ಕಡೂರಿನ ಯಳನಡು ಮಹಾಸಂಸ್ಥಾನ ಮಠದಲ್ಲಿ ಶರಣರ ಬೆಳದಿಂಗಳು ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಕಡೂರುವಚನಗಳ ಸಂಗ್ರಹ ಕಾರ್ಯದಲ್ಲಿ ಅಪಾರ ಸಾಧನೆ ಮಾಡಿ ಪ್ರತಿಯೊಬ್ಬರು 12ನೇ ಶತಮಾನದ ಬಸವಾದಿ ಶರಣರ ವಿಚಾರಧಾರೆಗಳನ್ನು ತಿಳಿದುಕೊಳ್ಳುವಂತೆ ಮಾಡಿದವರು ಫ.ಗು. ಹಳಕಟ್ಟಿಯವರು ಎಂದು ಸಾಹಿತಿ, ಚಿಂತಕ ಹೊಸೂರು ಪುಟ್ಟರಾಜು ತಿಳಿಸಿದರು.
ಕಡೂರಿನ ಯಳನಡು ಮಹಾಸಂಸ್ಥಾನ ಮಠದ ಆವರಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಮತ್ತು ಕದಳಿ ಮಹಿಳಾ ವೇದಿಕೆ ಸಂಯುಕ್ತಾಶ್ರಯದಲ್ಲಿ ನಡೆದ ಶರಣರ ಬೆಳದಿಂಗಳು ಕಾರ್ಯಕ್ರಮದಲ್ಲಿ ಹಳಕಟ್ಟಿಯವರ ಕುರಿತು ಮಾತನಾಡಿದರು.ವಚನಗಳನ್ನು ಸಂಗ್ರಹ ಮಾಡಲು ಹುಡುಕಾಡದ ಊರುಗಳಿಲ್ಲ, ತಡಕಾಡದ ಕೇರಿಗಳಿಲ್ಲ. ಪ್ರದಕ್ಷಿಣೆ ಹಾಕದ ಆಲಯಗಳಿಲ್ಲ, ಸಂಶೋಧಿಸದ ಸ್ಥಳಗಳಿಲ್ಲ ಅವರು ಕರ್ನಾಟಕ ರಾಜ್ಯವಷ್ಟೇ ಅಲ್ಲ ಭಾರತವನ್ನೆ ಸುತ್ತಾಡುತ್ತಾ ತಾಡೋಲೆ, ಹಸ್ತಪ್ರತಿ, ಓಲೆ ಗರಿಗಳನ್ನು ಸಂಗ್ರಹ ಮಾಡಲು ಪಟ್ಟಶ್ರಮ ಅಪಾರ. ಹಳಕಟ್ಟಿಯವರು ಬುದುಕಿನುದ್ದಕ್ಕು ಮೂರು ಮುಖ್ಯವಾದ ಅಂಶಗಳು ಜೊತೆಗಿವೆ ಒಂದು ಕಿತ್ತು ತಿನ್ನುವ ಬಡತನ, ಇನ್ನೊಂದು ಸದಾ ಕಾಡುವ ಅನಾರೋಗ್ಯ, ಮತ್ತೊಂದು ಅವರ ಮನೆಯಲ್ಲಿ ಸಂಭವಿಸಿದ ಸಾಲು ಸಾಲು ಸಾವುಗಳು ಇವುಗಳಿಂದ ಜರ್ಜರಿತ ರಾದರೂ ತಾವು ಅಂದುಕೊಂಡಿದ್ದನ್ನು ಸಾಧಿಸಲೇಬೇಕು ಎನ್ನುವ ಛಲವುಳ್ಳವರಾಗಿದ್ದರು. 1920ರ ಹೊತ್ತಿಗೆ ಸಾವಿರ ವಚನಗಳ ಕಟ್ಟುಗಳನ್ನು ಸಂಗ್ರಹ ಮಾಡಿ, ವಿಜಾಪುರದಲ್ಲಿ ಅವುಗಳನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಟ್ಟು, ಈ ವಚನ ಗಳನ್ನು ಪುಸ್ತಕ ರೂಪದಲ್ಲಿ ತರಲು ಪಟ್ಟ ಕಷ್ಟ ಅಷ್ಠಿಷ್ಠಲ್ಲ.1925 ರಲ್ಲಿ ಹಿತಚಿಂತಕ ಎನ್ನುವ ಮುದ್ರಣಾಲಯವನ್ನು ಪ್ರಾರಂಭಿಸಿ ವಚನ ಗ್ರಂಥಗಳ ಪ್ರಕಟಣೆ ಆರಂಭಿದ ಅವರು, ತಮ್ಮ ಜೀವಿತಾವಧಿಯಲ್ಲಿ 175 ಕೃತಿಗಳನ್ನು ರಚನೆ ಮಾಡಿ, ಜೊತೆಗೆ ಹರಿಹರನ ರಗಳೆ ಸಂಶೋಧನೆ ಮಾಡಿ ಪುಸ್ತಕ ರೂಪದಲ್ಲಿ ಹೊರತಂದರು. ಹೀಗೆ ಹಳಕಟ್ಟಿಯವರು ತಮ್ಮ ಇಡಿ ಜೀವನವನ್ನು ವಚನ ಸಾಹಿತ್ಯಕ್ಕೆ ಮೀಸಲಿಟ್ಟವರು ಎಂದು ತಿಳಿಸಿದರು.ಶ್ರೀ ಜ್ಞಾನಪ್ರಭು ಸಿದ್ಧರಾಮ ದೇಶೀಕೇಂದ್ರ ಮಹಾಸ್ವಾಮಿಳು ಸಾನಿಧ್ಯ ವಹಿಸಿದ್ದರು. ಶಸಾಪ ಉಪಾಧ್ಯಕ್ಷ ಕೆ.ಜಿ ಶ್ರೀನಿವಾಸಮೂರ್ತಿ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಶಸಾಪ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಸುಜಾತಾ ಜಡೆಮಲ್ಲಪ್ಪ, ಕಾರ್ಯದರ್ಶಿ ಯಗಟಿ ಸತೀಶ್, ಮೋಹನ್, ಪ್ರದೀಪಕುಮಾರ್ ಹೋಬಳಿ ಅಧ್ಯಕ್ಷ ಜಿ. ಎಂ. ಉಮಾಮಹೇಶ್, ಅನಿಲ್ ಕುಮರ್, ಶಿವಲಿಂಗಪ್ಪ, ಜಿ.ಟಿ. ರಾಜಶೇಖರ್ ಪದಾಧಿಕಾರಿಗಳಾದ ಉಮಾಬಸವರಾಜ್, ಉಮಾ ದೇವಿ ಹೊಳೆ ಬಸಪ್ಪ ಭಾನುಮೂರ್ತಿ ಎಂ.ಆರ್.ಪ್ರಕಾಶ್, ರುದ್ರೇಗೌಡ್ರು, ಎಸ್.ಬಿ.ರಾಜಣ್ಣ ಕೆ.ಬಿ.ಸುನಿತಾ, ಶೈಲ ಶಿವಣ್ಣ, ವೀಣಾ ಈಶ್ವರಪ್ಪ ಮುಂತಾದವರು ಭಾಗವಹಿಸಿದ್ದರು.
16ಕೆಕೆಡಿಯು3.ಕಡೂರಿನ ಯಳನಡು ಮಹಾಸಂಸ್ಥಾನ ಮಠದ ಆವರಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಮತ್ತು ಕದಳಿ ಮಹಿಳಾ ವೇದಿಕೆ ಸಂಯುಕ್ತಾಶ್ರಯದಲ್ಲಿ ನಡೆದ ಶರಣರ ಬೆಳದಿಂಗಳು ಕಾರ್ಯಕ್ರಮ ನಡೆಯಿತು.