ಹಾನಗಲ್ಲ: ಬದಲಾದ ಕಾಲದಲ್ಲಿ ಶಿಕ್ಷಣ ಸಂಸ್ಥೆಗಳು ದೊಡ್ಡ ಸವಾಲುಗಳನ್ನು ಎದುರಿಸಿಯೂ ಮಾನವೀಯ ಮೌಲ್ಯ ಪ್ರೇರೇಪಣೆಗೊಳಿಸುವ ಶಿಕ್ಷಣ ನೀಡಿ, ಶೈಕ್ಷಣಿಕ ಪಾವಿತ್ರ್ಯತೆ ಉಳಿಸಬೇಕಾಗಿದೆ, ಮೌಲ್ಯ ಬಿತ್ತುವ ಮಹತ್ಕಾಯ ಗುರು ಬಳಗದಿಂದಾಗಲಿ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.
ಶಾಲೆಗಳ ಅಭಿವೃದ್ಧಿಗೆ ದಾನಿಗಳು ಕೊಟ್ಟಷ್ಟು ಹಣವನ್ನು ನಾನು ದಾನವಾಗಿ ಕೊಡುತ್ತೇನೆ. ಶಾಲೆಗಳಿಗೆ ಏನು ಕೊರತೆಯಾಗದಂತೆ ಕಾಳಜಿ ವಹಿಸೋಣ ಎಂದ ಅವರು, ಸಾಮಾಜಿಕ ಭದ್ರತೆ ಹಾಳಾಗಿದೆ. ಶಿಕ್ಷಣ ಕ್ಷೇತ್ರದ ಪಾವಿತ್ರ್ಯತೆ ಉಳಿಸಿಕೊಳ್ಳಬೇಕಾಗಿದೆ. ಎಲ್ಲದರಲ್ಲೂ ರಾಜಕಾರಣ ತೂರಿಸುವುದು ಬೇಡ. ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ನಮ್ಮ ಆದ್ಯತೆ ಇರಲಿ. ನಾನು ಇರುವಷ್ಟು ದಿನ ಈ ಕ್ಷೇತ್ರದ ಕಾಳಜಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಹೇಳಿದರು.
ಪುರಸಭೆ ಅಧ್ಯಕ್ಷೆ ಮಮತಾ ಆರೆಗೊಪ್ಪ ಮಾತನಾಡಿ, ಮಕ್ಕಳ ಭವಿಷ್ಯದ ಗುರಿಗೆ ಗುರುವೇ ಸರಿಯಾದ ಮಾರ್ಗದರ್ಶಕ. ಎಲ್ಲವನ್ನೂ ಗುರುಗಳಿಂದಲೇ ನಿರೀಕ್ಷಿಸದೆ ಪಾಲಕರ ಪರಿಶ್ರಮವೂ ಬೇಕು. ಏಕಲವ್ಯನಂತಹ ವಿದ್ಯಾರ್ಥಿಗಳಿದ್ದರೆ ದ್ರೋಣಾಚಾರ್ಯರಂತಹ ಗುರುಗಳು ಮಾರ್ಗದರ್ಶನ ಮಾಡಬಲ್ಲರು. ಶಾಲಾ ಶಿಕ್ಷಣಕ್ಕೆ ಏನು ಕೊರತೆಯಾಗದಂತೆ ಎಲ್ಲರೂ ಕೂಡಿ ಮುಂದೇ ಸಾಗಬೇಕಿದೆ ಎಂದರು.ಪುರಸಭೆ ಉಪಾಧ್ಯಕ್ಷೆ ವೀಣಾ ಗುಡಿ ಮಾತನಾಡಿ, ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದುದು. ದೇಶದ ಕೀರ್ತಿ, ವೈಭವ ಗುರುವಿನ ಮಾರ್ಗದರ್ಶನವನ್ನೇ ಅವಲಂಬಿಸಿದೆ. ಶಿಕ್ಷಕರು ವಿದ್ಯಾರ್ಥಿಗಳ ಪಾಲಿಗೆ ಬದುಕಿಗೆ ಮಾರ್ಗದರ್ಶನ ಮಾಡುವ ಅಂಬಿಗನಂತೆ. ವಿದ್ಯಾದಾನ ಶ್ರೇಷ್ಠವಾದುದು. ನಾವೆಲ್ಲ ಪುಸ್ತಕ ಪ್ರೇಮಿಗಳಾಗಬೇಕು. ಪ್ರಾಂಜಲ ಮನಸ್ಸಿನಿಂದ ಸೇವೆ ಸಲ್ಲಿಸಬೇಕು. ಯಾವ ಕಾಲಕ್ಕೂ ಗುರುವಿನ ಮಹತ್ವ ಕಡಿಮೆಯಾಗಲು ಸಾಧ್ಯವಿಲ್ಲ. ದೂರುವ ಶಿಕ್ಷಕರಾಗುವುದು ಬೇಡ. ದೂರದೃಷ್ಟಿಯ ಶಿಕ್ಷಕರಾಗೋಣ ಎಂದರು.
ಇದೇ ವೇಳೆ ನಿವೃತ್ತ ಶಿಕ್ಷಕರು ಹಾಗೂ ತಾಲೂಕು ಮಟ್ಟದ ಅತ್ಯುತ್ತಮ ಶಿಕ್ಷಕರನ್ನು ಸನ್ಮಾನಿಸಲಾಯಿತು.