ರಾಮನಗರ: ಶಾಸಕ ಇಕ್ಬಾಲ್ ಹುಸೇನ್ ರಾಮೋತ್ಸವ ಪ್ರಯುಕ್ತ ರಾಮನೂರಿನಲ್ಲಿ ಆಯೋಜಿಸಿದ್ದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಶನಿವಾರ ಶ್ರದ್ಧಾಭಕ್ತಿಯಿಂದ ಅದ್ಧೂರಿಯಾಗಿ ಸಂಪನ್ನಗೊಂಡಿತು.
ತಿರುಮಲದಲ್ಲಿನ ಶ್ರೀದೇವಿ, ಭೂದೇವಿ ಸಮೇತ ಶ್ರೀ ಶ್ರೀನಿವಾಸ ದೇವರ ಮೂಲ ವಿಗ್ರಹಗಳು ಕಲ್ಯಾಣೋತ್ಸವ ಸ್ಥಳಕ್ಕೆ ಆಗಮಿಸಿದ ಬಳಿಕ ಕಲ್ಯಾಣೋತ್ಸವ ಪ್ರಕ್ರಿಯೆಗಳು ಆರಂಭಗೊಂಡವು. ಪುರೋಹಿತರ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಶುರುವಾಗಿ ರಾತ್ರಿ 8.30ರ ವೇಳೆಗೆ ಶ್ರೀದೇವಿ-ಭೂದೇವಿಯವರ ಕನ್ಯಾದಾನ ನಡೆಯಿತು. ಬಳಿಕ ಮಾಂಗಲ್ಯ ಪೂಜೆ, ಭಕ್ತರ ಅಣತಿ ಪಡೆದು ಮಾಂಗಲ್ಯ ಧಾರಣೆ ನೆರವೇರಿತು.
ಶ್ರೀನಿವಾಸ ಕಲ್ಯಾಣೋತ್ಸವ ತಿರುಪತಿ ಮಾದರಿಯಲ್ಲಿಯೇ ಭಕ್ತಿ, ಸಂಪ್ರದಾಯದಂತೆ ನೆರವೇರಿಸಿದರು. ಪುರೋಹಿತರ ಮಂತ್ರ ಘೋಷಗಳು ಜನರನ್ನು ಭಕ್ತಿಯಲ್ಲಿ ಮಿಂದೇಳುವಂತೆ ಮಾಡಿತು.ಲೋಕಕಲ್ಯಾಣಾರ್ಥಕ್ಕಾಗಿ ನಡೆದ ಕಲ್ಯಾಣೋತ್ಸವದ ಪೂಜಾ ಕಾರ್ಯಕ್ರಮದಲ್ಲಿ ಶಾಸಕ ಇಕ್ಬಾಲ್ ಹುಸೇನ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ.ರಾಜು, ಬಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ವಿಜಯ್ ದೇವ್ ಹಾಗೂ ಕಾಂಗ್ರೆಸ್ ಮುಖಂಡ ನರಸಿಂಹಯ್ಯ ದಂಪತಿ ಪಾಲ್ಗೊಂಡು ವಿವಿಧ ಪೂಜಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಎಲ್ಲೆಲ್ಲೂ ವೇದಘೋಷ:ಶ್ರೀನಿವಾಸ ಕಲ್ಯಾಣೋತ್ಸವವನ್ನು ಕಣ್ತುಂಬಿಕೊಂಡ ಭಕ್ತರು ಗೋವಿಂದ ... ಗೋವಿಂದ ... ಎಂದು ಜಪಿಸಿ ದೇವರನ್ನು ಭಕ್ತಿಯಿಂದ ಆರಾಧಿಸಿದರು. ಭಕ್ತರಿಗೆ ಕಲ್ಯಾಣೋತ್ಸವ ವೀಕ್ಷಿಸಲು ಅನುಕೂಲವಾಗುವಂತೆ ಎಲ್‌ಇಡಿ ಪರದೆ ವ್ಯವಸ್ಥೆ ಮಾಡಲಾಗಿತ್ತು. ಶ್ರೀನಿವಾಸ ಕಲ್ಯಾಣ ಸಂಪನ್ನಗೊಳ್ಳುವರೆಗೂ ವೇದ ಮಂತ್ರ ಘೋಷಗಳ ಪಠಣ ಎಲ್ಲೆಡೆ ಮೊಳಗುತ್ತಿತು. ಜಿಲ್ಲಾ ಕ್ರಿಡಾಂಗಣದ ರಸ್ತೆಗಳಲ್ಲಿಯೂ ಇದೇ ಘೋಷಣಗಳು ರಿಂಗಣಿಸುತ್ತಿದ್ದವು.
ಧಾರ್ಮಿಕ ಕೈಂಕರ್ಯ: ಸಂಜೆ 6ರಿಂದ 8.30 ಗಂಟೆವರೆಗೆ ನಡೆದ ಧಾರ್ಮಿಕ ಕೈಂಕರ್ಯಗಳು ಧನ್ಯತಾ ಭಾವ ಮೂಡಿಸಿತು. ವೇದಿಕೆ ಮುಂಭಾಗ ಭಕ್ತರಿಗಾಗಿ ಆಸನಗಳ ವ್ಯವಸ್ಥೆ ಮಾಡಲಾಗಿತ್ತು. ಕಲ್ಯಾಣೋತ್ಸವದಲ್ಲಿ ಭಾಗಿಯಾದ ಪ್ರತಿಯೊಬ್ಬರು ಸಾಂಪ್ರದಾಯಿಕ ಉಡುಗೆಯಲ್ಲಿ ಆಗಮಿಸಿದ್ದರು. ಕಲ್ಯಾಣೋತ್ಸವ ಬಳಿಕ ಶಾಸಕ ಇಕ್ಬಾಲ್ ಹುಸೇನ್ ತಿರುಪತಿಯಿಂದಲೇ ತರಿಸಿದ್ದ ಲಡ್ಡುಗಳನ್ನು ಭಕ್ತರಿಗೆ ವಿತರಿಸಿದ್ದು, ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು.17ಕೆಆರ್ ಎಂಎನ್ 4.ಜೆಪಿಜಿ
ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಶನಿವಾರ ಶ್ರದ್ಧಾಭಕ್ತಿಯಿಂದ ನೆರವೇರಿತು.