- ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳಿಂದ ಚಾಲನೆ । ಸಾಮೂಹಿಕ ಭೋಜನ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ಇಲ್ಲಿಯ ಹಿರೇಕಲ್ಮಠದ ಶ್ರೀ ಚನ್ನಪ್ಪಸ್ವಾಮಿಗಳ ಮಹಾರಥೋತ್ಸವ ಶುಕ್ರವಾರ ಮಧ್ಯಾಹ್ನ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಶಹನಾಯ್, ಭಜನೆ, ಡೊಳ್ಳು, ಕೀಲು ಕುದುರೆ, ಪುರುವಂತರ ವೀರಗಾಸೆ, ಮಕ್ಕಳ ಕೋಲಾಟ ನೃತ್ಯ ಇತ್ಯಾದಿ ಕಲಾ ತಂಡಗಳು ಉತ್ಸವದಲ್ಲಿ ಗಮನ ಸೆಳೆದವು.ರಥೋತ್ಸವ ಕಾರ್ಯಕ್ರಮಕ್ಕೂ ಮುನ್ನ ಧ್ವಜ, ಹೂವಿನ ಹಾರಗಳು ಸೇರಿದಂತೆ ಇತರ ಪ್ರಮುಖ ವಸ್ತುಗಳನ್ನು ಬಹಿರಂಗ ಹರಾಜು ಮಾಡಲಾಯಿತು. ರಥಕ್ಕೆ ಪೂಜೆ ಸಲ್ಲಿಸಿದ ಬಳಿಕ ಮಠದ ಪೀಠಾಧಿಪತಿ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅವರು ರಥದಲ್ಲಿ ಆಸೀನರಾದರು. ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಮೆರವಣಿಗೆಯಲ್ಲಿ ಅಂಲಕೃತಗೊಂಡ ಆನೆ, ವಿವಿಧ ಕಲಾವಿದರ ತಂಡಗಳು ಪಾಲ್ಗೊಂಡಿದ್ದವು. ರಥ ಎಳೆಯುವ ಮುನ್ನ ಭಕ್ತರು ಚಕ್ರಗಳಿಗೆ ತೆಂಗಿನಕಾಯಿ, ಬಾಳೆಹಣ್ಣುಗಳ ನೈವೇದ್ಯ ಸಮರ್ಪಿಸಿದರು. ರಥೋತ್ಸವಕ್ಕೆ ಆಗಮಿಸಿದ್ದ ಹಾಗೂ ಹರಕೆ ಹೊತ್ತ ಭಕ್ತರು ರಥಕ್ಕೆ ಉತ್ತುತ್ತಿ, ಬಾಳೆಹಣ್ಣು ಎಸೆದು ಭಕ್ತಿ ಮೆರೆದರು.
ರಥವು ಶ್ರೀಮಠದಿಂದ ಪ್ರಾರಂಭವಾಗಿ ವಿವಿಧ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಸಾಗಿ ಪುನಃ ಶ್ರೀಮಠಕ್ಕೆ ವಾಪಾಸಾಯಿತು. ಭಕ್ತರು ರಥ ಎಳೆಯುತ್ತಾ ಚನ್ನಪ್ಪ ಸ್ವಾಮಿಗಳಿಗೆ ಜಯವಾಗಲಿ... ಲಿಂ. ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಜಯವಾಗಲಿ ಎನ್ನುವ ಘೋಷಣೆಗಳನ್ನು ಮೊಳಗಿಸಿದರು.ಕೆಂಡದರ್ಚನೆ:
ರಥೋತ್ಸವಕ್ಕೂ ಮುನ್ನ ಬೆಳಗ್ಗೆ 11 ಗಂಟೆಗೆ ಶ್ರೀ ಮಠದ ಮುಂಭಾಗದಲ್ಲಿ ವೀರಭದ್ರ ದೇವರ ಕೆಂಡದರ್ಚನೆ ನೆರವೇರಿಸಲಾಯಿತು. ವೀರಭದ್ರ ದೇವರ ಪಲ್ಲಕ್ಕಿ ಮೊದಲು ಕೆಂಡ ಹಾಯ್ದ ನಂತರ ಮಕ್ಕಳು, ಹೆಣ್ಣುಮಕ್ಕಳು, ಪುರುಷರು-ಮಹಿಳೆಯರು, ವೃದ್ಧರು ಕೆಂಡ ತುಳಿದು ಹರಕೆ ತೀರಿಸಿದರು.ಸಾಮೂಹಿಕ ಭೋಜನ:
ರಥೋತ್ಸವ ಮತ್ತು ಕೆಂಡದರ್ಚನೆ ಕಾರ್ಯಕ್ರಮಕ್ಕೆ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರಿಗೆ ಶ್ರೀಮಠದ ಆವರಣದಲ್ಲಿ ಸಾಮೂಹಿಕ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ಗೋಧಿ ಪಾಯಸ, ಅನ್ನ, ಸಾಂಬಾರು, ಪಲ್ಯ ಸ್ವೀಕರಿಸಿದರು. ಶನಿವಾರ ಶ್ರೀ ಮಠದಲ್ಲಿ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಅಮಾವಾಸ್ಯೆ ವಿಶೇಷ ಪೂಜೆ ಕೈಂಕರ್ಯಗಳು, ಶ್ರೀಗುರು ಚನ್ನೇಶ್ವರ ಬೆಳ್ಳಿ ರಥೋತ್ಸವ ನಡೆಯಲಿದೆ. ಸಂಜೆ ಓಕಳಿ ರಂಗದಾಟ, ರಥ ಶಾಂತಿ ಕಾರ್ಯಕ್ರಮ ನಡೆಯಲಿದೆ.- - -
-22ಎಚ್.ಎಲ್.ಐ1.ಜೆಪಿಜಿ:ಹಿರೇಕಲ್ಮಠದಲ್ಲಿ ಶುಕ್ರವಾರ ಶ್ರೀ ಚನ್ನಪ್ಪ ಸ್ವಾಮಿ ಮಹಾರಥೋತ್ಸವ ಸಂಪನ್ನಗೊಂಡಿತು.