ಧಾರವಾಡದಲ್ಲಿ ಶುರುವಾಗಿದೆ ನವರಾತ್ರಿ ವೈಭವ

KannadaprabhaNewsNetwork |  
Published : Oct 12, 2026, 02:00 AM IST
ಧಾರವಾಡದ ಕಿಲ್ಲಾ ಬಳಿಯ ದುರ್ಗಾ ದೇವಿ ದೇವಸ್ಥಾನದಲ್ಲಿ ದೇವಿಗೆ ಗೆಜ್ಜೆ ವಸ್ತ್ರ ಅಲಂಕಾರ | Kannada Prabha

ಸಾರಾಂಶ

ಒಂಬತ್ತು ದಿನಗಳ ಕಾಲ ಉಪವಾಸ, ದೇವಿ ಮಹಾತ್ಮೆ ಪಠಣ, ಜಗತ್ತಿನ ಒಳಿತಿಗಾಗಿ ಹೋಮ-ಹವನಗಳು ಮತ್ತು ಹತ್ತನೇ ದಿನ ವಿಜಯದಶಮಿಯಂದು ಬನ್ನಿ ಮುಡಿಯುವ ಹಾಗೂ ಜಂಬೂ ಸವಾರಿ ಸಂಪ್ರದಾಯಕ್ಕೆ ಇದೀಗ ಮುನ್ನುಡಿ ದೊರೆತಿದೆ.

ಧಾರವಾಡ: ಸಂಪೂರ್ಣ ಒಂಭತ್ತು ದಿನಗಳ ಕಾಲ ದೇವಿ ಆರಾಧನೆ, ಪೂಜೆ ಮಾಡುವ ನವರಾತ್ರಿ ಹಬ್ಬವು ಧಾರವಾಡದಲ್ಲಿ ಭಕ್ತಿಯ ಜತೆಗೆ ವೈಭವದಿಂದ ಶುರುವಾಗಿದೆ. ನಗರದ ಎಲ್ಲ ದೇವಿ ದೇವಸ್ಥಾನಗಳಲ್ಲಿ ನವರಾತ್ರಿ ಹಬ್ಬದ ಕಳೆಗಟ್ಟಿದೆ.

ಒಂಬತ್ತು ದಿನಗಳ ಕಾಲ ಉಪವಾಸ, ದೇವಿ ಮಹಾತ್ಮೆ ಪಠಣ, ಜಗತ್ತಿನ ಒಳಿತಿಗಾಗಿ ಹೋಮ-ಹವನಗಳು ಮತ್ತು ಹತ್ತನೇ ದಿನ ವಿಜಯದಶಮಿಯಂದು ಬನ್ನಿ ಮುಡಿಯುವ ಹಾಗೂ ಜಂಬೂ ಸವಾರಿ ಸಂಪ್ರದಾಯಕ್ಕೆ ಇದೀಗ ಮುನ್ನುಡಿ ದೊರೆದಿದೆ.

ದಸರಾ ಸಂಭ್ರಮ: ಎರಡು ದಶಕಗಳಿಂದ ಧಾರವಾಡ ಜಂಬೂ ಸವಾರಿ ಉತ್ಸವ ಸಮಿತಿಯಿಂದ ಧಾರವಾಡದಲ್ಲಿ ನವರಾತ್ರಿ ಹಾಗೂ ಜಂಬೂ ಸವಾರಿ ಮೆರವಣಿಗೆ ನಡೆಯುತ್ತಿದೆ. ಈಗಾಗಲೇ ಗಾಂಧಿನಗರ ಬಂಡೆಮ್ಮ ದೇವಸ್ಥಾನದಲ್ಲಿ ಪೂಜಾ ಕಾರ್ಯಗಳು ಶುರುವಾಗಿದ್ದು, 10ನೇ ದಿನ ಅ. 20ರಂದು ಅಂಬಾರಿ ಪೂಜೆ ನಂತರ ಮೆರವಣಿಗೆ ನಡೆಯಲಿದೆ. ಇದರೊಂದಿಗೆ ಈ ಸಂದರ್ಭದಲ್ಲಿ ನಾಡಿನ ಮಠಾಧೀಶರು, ಗಣ್ಯರು ಜಂಬೂ ಸವಾರಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ನಾಡಿನಾದ್ಯಂತ ಕಲಾವಿದರು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಧಾರವಾಡಕ್ಕೆ ಇದೊಂದು ಹೆಮ್ಮೆಯ ಆಚರಣೆ ಎಂದು ಉತ್ಸವದ ಸಮಿತಿ ಅಧ್ಯಕ್ಷ ಗುರುರಾಜ ಹುಣಸೀಮರದ ಹೇಳುತ್ತಾರೆ.ಕರಿಯಮ್ಮ ದೇವಿ: ಇಲ್ಲಿಯ ಕೆಲಗೇರಿ ರಸ್ತೆಯ ಶಾಂತಿ ನಿಕೇತನ ನಗರದಲ್ಲಿರುವ ಶ್ರೀ ಕರಿಯಮ್ಮ ದೇವಸ್ಥಾನದಲ್ಲಿ ಹಲವು ವರ್ಷಗಳಿಂದ ನವರಾತ್ರಿ ಉತ್ಸವ ಹಾಗೂ ಸಡಗರ ವಿಜೃಂಬಣೆಯಿಂದ ನಡೆಯುತ್ತಿದೆ. ಈ ಬಾರಿಯೂ ಭಾನುವಾರ ರೇಣುಕಾ ಯಲ್ಲಮ್ಮ ಅಲಂಕಾರದಿಂದ ಶುರುವಾಗಿದೆ. ಗಾಯತ್ರಿ, ಪದ್ಮಾವತಿ, ಅಂಬಾ ಭವಾನಿ, ಸರಸ್ವತಿ, ಲಕ್ಷ್ಮಿದೇವಿ, ಶಾಖಾಂಬರಿ, ಅನ್ನಪೂರ್ಣೇಶ್ವರಿ, ಮಹಾಗೌರಿ ಹಾಗೂ ಅ. ೨೦ರಂದು ಮಹಿಷಾಸುರ ಮರ್ದಿನಿ ದೇವಿಯ ಅಲಂಕಾರ ಮಾಡಲಾಗುತ್ತಿದೆ. ದೇವಿ ಅಲಂಕಾರ ಮಾತ್ರವಲ್ಲದೇ, ಸುಮಂಗಲೆಯರಿಂದ ಕುಂಕುಮಾರ್ಚನೆ, ನಿತ್ಯ ಅನ್ನ ಸಂತರ್ಪಣೆ ನಡೆಯಲಿದೆ. ಅಲಂಕೃತ ಪಲ್ಲಕ್ಕಿ ಉತ್ಸವ ನಡೆಯಲಿದ್ದು, ನಿತ್ಯ ಸಾವಿರಾರು ಭಕ್ತರು ದೇವಿ ದರ್ಶನ ಪಡೆಯಲಿದ್ದಾರೆ.

ಕಿಲ್ಲಾ ದುರ್ಗಾದೇವಿ: ಹಾಗೆಯೇ, ಧಾರವಾಡದ ಅತ್ಯಂತ ಹಳೆಯ ದೇವಸ್ಥಾನಗಳಲ್ಲಿ ಒಂದಾದ ಕಿಲ್ಲಾ ದುರ್ಗಾದೇವಿ ದೇವಸ್ಥಾನದಲ್ಲಿ ಶರನ್ನವರಾತ್ರಿಯ ಮೊದಲ ದಿನ ಭಾನುವಾರ ಭಕ್ತಿಭಾವದಿಂದ ನಡೆಯಿತು. ಗೆಜ್ಜೆ ವಿಶೇಷ ಅಲಂಕಾರ ಮಾಡಲಾಗಿದ್ದು, ದೇವಿಯ ದರ್ಶನ ಪಡೆಯಲು ಬೆಳಗ್ಗಿನಿಂದಲೇ ಅಪಾರ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದರು.ಉತ್ತರಾದಿಮಠ: ಧಾರವಾಡದ ಮಾಳಮಡ್ಡಿಯಲ್ಲಿ ನೂತನವಾಗಿ ನಿರ್ಮಿಸಿದ ಉತ್ತರಾದಿ ಮಠದಲ್ಲಿ ಉತ್ತರಾದಿ ಮಠಾಧೀಶ ಸತ್ಯಾತ್ಮತೀರ್ಥ ಶ್ರೀಪಾದಂಗಳವರಿಂದ ಪ್ರತಿಷ್ಠಾಪಿಸಲ್ಪಟ್ಟ ಸರ್ವವಿದ್ಯಾಪ್ರದ ಶ್ರೀಹಯಗ್ರೀವದೇವರ ಸನ್ನಿಧಾನದಲ್ಲಿ ಶ್ರೀನಿವಾಸದೇವರ ನವರಾತ್ರಿ ಉತ್ಸವ ಹಮ್ಮಿಕೊಳ್ಳಲಾಗಿದೆ.

ಪ್ರತಿದಿನ ಬೆಳಗ್ಗೆ ಹಯಗ್ರೀವ ದೇವರಿಗೆ ನಂದಾದೀಪ ಸಮರ್ಪಣೆ, ಪಂಚಾಮೃತ ಅಭಿಷೇಕ ಮಹಾಪೂಜೆ, ಶ್ರೀನಿವಾಸ ಕಲ್ಯಾಣ ಉಪನ್ಯಾಸ, ಅಷ್ಠಾವಧಾನ, ಮಹಾಮಂಗಳಾರತಿ, ಕಾರ್ಯಕ್ರಮಗಳನ್ನು ಆಯೋಜಿಸಿದೆ. ಅ. 12ರ ಸೋಮವಾರ ಸಂಜೆ 6.30ಕ್ಕೆ ಶ್ರೀನಿವಾಸ ಕಲ್ಯಾಣ ಉಪನ್ಯಾಸ ನಡೆಯಲಿದೆ.ದುರ್ಗಾ ದೌಡ: ಹಾಗೆಯೇ, ಧಾರವಾಡದಲ್ಲಿ ಕೆಲವು ವರ್ಷಗಳಿಂದ ಹಿಂದೂ ಸಂಘಟನೆಗಳಿಂದ ದುರ್ಗಾ ದೌಡ ಆಚರಣೆಯೂ ನಡೆಯುತ್ತಿದೆ. ಅ. 12ರಂದು ಕಿಲ್ಲಾದ ದುರ್ಗಾ ದೇವಿ ದೇವಸ್ಥಾನದಿಂದ ಇದು ನಡೆಯಲಿದ್ದು, 13ರಂದು ಗುಲಗಂಜಿಕೊಪ್ಪ ಗ್ರಾಮದೇವಿ ದೇವಸ್ಥಾನದಿಂದ ಬೆಳಗ್ಗೆ 6.30ಕ್ಕೆ ಪ್ರಾರಂಭವಾಗಿ ಹಾವೇರ ಪೇಟೆ ಗ್ರಾಮದೇವಿ ದೇವಸ್ಥಾನದಲ್ಲಿ ವಾಸ್ತವ್ಯ ಆಗಲಿದೆ. 14ರಂದು ಬೆಳಗ್ಗೆ 6.30ಕ್ಕೆ ಹಾವೇರಪೇಟಿ ಗ್ರಾಮದೇವಿ ದೇವಸ್ಥಾನದಿಂದ ಪ್ರಾರಂಭವಾಗಿ ಮದಿಹಾಳ ಮೂರುಸಾವಿರ ಮಠ ದಾನಮ್ಮ ದೇವಸ್ಥಾನಕ್ಕೆ ವಾಸ್ತವ್ಯ. ಅ. 15ರ ಬೆಳಗ್ಗೆ 6.30ಕ್ಕೆ ಮೂರುಸಾವಿರ ಮಠ ದಾನಮ್ಮ ದೇವಿಯ ಗುಡಿಯಿಂದ ನಂದಿಕೋಲ ಬಸವೇಶ್ವರ ದೇವಸ್ಥಾನ ವಾಸ್ತವ್ಯ. ಅ. 16ರಂದು ನಂದಿಕೋಲ ಬಸವೇಶ್ವರ ದೇವಸ್ಥಾನದಿಂದ ಹಿರೇಮಠ ಹೊಸೆಲ್ಲಾಪುರದಲ್ಲಿ ವಾಸ್ತವ್ಯ. 17ರಂದು ಹಿರೇಮಠ ಹೊಸಯಲ್ಲಾಪುರದಿಂದ ಪ್ರಾರಂಭಿಸಿ ಎಲ್ಲಮ್ಮ ಬೀರದೇವರ ದೇವಸ್ಥಾನ ಕುರುಬರ ಓಣಿ ವಾಸ್ತವ್ಯ ಆಗಲಿದೆ. ಹೀಗೆ ಅ. 20ರ ವರೆಗೆ ವಿವಿಧ ದೇವಸ್ಥಾನಗಳಲ್ಲಿ ದುರ್ಗಾ ದೌಡ್‌ ನಡೆಯಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಶೆ ಮುಕ್ತ ಜೀವನ ಅಳವಡಿಸಿಕೊಳ್ಳಿ: ವೀಣಾ
ಕಾಂಗ್ರೆಸ್ಸಿಗೆ ಪಾಠ ಕಲಿಸಲು ಸಕಾಲ: ಜೋಶಿ