ಕನ್ನಡಪ್ರಭ ವಾರ್ತೆ ಶ್ರೀಮಂಗಲ
ಕೊಡವ ಜಾನಪದ ಬ್ರಹ್ಮ ಎಂದೇ ಖ್ಯಾತರಾಗಿರುವ ನಡಿಕೇರಿಯಂಡ ಚಿಣ್ಣಪ್ಪ ಅವರ ಪಟ್ಟೋಲೆ ಪಳಮೆ ಹಾಗೂ ಭಗವಂತಂಡ ಪಾಟ್ ಪುಸ್ತಕವನ್ನು ಎಲ್ಲಾರೂ ಓದಿ ಅರ್ಥ ಮಾಡಿಕೊಂಡರೆ ಕೊಡವ ಪದ್ದತಿ ಸಂಸ್ಕೃತಿಯ ಹಿರಿಮೆ ಎಂತಹುದೆಂದು ಅರ್ಥ ಆಗುತ್ತದೆ ಎಂದು ಖ್ಯಾತ ವೈದ್ಯರಾದ ಡಾ.ಕಾಳಿಮಾಡ ಶಿವಪ್ಪ ಅವರು ಸಭೆಗೆ ಮಾಹಿತಿ ನೀಡಿದರು.ಟಿ.ಶೆಟ್ಟಿಗೇರಿ ಕೊಡವ ಸಮಾಜದ "ಚಂಗ್ರಾಂದಿ ಪತ್ತಲೋದಿ " 2ನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ನಡಿಕೇರಿಯಂಡ ಚಿಣ್ಣಪ್ಪ ಅವರ ಬದುಕು, ಅವರಿಗಿದ್ದ ಭಾಷೆ-ಸಾಹಿತ್ಯದ ಹಿಡಿತ ಹಾಗೂ ಜ್ಞಾನದ ಬಗ್ಗೆ ಮಾಹಿತಿ ನೀಡುತ್ತಾ ಅವರ ಬಗ್ಗೆ ದಿನಗಟ್ಟಲೆ ಮಾತನಾಡುವಷ್ಟು ವಿಷಯಗಳಿವೆ ಎಂದರು. ಬಾಳೋಪಾಟ್ ರೂಪದಲ್ಲಿರುವ ಅವರ ಜಾನಪದ ಸಾಹಿತ್ಯದ ಬಗ್ಗೆ ಸಭೆಗೆ ಸವಿವರವಾಗಿ ಮಾಹಿತಿ ನೀಡುತ್ತಾ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜವು ಇಂತಹ ಕಾರ್ಯಕ್ರಮದಲ್ಲಿ ಚಿಣ್ಣಪ್ಪ ಅವರಂತಹ ಮೇರುಮಟ್ಟದ ಸಾಹಿತಿಗಳ ಸಾಹಿತ್ಯದ ಬಗ್ಗೆ ಮಾಹಿತಿ ನೀಡಲು ಅವಕಾಶ ನೀಡುತ್ತಿರುವುದು ಉತ್ತಮ ಕಾರ್ಯ ಎಂದರು.ಮತ್ತೋರ್ವ ಅತಿಥಿ ಕರ್ತಮಾಡ ಸುಜು ಪೊನ್ನಪ್ಪ ಮಾತನಾಡಿ ಎಲ್ಲಾ ಕೊಡವ ಸಮಾಜದ ಪೈಕಿ ಟಿ.ಶೆಟ್ಟಿಗೇರಿ ಕೊಡವ ಸಮಾಜವು ವಿಭಿನ್ನ ರೀತಿಯಲ್ಲಿ ಚಂಗ್ರಾಂದಿ ಪತ್ತಲೋದಿ ಸೇರಿದಂತೆ ಹಲವು ವಿಶೇಷ ಕಾರ್ಯಕ್ರಮ ನಡೆಸುತ್ತಾ ಕೊಡವ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿರುವುದು ಶ್ಲಾಘನೀಯ. ಕೊಡವ ಸಂಸ್ಕ್ರತಿಯನ್ನು ಉಳಿಸುವುದು ಕೊಡವರೆಲ್ಲರ ಜವಾಬ್ದಾರಿ. ನಮ್ಮ ಜನಾಂಗದ ಜನಸಂಖ್ಯೆ ಕಡಿಮೆ ಇದ್ದರೂ ಎಲ್ಲಾ ಕ್ಷೇತ್ರದಲ್ಲಿಯೂ ಕೊಡವರು ಸಾಧನೆಗೈದು ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾಗಿರುವುದು ನಮ್ಮ ಜನಾಂಗಕ್ಕೆ ಹಿರಿಮೆ. ಪೋಷಕರು ಮಕ್ಕಳನ್ನು ಇಂತಹ ಕಾರ್ಯಕ್ರಮಕ್ಕೆ ಕರೆತಂದು ನಮ್ಮ ಸಂಸ್ಕೃತಿಯ ಬಗ್ಗೆ ಮಾಹಿತಿ ಪಡೆಯಲು ಅವಕಾಶ ಮಾಡಿಕೊಡುವುದರೊಂದಿಗೆ ಅವರಲ್ಲಿ ಅಭಿಮಾನ ಹುಟ್ಟಿಸಲು ಪ್ರಯತ್ನಿಸಬೇಕೆಂದರು. ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಅಧ್ಯಕ್ಷ ಕೈಬಿಲೀರ ಹರೀಶ್ ಅಪ್ಪಯ್ಯಂಡರವರ ಅಧ್ಯಕ್ಷತೆಯಲ್ಲಿ ನಡೆದ 9ನೆ ವರ್ಷದ ಚಂಗ್ರಾಂದಿ ಪತ್ತಲೋದಿಯ ಎರಡನೆ ದಿನದ ಈ ಕಾರ್ಯಕ್ರಮದಲ್ಲಿ ಬಾಡಗರಕೇರಿ ಮಹಿಳಾ ಸಮಾಜ ಸದಸ್ಯರ ವಿವಿಧ ಪ್ರಕಾರದ ನ್ರತ್ಯ, "ನಂಗಡ ನಾಡ್ " ಎನ್ನುವ ನಾಟಕ ಹಾಗೂ ಗೋಣಿಕೊಪ್ಪ ಕಾವೇರಿ ಕಾಲೇಜು ಉಪನ್ಯಾಸಕಿಯರ ನೃತ್ಯ ಜನರ ಮನ ಗೆದ್ದಿತು. ವೇದಿಕೆಯಲ್ಲಿ ಶ್ರೀಮಂಗಲ ಪೆರುಮಾಳೇಶ್ವರ ಆಟೋ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ಚೊಟ್ಟೆಯಾಂಡಮಾಡ ಪ್ರವೀಣ್ ಮೇದಪ್ಪ, ಬಾಡಗರಕೇರಿ ಮಹಿಳಾ ಸಮಾಜದ ಅಧ್ಯಕ್ಷೆ ಮಲ್ಲೇಂಗಡ ರೀನ ಶಮ್ಮಿ, ಗೋಣಿಕೊಪ್ಪ ಕಾವೇರಿ ಕಾಲೇಜಿನ ಉಪನ್ಯಾಸಕಿ ಮಚ್ಚಮಾಡ ರೀತ ಉತ್ತಪ್ಪ, ಸಂಭ್ರಮ ಪೊಮ್ಮಕ್ಕಡ ಕೂಟದ ಸದಸ್ಯೆ ಚಂಗುಲಂಡ ಮಧುರ ಉಪಸ್ಥಿತರಿದ್ದರು. ಅಜ್ಜಮಡ ಸಾವಿತ್ರಿ ಪ್ರಾರ್ಥಿಸಿ, ಚಂಗುಲಂಡ ಅಶ್ವಿನಿ ಸತೀಶ್ ಸ್ವಾಗತಿಸಿ, ಚೆಟ್ಟಂಗಡ ರವಿ ಸುಬ್ಬಯ್ಯ ಕಾರ್ಯಕ್ರಮ ನಿರೂಪಿಸಿ ಕೋಟ್ರಮಡ ಸುಮಂತ್ ಮಾದಪ್ಪ ವಂದಿಸಿದರು.ಇಂದು ಸಂಜೆ 6-00 ಗಂಟೆಗೆ ಶ್ರೀಮಂಗಲ ಜೆ.ಸಿ. ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.