್ತಿರುವುದು ಬಹಳ ಸಂತೋಷದ ವಿಚಾರ. ಪ್ರಧಾನಿ ಮೋದಿ ಅವರು ರೈತರ ಬಗ್ಗೆ ಹೊಂದಿರುವ ಕಾಳಜಿಗೆ ಇದೇ ಸಾಕ್ಷಿ. ತುಮಕೂರು ಜಿಲ್ಲೆಯ ೨.೩೬ ಲಕ್ಷ ರೈತರಿಗೆ ಅನುಕೂಲವಾಗಿರುವುದು ನಮ್ಮ ಭಾಗದ ಪುಣ್ಯ. ರೈತರು ಈ ಹಣವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿ, ವಿಧಾನ ಪರಿಷತ್ ಸದಸ್ಯ ಕೆ.ಎಂ ಸುರೇಶ್, ಬಿಜೆಪಿ ಮುಖಂಡ ಅನಿಲ್ ಕುಮಾರ್, ಜೆಡಿಎಸ್ ಅಧ್ಯಕ್ಷ ಕಾಮರಾಜು, ಬಿಜೆಪಿ ಅಧ್ಯಕ್ಷ ರುದ್ರೇಶ್, ಡಾ.ದರ್ಶನ್ ಕೆ.ಎಲ್, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಚಿಕ್ಕರಂಗಯ್ಯ, ತುಂಬಾಡಿ ಲಕ್ಷ್ಮೀಶ್, ಉದ್ಯಮಿ ಸೇರಿದಂತೆ ಇತರರು ಇದ್ದರು.
ಮೋದಿ ಈ ದೇಶದ ದೊಡ್ಡ ಆಸ್ತಿ, ೧೫ ಕೋಟಿ ಜನರನ್ನು ಬಡತನದಿಂದ ಮೇಲೆ ತಂದ ನಾಯಕ. ಉಜ್ವಲ, ಜನ್ ಧನ್ ಖಾತೆ ಕೊಟ್ಟಿದ್ದಾರೆ. ಅವರ ಸಾಧನೆ ಸಹಿಸದೆ ಖರ್ಗೆ ಅವರು ಮೋದಿ ತಂದೆಯನ್ನು ನಿಂದಿಸಿದ್ದಾರೆ. ಖರ್ಗೆ ಪರ ಜನರೇ ಅವರಿಗೆ ಬುದ್ಧಿ ಭ್ರಮಣೆ ಆಗಿದೆಯಾ ಅಂತಿದ್ದಾರೆ. ಅವರು ಬೇಷರತ್ತಾಗಿ ಕ್ಷಮೆ ಕೇಳಬೇಕು ಎಂದು ಸೋಮಣ್ಣ ಒತ್ತಾಯ ಮಾಡಿದರು.