ಕೊಪ್ಪಳ: ಕರ್ನಾಟಕ ರಾಜ್ಯ ಪದವೀಧರ (6–8) ಪ್ರಾಥಮಿಕ ಶಿಕ್ಷಕರ ಸಂಘ ಮುಂದಿನ ದಿನಗಳಲ್ಲಿ ರಾಜ್ಯದ ಅತಿದೊಡ್ಡ ಸಂಘಟನೆಯಾಗಿ ಹೊರಹೊಮ್ಮುವುದರಲ್ಲಿ ಅನುಮಾನವಿಲ್ಲ ಎಂದು ಕೊಪ್ಪಳ ಜಿಲ್ಲಾ ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಮಾರುತಿ ಮ್ಯಾಗಳಮನಿ ಹೇಳಿದರು.
ಎಲ್ಲರನ್ನು ವಿಶ್ವಾಸಕ್ಕೆ ಪಡೆದು ರಾಜ್ಯ ಸಂಘದ ಮಾರ್ಗದರ್ಶನದಲ್ಲಿ ಸಂಘವನ್ನು ಮುನ್ನಡೆಸುವುದು ಸವಾಲಿನ ಕೆಲಸವಾಗಿದೆ. ಜಿಲ್ಲೆಯ ಎಲ್ಲ ತಾಲೂಕುಗಳ ಪದಾಧಿಕಾರಿಗಳು ಹಾಗೂ ಶಿಕ್ಷಕರ ಸಹಕಾರದಿಂದ ಸತತ ಮೂರನೇ ಬಾರಿಗೆ ಅವಿರೋಧವಾಗಿ ಅಧ್ಯಕ್ಷನಾಗಿ ಆಯ್ಕೆಯಾಗಿರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಸಂಘವನ್ನು ಮತ್ತಷ್ಟು ಬಲಪಡಿಸಲು ಅಗತ್ಯ ಕ್ರಮಗಳನ್ನು ಎಲ್ಲರ ಸಹಕಾರದೊಂದಿಗೆ ಪ್ರಾಮಾಣಿಕವಾಗಿ ಕೈಗೊಳ್ಳುವುದಾಗಿ ತಿಳಿಸಿದರು.
ಜಿಲ್ಲಾ ಖಜಾಂಚಿಯಾಗಿ ಗಂಗಾವತಿ ತಾಲೂಕಿನ ಸಂತೋಷ ಹುಡೆದಾಳ ಅವಿರೋಧವಾಗಿ ಆಯ್ಕೆಯಾದರು. ಕಾರ್ಯದರ್ಶಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೊಪ್ಪಳದ ಮಂಜಪ್ಪ 11 ಮತ ಪಡೆದು ಕುಕನೂರು ತಾಲೂಕಿನ ಮಂಜುನಾಥ ಕೊರಡಕೇರಾ ವಿರುದ್ಧ ಗೆಲುವು ಸಾಧಿಸಿದರು. ನೂತನ ಪದಾಧಿಕಾರಿಗಳು ತಮ್ಮ ಆಯ್ಕೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.ರಾಜ್ಯಾಧ್ಯಕ್ಷರ ಭೇಟಿ, ನೂತನ ಪದಾಧಿಕಾರಿಗಳಿಗೆ ಸನ್ಮಾನ: ಚುನಾವಣೆಯ ಫಲಿತಾಂಶದ ಬಳಿಕ ಕೊಪ್ಪಳಕ್ಕೆ ಆಗಮಿಸಿದ ಕರ್ನಾಟಕ ರಾಜ್ಯ ಪದವೀಧರ (6–8) ಪ್ರಾಥಮಿಕ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಮುರಳೀಧರ ಮಾತನಾಡಿ, ಮಾರುತಿ ಮ್ಯಾಗಳಮನಿ ಅವರು ಸತತ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿರುವುದು ಸಂತಸದ ಸಂಗತಿ ಎಂದರು.
ನಂತರ ನೂತನ ಜಿಲ್ಲಾ ಪದಾಧಿಕಾರಿಗಳು ಹಾಗೂ ಉಪಸ್ಥಿತರಿದ್ದ ವಿವಿಧ ತಾಲೂಕುಗಳ ಪದಾಧಿಕಾರಿಗಳನ್ನು ರಾಜ್ಯಾಧ್ಯಕ್ಷ ಮುರಳೀಧರ ಹಾಗೂ ರಾಜ್ಯ ಖಜಾಂಚಿ ಸ್ಥಾನದ ಆಕಾಂಕ್ಷಿ ಶಂಕರ ಸನ್ಮಾನಿಸಿ ಅಭಿನಂದಿಸಿದರು.