ಅರಣ್ಯದಲ್ಲಿ ಬಿಟ್ಟೋಗಿದ್ದ ಅಜ್ಜಿ ಮರಳಿ ಮನೆಗೆ

KannadaprabhaNewsNetwork |  
Published : Jun 04, 2026, 02:45 AM IST
ಕಾಡಿನಲ್ಲಿ ಅನಾಥಳಾಗಿದ್ದ ವೃದ್ದೆ ಮಾನವೀಯತೆ ಆಸರೆಯಿಂದ ಮರಳಿ ತನ್ನ ಮನೆಯ ಗೂಡಿಗೆ ಸೇರಿದರು | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಸವದತ್ತಿ ತಾಲೂಕಿನ ಮುನವಳ್ಳಿ ಸಮೀಪದ ಅರಣ್ಯ ಇಲಾಖೆಯ ಕುರುಚಲು ಕಾಡಿನಲ್ಲಿ ಅನಾಥಳಂತೆ ಬಿಟ್ಟು ಹೋಗಲಾಗಿದೆ ಎಂಬ ಆರೋಪಕ್ಕೆ ಗುರಿಯಾಗಿದ್ದ ವೃದ್ಧೆ ಕೊನೆಗೂ ಮತ್ತೆ ತನ್ನ ಗೂಡು ಸೇರಿದ್ದಾಳೆ. ಸಾಮಾಜಿಕ ಹೋರಾಟ, ಮಾಧ್ಯಮಗಳ ನಿರಂತರ ಒತ್ತಡ ಹಾಗೂ ಅಧಿಕಾರಿಗಳ ಸ್ಪಂದನೆಯಿಂದ ಈ ವೃದ್ಧೆಯ ಬದುಕಿನಲ್ಲಿ ಮತ್ತೆ ಆಶಾಕಿರಣ ಮೂಡಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸವದತ್ತಿ ತಾಲೂಕಿನ ಮುನವಳ್ಳಿ ಸಮೀಪದ ಅರಣ್ಯ ಇಲಾಖೆಯ ಕುರುಚಲು ಕಾಡಿನಲ್ಲಿ ಅನಾಥಳಂತೆ ಬಿಟ್ಟು ಹೋಗಲಾಗಿದೆ ಎಂಬ ಆರೋಪಕ್ಕೆ ಗುರಿಯಾಗಿದ್ದ ವೃದ್ಧೆ ಕೊನೆಗೂ ಮತ್ತೆ ತನ್ನ ಗೂಡು ಸೇರಿದ್ದಾಳೆ. ಸಾಮಾಜಿಕ ಹೋರಾಟ, ಮಾಧ್ಯಮಗಳ ನಿರಂತರ ಒತ್ತಡ ಹಾಗೂ ಅಧಿಕಾರಿಗಳ ಸ್ಪಂದನೆಯಿಂದ ಈ ವೃದ್ಧೆಯ ಬದುಕಿನಲ್ಲಿ ಮತ್ತೆ ಆಶಾಕಿರಣ ಮೂಡಿದೆ.

ತಾಯಿಯ ಮಡಿಲಲ್ಲಿ ಬೆಳೆದು, ಆಕೆಯ ಆರೈಕೆಯಿಂದ ದೊಡ್ಡವನಾದ ಮಗನೇ ಒಂದು ದಿನ ತನ್ನ ವೃದ್ಧ ತಾಯಿಯನ್ನು ಕಾಡಿನಲ್ಲಿ ಬಿಟ್ಟು ಹೋಗಿದ್ದಾನೆ ಎಂಬ ಸುದ್ದಿ ಹೊರಬಿದ್ದಾಗ ಸಮಾಜವೇ ಬೆಚ್ಚಿಬಿದ್ದಿತ್ತು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧೆಯನ್ನು ಸವದತ್ತಿ ತಾಲೂಕಿನ ಮುನವಳ್ಳಿ ಸಮೀಪದ ಕುರುಚಲು ಕಾಡಿನಲ್ಲಿ ಅದು ರಾತ್ರಿ 10 ಗಂಟೆಗೆ ಬಿಟ್ಟು ಹೋಗಲಾಗಿದೆ ಎಂಬ ಸುದ್ದಿ ಜನರ ಮನಸನ್ನು ತಲ್ಲಣಗೊಳಿಸಿತ್ತು. ಆ ವೃದ್ಧೆಗೆ ಬೇಕಾಗಿದ್ದದ್ದು ಹಣ, ಆಸ್ತಿ ಅಥವಾ ಐಶ್ವರ್ಯವಲ್ಲ. ಜೀವನದ ಸಂಧ್ಯಾಕಾಲದಲ್ಲಿ ಮಗನ ಪ್ರೀತಿ, ಆರೈಕೆ ಮತ್ತು ಒಂದು ತುತ್ತು ಅನ್ನ ಮಾತ್ರ. ಆದರೆ, ಆಕೆಯ ಪಾಲಿಗೆ ಸಿಕ್ಕಿದ್ದು ನಿರ್ಲಕ್ಷ್ಯ, ಅವಮಾನ ಮತ್ತು ಏಕಾಂತ. ಔಷಧಗಳನ್ನು ಸಹ ಕಸಿದುಕೊಂಡು ಕಾಡಿನಲ್ಲಿ ಬಿಟ್ಟು ಹೋಗಲಾಗಿದೆ ಎಂಬ ಆರೋಪ ಘಟನೆಯ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿತ್ತು.

ಪ್ರಕರಣ ಬೆಳಕಿಗೆ ಬಂದ ತಕ್ಷಣ ಮಾಧ್ಯಮಗಳು ನಿರಂತರವಾಗಿ ವರದಿ ಮಾಡಿದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡ ಎಚ್ಚೆತ್ತುಕೊಂಡರು. ಸಾರ್ವಜನಿಕರು ಸಹ ಮಾನವೀಯ ನೆಲೆಯಲ್ಲಿ ಸ್ಪಂದಿಸಿ ವೃದ್ಧೆಯ ನೆರವಿಗೆ ಧಾವಿಸಿದರು. ನಿರಂತರ ಹೋರಾಟ ಮತ್ತು ಸಾರ್ವಜನಿಕ ಒತ್ತಡದ ಪರಿಣಾಮ ವೃದ್ಧೆ ಮತ್ತೆ ಸುರಕ್ಷಿತವಾಗಿ ತಮ್ಮ ಮನೆಗೆ ಮರಳಿದ್ದಾರೆ. ಕೆಲ ದಿನಗಳ ಹಿಂದೆ ಕಾಡಿನಲ್ಲಿ ಅನಾಥಳಂತೆ ಪತ್ತೆಯಾಗಿದ್ದ ಅಜ್ಜಿ ಬುಧವಾರ ಮತ್ತೆ ತನ್ನ ಕುಟುಂಬದ ಸದಸ್ಯರೊಂದಿಗೆ ಜೀವನ ಸಾಗಿಸುವಂತಾಗಿದೆ. ಆಕೆಯ ಪುತ್ರನ ವಿರುದ್ಧ ದೂರು:

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಕೇಶ್ವರ ಡಿಪೋದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಎಸ್‌ಆರ್‌ಟಿಸಿ ನೌಕರ ಸಂತೋಷ ಕಟ್ಟಿ ವಿರುದ್ಧ ಚಿಕ್ಕೋಡಿ ವಿಭಾಗೀಯ ವ್ಯವಸ್ಥಾಪಕರಿಗೆ ವಕೀಲ ಮಲ್ಲಿಕಾರ್ಜುನ ಚೌಕಾಶಿ ಎಂಬುವರು ದೂರು ನೀಡಿದ್ದಾರೆ. ವೃದ್ಧ ತಾಯಿಯ ಮೇಲೆ ದೌರ್ಜನ್ಯ ಎಸಗಿರುವುದು ಹಾಗೂ ಪಾಲನೆ, ಪೋಷಣೆ ಮಾಡದಿರುವ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು. ಸಂತೋಷ ಕಟ್ಟಿ ವಿರುದ್ಧ ಇಲಾಖೆಯ ಕೆಲ ಸಿಬ್ಬಂದಿಗೆ ಬಡ್ಡಿಗೆ ಹಣ ನೀಡಿ, ಹಣ ವಸೂಲಿಗಾಗಿ ಕಿರುಕುಳ ನೀಡಿರುವ ಆರೋಪವೂ ಕೇಳಿಬಂದಿದೆ. ಈ ಕುರಿತು ಇಲಾಖೆಯ ಆಂತರಿಕ ತನಿಖೆಯಲ್ಲಿ ಆರೋಪಗಳು ಸತ್ಯವೆಂದು ಕಂಡುಬಂದಿವೆ ಎನ್ನಲಾಗಿದ್ದು, ಪ್ರಕರಣದ ಕುರಿತು ಇಲಾಖೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

-------------

ಕೋಟ್‌.....

ನಮ್ಮ ನಿರಂತರ ಹೋರಾಟ, ಮಾಧ್ಯಮಗಳು ಹಾಗೂ ಹಿರಿಯ ಅಧಿಕಾರಿಗಳ ಸಮಯೋಚಿತ ಸಹಕಾರದಿಂದ ವೃದ್ಧ ಅಜ್ಜಿ ಮತ್ತೆ ತಮ್ಮ ಮನೆಗೆ, ಕುಟುಂಬದ ಗೂಡಿಗೆ ಮರಳಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಅಮಾನವೀಯ ಘಟನೆಗಳು ಮರುಕಳಿಸದಂತೆ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕು.

- ಮಲ್ಲಿಕಾರ್ಜುನ ಚೌಕಾಶಿ, ವಕೀಲರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳಗಾವಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ವಿಜಯೋತ್ಸವ
ಸತೀಶಗೆ 5ನೇ ಬಾರಿಗೆ ಒಲಿದ ಸಚಿವ ಪಟ್ಟ