ಅ.3ಕ್ಕೆ ಹಾರನಕಣಿವೆ ರಂಗನಾಥಸ್ವಾಮಿಯ ಅದ್ಧೂರಿ ಅಂಬಿನೋತ್ಸವ

KannadaprabhaNewsNetwork |  
Published : Sep 30, 2025, 01:00 AM IST
ಚಿತ್ರ 3 | Kannada Prabha

ಸಾರಾಂಶ

ಡಾ. ರಂಗನಾಥ್,, ಅಧ್ಯಕ್ಷರು, ಶ್ರೀ ರಂಗನಾಥಸ್ವಾಮಿ ದೇವಸ್ಥಾನ ಟ್ರಸ್ಟ್.

ರಮೇಶ್ ಬಿದರಕೆರೆ

ಕನ್ನಡಪ್ರಭ ವಾರ್ತೆ ಹಿರಿಯೂರು

ತಾಲೂಕಿನ ವಾಣಿವಿಲಾಸ ಸಾಗರದ ಬಳಿಯಿರುವ ಬುಡಕಟ್ಟು ಕಾಡುಗೊಲ್ಲರ ಆರಾಧ್ಯ ದೈವ ಹಾರನಕಣಿವೆ ಶ್ರೀ ರಂಗನಾಥಸ್ವಾಮಿಯ ಅಂಬಿನೋತ್ಸವ ಅ.3 ರಂದು ಸಾವಿರಾರು ಭಕ್ತರ ನಡುವೆ ವಿಜೃಂಭಣೆಯಿಂದ ನಡೆಯಲಿದೆ.

ಹೊಸದುರ್ಗ ತಾಲೂಕಿನ ಅಂಚಿಬಾರಿಹಟ್ಟಿ ಗ್ರಾಮದಲ್ಲಿರುವ ಶ್ರೀ ರಂಗನಾಥಸ್ವಾಮಿಯ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ವಾಣಿವಿಲಾಸ ಸಾಗರ ಜಲಾಶಯದಲ್ಲಿ ಸ್ವಾಮಿಗೆ ಗಂಗಾಪೂಜೆ ಹಾಗೂ ಕುದುರೆ ಪೂಜೆ ನೆರವೇರಿಸಲಾಗುತ್ತದೆ. ಬಳಿಕ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆಯೊಂದಿಗೆ ಗುಡಿಗೌಡ, ಪೂಜಾರಿ, ಗ್ರಾಮದ ಅಣ್ಣ ತಮ್ಮಂದಿರು ಹಾಗೂ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಹಾರನಕಣಿವೆ ಕ್ಷೇತ್ರಕ್ಕೆ ಕರೆತಂದು ಶಿವ ಹಾಗೂ ವಿಷ್ಣುವಿಗೆ ಮೊದಲ ಪೂಜೆ ನೆರವೇರಿಸಿದ ನಂತರ ಪೂಜಾರಿಯು ಜಂಬೂ ಮರದ ಮುಂದೆ ನೆಟ್ಟಿದ್ದ ಬಾಳೆಗಿಡಕ್ಕೆ ಮೂರು ಬಾರಿ ಪ್ರದಕ್ಷಿಣೆ ಹಾಕಿ ಬಿಲ್ಲು ಹಿಡಿದು ಬಾಣ ಹೊಡೆದು, ಬಾಳೆ ಗಿಡ ಕಡಿದು ಬನ್ನಿ ಮುಡಿಯುವ ಅಂಬಿನೋತ್ಸವ ನೆರವೇರುತ್ತದೆ. ಬಯಲು ಸೀಮೆ ಜಿಲ್ಲೆಯ ಹಿರಿಯೂರಿನಿಂದ ಹೊಸದುರ್ಗಕ್ಕೆ ಹೋಗುವ ಮಾರ್ಗಮದ್ಯೆ ಎಡ ಭಾಗದಲ್ಲಿರುವ ವಿವಿ ಸಾಗರ ಜಲಾಶಯದ ಪಕ್ಕದಲ್ಲಿರುವ ಕಾಡಿನಲ್ಲಿ ನೆಲೆಸಿರುವ ಹಾರನಕಣಿವೆ ರಂಗನಾಥ ಸ್ವಾಮಿ ಪವಾಡ ಪುರುಷನೆಂದೇ ಪ್ರತೀತಿ. ಆಶ್ವಿಜ ಶುದ್ಧ ವಿಜಯದಶಮಿಯಂದು ಅಂಬಿನೋತ್ಸವ ನೆರವೇರಲಿದೆ. ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಜಾತ್ರೆಯಲ್ಲಿ ಭಾಗಿಯಾಗಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಂಡು ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಾರೆ. ಮದ್ಯ ಕರ್ನಾಟಕದ ಬುಡಕಟ್ಟು ಕಾಡುಗೊಲ್ಲರ ಧಾರ್ಮಿಕ ಕೇಂದ್ರವಾದ ಈ ದೇವಾಲಯದ ಮಹಿಮೆ ಅಪಾರವಾಗಿದ್ದು ಕರಡಿ ಬುಳ್ಳಪ್ಪ ವಂಶಸ್ಥರಾದ ಕರಡಿಗೊಲ್ಲರು ಶ್ರೀ ರಂಗನಾಥಸ್ವಾಮಿಯನ್ನು ಪೂಜಿಸಿಕೊಂಡು ಬರುತ್ತಿದ್ದು ನಂಬಿ ಬಂದವರನ್ನು ರಂಗಯ್ಯ ಎಂದೂ ಕೈಬಿಟ್ಟಿಲ್ಲ ಎನ್ನುವುದು ಭಕ್ತರ ಬಲವಾದ ನಂಬಿಕೆಯಾಗಿದೆ.

ವಿಷ ಜಂತುಗಳಿಂದ ಕಚ್ಚಿಸಿಕೊಂಡು ಆಸ್ಪತ್ರೆಗೆ ಹೋಗಿ ಗುಣಮುಖರಾಗದೆ ಸಾವು ಬದುಕಿನ ನಡುವೆ ಹೋರಾಟ ನಡೆಸಿ ರಂಗಪ್ಪನ ಸನ್ನಿಧಿಗೆ ಬಂದವರು ಸ್ವಾಮಿಯ ಪವಾಡದಿಂದ ಗುಣಮುಖರಾದ ಅದೆಷ್ಟೋ ಉದಾಹರಣೆಗಳಿರುವುದರಿಂದ ರಂಗನಾಥಸ್ವಾಮಿಯನ್ನು ವಿಷಜಂತುಗಳ ಪರಿಹಾರಕ ಎಂತಲೂ ಕರೆಯುತ್ತಾರ. ಮನೆ, ಹೊಲ, ಗದ್ದೆಗಳಲ್ಲಿ ವಿಷ ಜಂತುಗಳು ಕಾಣಿಸಿಕೊಂಡಾಗ ಅಥವಾ ಕಚ್ಚಿದಾಗ ಈ ಭಾಗದ ಜನರಿಗೆ ಮೊದಲು ನೆನಪಾಗುವುದು ಹಾರನಕಣಿವೆ ರಂಗಪ್ಪ. ವಿಷ ಜಂತುಗಳು ಕಚ್ಚಿದಾಗ ಸ್ವಾಮಿಯ ಸನ್ನಿಧಿಗೆ ಬಂದು ಜಾತ್ರೆಯಲ್ಲಿ ಹುಳಗಳನ್ನು ಅರ್ಪಿಸುತ್ತೇವೆ ಎಂದು ಹರಕೆ ಕಟ್ಟಿಕೊಂಡು ಅಂಬಿನೋತ್ಸವದ ದಿನ ಬಂದು ಚಿನ್ನ, ಬೆಳ್ಳಿ, ತಾಮ್ರದ ಹಾವು, ಚೇಳು, ಜರಿಗಳನ್ನು ಭಕ್ತರು ಸರತಿ ಸಾಲಲ್ಲಿ ನಿಂತು ಹುಂಡಿಯಲ್ಲಿ ಹಾಕಿ ಹರಕೆ ತೀರಿಸುವ ದೃಶ್ಯ ಎಲ್ಲರ ಗಮನ ಸೆಳೆಯುತ್ತದೆ. ಉತ್ತಮ ಮಳೆಯಾಗಿ ಸಮೃದ್ಧ ಫಸಲಿಗೆ ಹಾಗೂ ಆರೋಗ್ಯ ಸುಧಾರಣೆಗಾಗಿ ಭಕ್ತರು ಗೊನೆಗಟ್ಟಲೆ ಬಾಳೆಹಣ್ಣು ಸಕ್ಕರೆಯ ನೈವೇದ್ಯ ಮಾಡುವ ಮೂಲಕ ಮತ್ತೊಂದು ರೀತಿಯ ಹರಕೆಯನ್ನು ಭಕ್ತರು ತೀರಿಸುತ್ತಾರೆ. ಭಕ್ತರು ತಂದ ಸಕ್ಕರೆ ಬಾಳೆಹಣ್ಣನ್ನು ಹಸಿರು ಗಿಡಗಳ ಬುಡದಲ್ಲಿ ಬಾಳೆ ಎಲೆ ಹಾಸಿ ಅದರಲ್ಲಿ ಬಾಳೆಹಣ್ಣಿನ ರಸಾಯನ ಮಾಡಿ ಪೂಜೆ ಮಾಡಿದ ಬಳಿಕ ದಾಸಯ್ಯನಿಗೆ ಮೊದಲು ನೀಡಿ ನಂತರ ಅಲ್ಲಿರುವ ಜನರಿಗೆ ಹಂಚುವುದು ಜಾತ್ರೆಯ ಮತ್ತೊಂದು ವಿಶೇಷವಾಗಿದೆ.

ರಂಗನಾಥಸ್ವಾಮಿ ದೇವಾಲಯ ಕಾಡುಗೊಲ್ಲ ಸಮುದಾಯದ ಪುಣ್ಯಕ್ಷೇತ್ರ

ರಂಗನಾಥಸ್ವಾಮಿ ಟ್ರಸ್ಟ್ ಅಧ್ಯಕ್ಷ ಡಾ.ರಂಗನಾಥ್ ಮಾತನಾಡಿ, ಈ ದೇವಾಲಯವು ಕಾಡುಗೊಲ್ಲ ಸಮುದಾಯದ ಪುಣ್ಯ ಕ್ಷೇತ್ರವಾಗಿದ್ದು ಸರ್ವಧರ್ಮಗಳ ಭಕ್ತರು ಸಹ ಆಗಮಿಸಿ ಸ್ವಾಮಿಯ ದರ್ಶನ ಪಡೆಯುತ್ತಾರೆ. ಅದರಲ್ಲೂ ಜಾತ್ರೆಗೆ ವಿಶೇಷವಾಗಿ ಕೇರಳ, ತಮಿಳುನಾಡು, ಮಹಾರಾಷ್ಟ್ರ ಹಾಗೂ ಆಂದ್ರಪ್ರದೇಶದಿಂದಲೂ ಭಕ್ತರು ಆಗಮಿಸುವುದುಂಟು. ಪ್ರತಿ ಶನಿವಾರ ಹಾಗೂ ಅಮಾವಾಸ್ಯೆಯ ದಿನದಂದು ಸ್ವಾಮಿಗೆ ವಿಶೇಷ ಪೂಜೆ ನಡೆಯುತ್ತದೆ. ಮದುವೆ, ಉದ್ಯೋಗ ಹಾಗೂ ಸಂತಾನ ಫಲವನ್ನು ಸ್ವಾಮಿ ಕರುಣಿಸುವ ಜೊತೆಗೆ ಆರೋಗ್ಯ ಸಮಸ್ಯೆಯನ್ನು ಪರಿಹರಿಸುತ್ತಾನೆಂಬುದು ಭಕ್ತರ ನಂಬಿಕೆಯಾಗಿದೆ. ಪಕ್ಕದಲ್ಲೇ ಬೆಟ್ಟ ಇರುವುದರಿಂದ ಮುಂದೆ ಈ ದೇವಾಲಯವನ್ನು ತಿರುಪತಿಯ ಗೋವರ್ಧನ ಗಿರಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಆಲೋಚನೆ ಇದೆ. ಇದೀಗ ಗವಿ ರಂಗನಾಥಸ್ವಾಮಿಯ ಚಿಕ್ಕದೊಂದು ದೇಗುಲ ನಿರ್ಮಿಸಲಾಗಿದೆ. ಗೋ ಶಾಲೆ ತೆರೆಯಲಾಗಿದೆ. ಕಳಸ ಪ್ರತಿಷ್ಟಾಪನೆ ಮಾಡಲಾಗಿದೆ. ಲಕ್ಷಾಂತರ ಜನರು ಸೇರುವ ಅಂಬಿನೋತ್ಸವ ವಿಜೃಂಭಣೆಯಿಂದ ನಡೆಯಲಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ