ಉಚ್ಚಿಲ: ಮೊಗವೀರ ಮಹಾಜನ ಸಂಘದ ವತಿಯಿಂದ ವರ್ಷದಿಂದ ವರ್ಷಕ್ಕೆ ವೈಭವ, ಪ್ರಸಿದ್ಧಿ ಪಡೆದುಕೊಳ್ಳುತ್ತಿರುವ ಉಡುಪಿ ಉಚ್ಚಿಲ ದಸರಾ ನಿಜಾರ್ಥದಲ್ಲಿ ದೇವಿಯರನ್ನು ಪೂಜಿಸುವ ಮಹಿಳೆಯರ ಹಬ್ಬವೇ ಆಗಿ ಆಚರಿಸಲ್ಪಡುತ್ತಿದೆ.ಇಲ್ಲಿ ಪ್ರತಿನಿತ್ಯ ಭೇಟಿ ನೀಡುತ್ತಿರುವ ಲಕ್ಷಕ್ಕೂ ಅಧಿಕ ಭಕ್ತರಲ್ಲಿ ಮಹಿಳೆಯರ ಸಂಖ್ಯೆಯೇ ಗಣನೀಯವಾಗಿದೆ. ಜೊತೆಗೆ ಇಲ್ಲಿನ ಕಾರ್ಯಕ್ರಮಗಳ ಶಿಸ್ತು ಕಾಪಾಡುವಲ್ಲಿ, ಅಚ್ಚುಕಟ್ಟುತನ ನಿರ್ವಹಿಸುವಲ್ಲಿ ಸ್ವಯಂಸೇವಕಿಯರ ಪಾತ್ರವೇ ಪ್ರಮುಖವಾಗಿದೆ.
ಪ್ರತಿದಿನ ಸಂಜೆ 5.45ರಿಂದ 6.15ರವರೆಗೆ ನಡೆಯುವ ಸಾಮೂಹಿಕ ಕುಂಕುಮಾರ್ಚನೆಯಲ್ಲಿ ಸಾವಿರಕ್ಕೂ ಅಧಿಕ ಮಂದಿ ಸುಮಂಗಲೆಯರು ಭಕ್ತಿಭಾವದಿಂದ ಭಾಗವಹಿಸುತಿದ್ದಾರೆ. ಲತಿತ ಪಂಚಮಿಯಂದು 5 ಸಾವಿರ ಮಂದಿ ಶಾರದೆ ಮತ್ತು ನವದುರ್ಗೆಯರಿಗೆ ಕುಂಕುಮದಿಂದ ಅರ್ಚನೆ ಮಾಡಿದ್ದು ಕ್ಷೇತ್ರದಲ್ಲಿ ದಾಖಲೆಯಾಗಿದೆ.
ಈ ಬಾರಿ 5 ಸಾವಿರಕ್ಕೂ ಅಧಿಕ ಮಂದಿ ಮಹಿಳೆಯರಿಗೆ ದೇವಿಯ ಶೇಷವಸ್ತ್ರಗಳನ್ನು, ಮುಖ್ಯ ವೇದಿಕೆಯಲ್ಲಿ ನಾಡೋಜ ಜಿ. ಶಂಕರ್ ಉಪಸ್ಥಿತಿಯಲ್ಲಿ ಶಾಲಿನಿ ಶಂಕರ್ ಅವರು ವಿತರಣೆ ಮಾಡಿದ್ದೂ ಕೂಡ ಒಂದು ದಾಖಲೆಯಾಯಿತು.ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕಿನ ಪ್ರಾಯೋಜಕತ್ವದಲ್ಲಿ ವಿಶೇಷವಾಗಿ ಮಹಿಳೆಯರಿಗಾಗಿಯೇ ಹುಲಿವೇಷ ಕುಣಿತ ಸ್ಪರ್ಧೆ - ಪೊಣ್ಣು ಪಿಲಿ ನಲಿಕೆಯನ್ನು ನಡೆಸಿದ್ದು, ತುಳುನಾಡಿನ ಮಹಿಳೆಯರ ಪ್ರತಿಭಾ ಅನಾವರಣಕ್ಕೆ ಕಾರಣವಾಯಿತು. ಸುಮಾರು 200ಕ್ಕೂ ಅಧಿಕ ಹೆಣ್ಣುಮಕ್ಕಳು ಅಬ್ಬರದ ತಾಸೆಗೆ ಪೆಟ್ಟಿಗೆ ಹೆಣ್ಣು ಹುಲಿಗಳಾಗಿ ಕುಣಿದು, ಗಂಡು ಮಕ್ಕಳಿಗೆ ತಾವೇನೂ ಕಮ್ಮಿ ಇಲ್ಲ ಎಂದು ಸಾಬೀತು ಮಾಡಿದರು.
ಪ್ರಥಮ ಬಾರಿಗೆ ಮಹಿಳಾ ದಸರಾ !