ಗದಗ: ಆಧುನಿಕ ಕನ್ನಡ ಕಾವ್ಯದ ಇಬ್ಬರು ಮಹಾ ಕವಿಗಳೆಂದರೆ ಕುವೆಂಪು ಮತ್ತು ದ.ರಾ. ಬೇಂದ್ರೆ. ಕುವೆಂಪು ರಾಮಾಯಣದರ್ಶನಂ ಮಹಾಕಾವ್ಯ ರಚಿಸಿ ಮಹಾಕವಿ ಎನಿಸಿದರು. ಆದರೆ, ವರಕವಿ ಬೇಂದ್ರೆಯವರು ಯಾವುದೇ ಮಹಾಕಾವ್ಯ ರಚಿಸದಿದ್ದರೂ ಭಾವಗೀತೆಗಳಿಗೆ ಮಹಾಕಾವ್ಯದ ಕಿರೀಟ ತೊಡಿಸಿದ ಮಹಾಕವಿ ಎಂದು ಸಾಹಿತಿ, ಕಬ್ಬಿಗರ ಕೂಟದ ಸಂಸ್ಥಾಪಕ ಡಿ.ವಿ. ಬಡಿಗೇರ ಹೇಳಿದರು.
ಬೆಳಗು, ಶ್ರಾವಣ, ಯುಗಾದಿ ಮುಂತಾದ ಭಾವಗೀತೆಗಳಿಗೆ ನಿಸರ್ಗದ ಸೊಬಗಿನಿಂದಲೇ ಅಮರ ಕಾವ್ಯದ ಲೇಪ ನೀಡಿ ಪ್ರಕೃತಿಯ ಈ ಸನ್ನಿವೇಶಗಳನ್ನು ಕನ್ನಡ ಸಾಹಿತ್ಯದಲ್ಲಿ ಜೀವಂತವಾಗಿರಿಸಿದ ಕನ್ನಡದ ಏಕಮೇವ ಕವಿ ಬೇಂದ್ರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಬ್ಬಿಗರ ಕೂಟದ ಅಧ್ಯಕ್ಷ ನ್ಯಾ. ಮನೋಹರ ಮೇರವಾಡೆ ಮಾತನಾಡಿ, ಕನ್ನಡದ ಇಬ್ಬರು ಮೇರು ಕವಿಗಳಾದ ಕುವೆಂಪು ಮತ್ತು ಬೇಂದ್ರೆಯವರ ಪುತ್ಥಳಿ ಸ್ಥಾಪನೆಗೆ ಮನವಿ ಸಲ್ಲಿಸಿ ತಿಂಗಳ ಮೇಲಾದರೂ ನಗರಸಭೆ ಅಧಿಕಾರಿಗಳು ಗಮನ ಹರಿಸಿಲ್ಲ. ಈ ಬಗ್ಗೆ ನೂತನ ಜಿಲ್ಲಾಧಿಕಾರಿಗಳು ಹಾಗೂ ನೂತನ ಪೌರಾಯುಕ್ತರಿಗೆ ನೆನಪೋಲೆ ಸಲ್ಲಿಸಿ ಬೇಂದ್ರೆ ಮತ್ತು ಕುವೆಂಪು ಅವರ ಪುತ್ಥಳಿಗಳನ್ನು ಅವಳಿ ನಗರದಲ್ಲಿ ಸ್ಥಾಪಿಸಲು ಆಗ್ರಹಿಸಲಾಗುವುದು ಎಂದು ತಿಳಿಸಿದರು.ಮಹಾಂತೇಶ ಹೂಗಾರ, ಟಿ.ಐ. ಗದಗಿನ, ಎಂ.ವಿ. ಕೆಂಬಾವಿಮಠ, ವಿಕ್ರಮ ಮುನವಳ್ಳಿ, ಗಣೇಶ ಕಾಟಿಗರ, ಎಂ.ಎ. ಜಲಗೇರಿ, ವಿನಯ ಹಿರೇಮಠ, ವಿನಾಯಕ ಗಾಣಿಗೇರ ಮುಂತಾದವರು ಉಪಸ್ಥಿತರಿದ್ದರು. ಬಿ.ಎಸ್. ಹಿಂಡಿ ಸ್ವಾಗತಿಸಿದರು. ಪ್ರ.ತೋ. ನಾರಾಯಣಪೂರ ವಂದಿಸಿದರು.