ಕನ್ನಡಪ್ರಭ ವಾರ್ತೆ ಚಾಮರಾಜನಗರ
ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನದ ಹೆಚ್ಚಳ ಮಾಡುವ ಮಹತ್ವದ ಜವಾಬ್ದಾರಿ ಬೂತ್‌ಮಟ್ಟದ ಸಮಿತಿ ಸದಸ್ಯರ ಮೇಲಿದೆ ಎಂದು ಚಾಮರಾಜನಗರ ಲೋಕಸಭೆ ಚುನಾವಣೆ ಕಾಂಗ್ರೆಸ್ ಬೂತ್‌ಮಟ್ಟದ ಸಮಿತಿ ಉಸ್ತುವಾರಿ ಎಸ್.ಸಿ.ಬಸವರಾಜು ತಿಳಿಸಿದರು.ನಗರದ ಜಿಲ್ಲಾಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ನಡೆದ ಬೂತ್‌ಮಟ್ಟದ ಸಮಿತಿ ಅಧ್ಯಕ್ಷರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಲೋಕಸಭೆ ಚುನಾವಣೆ ಸಂಬಂಧ ಮತದಾರರ ಹೆಸರುಗಳಲ್ಲಿ ಲೋಪದೋಷವಿದ್ದರೆ ಸರಿಪಡಿಸುವುದು ಸೇರಿದಂತೆ ಮತದಾರರಿಗೆ ಅನೂಕೂಲ ಮಾಡಿಕೊಡುವುದು ಬೂತ್‌ಮಟ್ಟದ ಸಮಿತಿ ಸದಸ್ಯರ ಪ್ರಮುಖ ಹೊಣೆಗಾರಿಕೆಯಾಗಿದೆ.೨೦೧೩ ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೆ ತಂದ ಕಾರ್ಯಕ್ರಮಗಳು, ೨೦೨೩ ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ೫ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಸಮಿತಿ ಸದಸ್ಯರು ಮಾಡಬೇಕು, ಕಾಂಗ್ರೆಸ್ ಪಕ್ಷದ ವರಿಷ್ಠರ ಕೈಗಳನ್ನು ಬಲಪಡಿಸಬೇಕು ಎಂದು ಮನವಿ ಮಾಡಿದರು.
ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಇಂದಿನ ಯುವಪೀಳಿಗೆ ಮಾತೆತ್ತಿದರೆ ಮೋದಿ ಎನ್ನುತ್ತಾರೆ. ಮೋದಿಸರ್ಕಾರ ಜನರಿಗೆ ಯಾವ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್‌ಗೆ ಹೋಲಿಸಿದರೆ ಬಿಜೆಪಿ ಸರ್ಕಾರದ ಸಾಧನೆ ಶೂನ್ಯ ಎಂದರು.ಲೋಕಸಭೆ ಚುನಾವಣೆ ಸಂಬಂಧ ಮಾ.೨೯ರಂದು ನಗರದಲ್ಲಿ ಪಕ್ಷದ ವತಿಯಿಂದ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿದೆ. ಸಭೆಯಲ್ಲಿ ಚಾಮರಾಜನಗರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು, ಕೆಪಿಸಿಸಿ ಕಾರ್ಯಾಧ್ಯಕ್ಷರು ಸೇರಿದಂತೆ ಪಕ್ಷದ ಶಾಸಕರು ಭಾಗವಹಿಸುವರು. ಏ.೩ ರಂದು ಪಕ್ಷದ ಅಭ್ಯರ್ಥಿ ನಾಮಪತ್ರ ಸಲ್ಲಿಸಲಿದ್ದಾರೆ. ಅಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸುವ ಸಾಧ್ಯತೆ ಇದೆ. ಎರಡು ಕಾರ್ಯಕ್ರಮಗಳಿಗೆ ಪಕ್ಷದ ಕಾರ್ಯಕರ್ತರು, ಮುಖಂಡರು, ವಿವಿಧಘಟಕಗಳ ಪದಾಧಿಕಾರಿಗಳು ಹೆಚ್ಚಿನಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಪ್ರದಾನ ಕಾರ್ಯದರ್ಶಿ ಚಿಕ್ಕಮಹಾದೇವ್, ಆರ್.ಮಹಾದೇವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮದ್ ಅಸ್ಗರ್, ಎ.ಎಸ್.ಗುರುಸ್ವಾಮಿ, ಎಪಿಎಂಸಿ ಅಧ್ಯಕ್ಷ ಮಹದೇವಸ್ವಾಮಿ (ಸೋಮೇಶ್), ಸದಸ್ಯ ಎ.ಎಸ್.ಪ್ರದೀಪ್, ಮುಖಂಡರಾದ ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಕೆಲ್ಲಂಬಳ್ಳಿಸೋಮೇಶ್, ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ಪದ್ಮ ಪುರುಷೋತ್ತಮ್, ನಗರ ಘಟಕದ ಅಧ್ಯಕ್ಷೆ ನಾಗಶ್ರೀ, ಉಡಿಗಾಲ ನಂಜಪ್ಪ, ಬಿಸಲವಾಡಿ ರವಿ, ನಾಗಯ್ಯ, ಮರಿಸ್ವಾಮಿ, ದೊಡ್ಡರಾಯಪೇಟೆ ಮೂರ್ತಿ, ನಸ್ರುಲ್ಲಾ ಖಾನ್, ಅತೀಕ್ ಅಹಮದ್, ನಯಾಜ್, ಆಯೂಬ್ ಖಾನ್, ಮಹಾಲಿಂಗು, ಬೂತ್ ಮಟ್ಟದ ಸಮಿತಿ ಸದಸ್ಯರು ಮತ್ತಿತ್ತರರು ಹಾಜರಿದ್ದರು.