75 ನೇ ಗಣೇಶೋತ್ಸವದಲ್ಲಿ ಸನ್ಮಾನ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಊರಿನಲ್ಲಿ ಪ್ರತಿಬೀದಿಯಲ್ಲಿ ಬೇರೆ, ಬೇರೆ ಸಂಘ ಸಂಸ್ಥೆಗಳ ಹೆಸರಿನಲ್ಲಿ ಹಲವು ಗಣಪತಿ ಪ್ರತಿಷ್ಠಾಪಿಸುವ ಬದಲು ಎಲ್ಲರೂ ಒಗ್ಗಟ್ಟಾಗಿ ಒಂದೇ ಗಣಪತಿ ಪ್ರತಿಷ್ಠಾಪಿಸಿದರೆ ಹಬ್ಬದ ವೈಭವ ಹೆಚ್ಚಲಿದೆ ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಅಭಿಪ್ರಾಯಪಟ್ಟರು.
ಶುಕ್ರವಾರ ರಾತ್ರಿ ಪಟ್ಟಣ ವಿದ್ಯಾಗಣಪತಿ ಸಂಘದಿಂದ 75ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ನರಸಿಂಹರಾಜಪುರದಲ್ಲಿ ನಾನು 50 ವರ್ಷಕ್ಕೂ ಹಿಂದೆ ಗಣೇಶೋತ್ಸವ ನೋಡಿದ್ದು ಇಡೀ ಊರಿಗೆ ವಿದ್ಯಾಗಣಪತಿ ಸಂಘದಿಂದ ಪ್ರತಿಷ್ಠಾಪಿಸುತ್ತಿದ್ದ ಒಂದೇ ಗಣಪತಿ ಇತ್ತು. ಶ್ರದ್ಧಾ ಭಕ್ತಿಯಿಂದ ಊರಿನವರೆಲ್ಲಾ ಸೇರಿ ಹಬ್ಬ ಆಚರಿಸುತ್ತಿದ್ದರು. ಪ್ರಸ್ತುತ ಬೀದಿಗೊಂದು ಗಣಪತಿ ಪ್ರತಿಷ್ಠಾಪಿಸುತ್ತಿರುವುದರಿಂದ ಭಕ್ತಿ ಕಡಿಮೆಯಾಗುತ್ತದೆ. ಈ ನಿಟ್ಟಿನಲ್ಲಿ ಊರಿನ ಪ್ರಮುಖರೆಲ್ಲಾ ಸೇರಿ ಚಿಂತನೆ ನಡೆಸಿದರೆ ಖರ್ಚು ವೆಚ್ಚ ಕಡಿಮೆಯಾಗಲಿದೆ ಎಂದರು.ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾರತೀಯರನ್ನು ಒಟ್ಟುಗೂಡಿಸಲು ಗಣೇಶೋತ್ಸವ ಸಾರ್ವಜನಿಕ ಸಮಾರಂಭವಾಗಿ ಆರಂಭಿಸಿದರು. ಹಿರಿಯರು ಹೇಳುವ ಪ್ರಕಾರ ನರಸಿಂಹರಾಜಪುರದಲ್ಲಿ ಒಂದೇ ಗಣಪತಿ ಪ್ರತಿಷ್ಠಾಪಿಸಲಾಗುತ್ತಿತ್ತು. ಆದರೆ, ಪ್ರಸ್ತುತ ಹಲವು ಭಾಗಗಳಲ್ಲಿ ಗಣಪತಿ ಪ್ರತಿಷ್ಠಾಪಿಸಿರುವುದರಿಂದ ದೇಣಿಗೆ ನೀಡುವವರಿಗೂ ಸಮಸ್ಯೆಯಾಗಲಿದೆ. ಬಾಳೆಹೊನ್ನೂರು, ಕೊಪ್ಪದಲ್ಲಿ ಒಂದೇ ಗಣಪತಿ ಪ್ರತಿಷ್ಠಾಪಿಸಲಾಗುತ್ತಿದೆ. ಒಂದೇ ಗಣಪತಿ ಪ್ರತಿಷ್ಠಾಪಿಸುವುದರಿಂದ ಹತ್ತು ಹಲವು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ಮೂಲಕ ವೈಭವ ದಿಂದ ಗಣೇಶೋತ್ಸವ ಆಚರಿಸಬಹುದು. ಕಲವಾವಿದರಿಗೂ ಪ್ರೋತ್ಸಾಹ ನೀಡಿದಂತಾಗುತ್ತದೆ. ಗಣಪತಿ ವಿಘ್ನ ವಿನಾಶಕನಾಗಿದ್ದಾನೆ. ಈ ವರ್ಷ ಅತಿವೃಷ್ಟಿಯಿಂದ ರೈತರ ಬೆಳೆ ನಷ್ಟವಾಗುತ್ತಿದೆ. ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಇವೆಲ್ಲ ಸಮಸ್ಯೆಗಳು ನಿವಾರಣೆಯಾಗಲಿ ಎಂದರು.
ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್ .ಶೆಟ್ಟಿ ಮಾತನಾಡಿ, ಊರಿನ ಹಿರಿಯರು ಕಳೆದ 75 ವರ್ಷ ಗಳಿಂದ ಒಟ್ಟಾಗಿ ಗಣೇಶೋತ್ಸವ ಆಚರಿಸುತ್ತಿದ್ದಾರೆ. ಎಂ.ಶ್ರೀನಿವಾಸ್ ಅವರು ವಿಧಾನಪರಿಷತ್ ಸದಸ್ಯರಾಗಿದ್ದ ಊರಿನ ಎಲ್ಲಾ ಧರ್ಮದ ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ ಕಾಯಕಲ್ಪ ಕಲ್ಪಿಸುವ ಕೆಲಸ ಮಾಡಿದ್ದಾರೆ. 100 ಕ್ಕೂ ಅಧಿಕ ದೇವಸ್ಥಾನ ಗಳನ್ನು ಜೀರ್ಣೋದ್ಧಾರ ಮಾಡುವ ಮೂಲಕ ಹಿಂದೂ ಧರ್ಮ, ಸಂಸ್ಕೃತಿ ಉಳಿಯಲು ಸಹಕಾರ ನೀಡಿದ್ದಾರೆ ಎಂದರು.ವಿದ್ಯಾಗಣಪತಿ ಸಂಘದ ಅಧ್ಯಕ್ಷ ಆರ್.ಕುಮಾರಸ್ವಾಮಿ ಮಾತನಾಡಿ, ನರಸಿಂಹರಾಜಪುರ ತಾಲೂಕು ರಾಜ್ಯದಲ್ಲಿಯೇ ಸೌಹಾರ್ದತೆಗೆ ಹೆಸರಾಗಿದೆ. ಊರಿನ ಹಿರಿಯರು ವಿದ್ಯಾಗಣತಿ ಸಂಘದಿಂದ 75 ವರ್ಷದಿಂದ ಎಲ್ಲಾ ಜಾತಿ, ಧರ್ಮದವರು ಸೇರಿ ಸೌಹಾರ್ದತೆಯಿಂದ ಗಣೇಶೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ದಾನಿಗಳು ಹೆಚ್ಚಿನ ಸಹಕಾರ ನೀಡಿದ್ದಾರೆ ಎಂದರು.
ಜಿಪಂ ಮಾಜಿ ಸದಸ್ಯ ಪಿ.ಆರ್.ಸದಾಶಿವ ಮಾತನಾಡಿ, ಮಾರಿಕಾಂಬ ಜಾತ್ರೆ ರೀತಿಯಲ್ಲಿ ಗಣೇಶೋತ್ಸವವನ್ನು ಇಡೀ ಊರಿನವರೆಲ್ಲಾ ಸೇರಿ ಆಚರಿಸುವ ಬಗ್ಗೆ ಚಿಂತಿಸ ಬೇಕಾಗಿದೆ ಎಂದರು.ಸಮಿತಿ ಮಾಜಿ ಅಧ್ಯಕ್ಷರಾದ ಕೆ.ವಿ.ಜಯಕರ, ಎಚ್.ಎನ್.ರವಿಶಂಕರ್ ಮಾತನಾಡಿದರು. ಇದೇ ಸಂದರ್ಭದಲ್ಲಿ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಹಾಗೂ ಶಾಸಕ ಟಿ.ಡಿ.ರಾಜೇಗೌಡ ಅವರನ್ನು ಗೌರವಿಸಲಾಯಿತು. ಸಮಾರಂಭದಲ್ಲಿ ವಿದ್ಯಾಗಣಪತಿ ಸಂಘದ ಮಾಜಿ ಅಧ್ಯಕ್ಷರಾದ ಎಚ್.ಕೆ. ಕೃಷ್ಣಮೂರ್ತಿ, ಕೆ.ವಿ.ವಿಜಯಕುಮಾರ್ , ಲಕ್ಷ್ಮಣ್ ಶೆಟ್ಟಿ, ಕೆ.ವಿ.ಜಯಕರ, ಕಮ್ತಿವಾಸಪ್ಪಗೌಡ, ಎಚ್.ಎನ್.ರವಿಶಂಕರ್, ಎಸ್.ಎಸ್.ಜಗದೀಶ್, ಪಿ.ಆರ್.ಸದಾಶಿವ, ವೈ.ಎಸ್. ರವಿ, ಎನ್.ಎಂ.ಕಾರ್ತಿಕ್, ಇಂದು ಶೇಖರ್ ಅವರನ್ನು ಸನ್ಮಾನಿಸಲಾಯಿತು.ನಯನ ಹಾಗೂ ಅಭಿನವ ಗಿರಿರಾಜ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಅಭಿನವ ಮ್ಯೂಸಿಕಲ್ಸ್ ನಿಂದ ಆರ್ಕೆಸ್ಟ್ರಾ ಕಾರ್ಯಕ್ರಮ ನಡೆಯಿತು.