ಗುಡ್ಡದರಂಗವ್ವನಹಳ್ಳಿಅಧ್ಯಯನ ಕೇಂದ್ರಕ್ಕೆ ಒನಕೆ ಓಬವ್ವ ಹೆಸರು

KannadaprabhaNewsNetwork |  
Published : Mar 07, 2025, 12:46 AM IST
ಚಿತ್ರದುರ್ಗ ಎರಡನೇ ಪುಟದ ಬಾಟಂ   | Kannada Prabha

ಸಾರಾಂಶ

ಚಿತ್ರದುರ್ಗ ಜಿಲ್ಲೆಯ ಸ್ಥಾನಿಕ ಸಂಸ್ಥಾನಗಳು ಕುರಿತ ಎರಡು ದಿನಗಳ ವಿಚಾರ ಸಂಕಿರಣವನ್ನು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಬಿ.ಡಿ.ಕುಂಬಾರ್ ಉದ್ಘಾಟಿಸಿದರು.

ಡಾ.ಬಿ.ಡಿ.ಕುಂಬಾರ್ ಹೇಳಿಕೆ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಚಿತ್ರದುರ್ಗ ಸಮೀಪದ ಗುಡ್ಡದರಂಗವ್ವನಹಳ್ಳಿಯಲ್ಲಿ ಇರುವ ದಾವಣಗೆರೆ ವಿವಿ ಸ್ನಾತಕೋತ್ತರ ಕೇಂದ್ರಕ್ಕೆ ವೀರವನಿತೆ ಒನಕೆ ಓಬವ್ವಳ ಹೆಸರನ್ನಿಡಲು ತೀರ್ಮಾನಿಸಿದ್ದೇವೆ ಎಂದು ದಾವಣಗೆರೆ ವಿವಿ ಕುಲಪತಿ ಡಾ.ಬಿ.ಡಿ.ಕುಂಬಾರ್ ಹೇಳಿದರು.

ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ, ಸರ್ಕಾರಿ ಕಲಾ ಕಾಲೇಜು(ಸ್ವಾಯತ್ತ) ಇತಿಹಾಸ ಅಧ್ಯಾಪಕರ ವೇದಿಕೆ, ದಾವಣಗೆರೆ ವಿಶ್ವವಿದ್ಯಾನಿಲಯ ವತಿಯಿಂದ ಸರ್ಕಾರಿ ಕಲಾ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಚಿತ್ರದುರ್ಗ ಜಿಲ್ಲೆಯ ಸ್ಥಾನಿಕ ಸಂಸ್ಥಾನಗಳು ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ನಾಗರಹಾವು ಚಿತ್ರದ ಮೂಲಕ ಚಿತ್ರದುರ್ಗದ ಏಳುಸುತ್ತಿನ ಕೋಟೆ ನಾಡಿನಾದ್ಯಂತ ಪ್ರಸಿದ್ದಿ ಪಡೆದಿದೆ. ಪ್ರತಿ ವಿಷಯಕ್ಕೂ ಒಂದೊಂದು ಇತಿಹಾಸವಿದೆ. ಉಪನ್ಯಾಸಕರು, ಪ್ರಾಧ್ಯಾಪಕರುಗಳು ಮೊದಲು ಚಿತ್ರದುರ್ಗದ ಪಾಳೆಯಗಾರರು, ವೀರವನಿತೆ ಒನಕೆ ಓಬವ್ವಳ ಇತಿಹಾಸವನ್ನು ತಿಳಿದುಕೊಂಡು ವಿದ್ಯಾರ್ಥಿಗಳಿಗೆ ಪರಿಚಯಿಸಬೇಕು. ಮದಕರಿನಾಯಕರ ಕಾಲದಲ್ಲಿ ಆರ್ಥಿಕ, ಸಾಮಾಜಿಕ, ಕೌಟುಂಬಿಕ ಜೀವನ ಹೇಗಿತ್ತೆನ್ನುವುದರ ಬಗ್ಗೆ ಚಿಂತಿಸುವ ಅಗತ್ಯವಿದೆ ಎಂದು ಹೇಳಿದರು.

ಪಠ್ಯದಲ್ಲಿನ ಸಿಲಬಸ್ ಹೊರತು ಪಡಿಸಿ ಬೇರೆ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ಬೋಧಿಸಬೇಕಿದೆ. ಹಳೆಯ ಚಿತ್ರದುರ್ಗ ಜಿಲ್ಲೆಯ ಇತಿಹಾಸ, ಆಗು ಹೋಗುಗಳ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು. ಸರ್ಕಾರಿ ಕಲಾ ಕಾಲೇಜಿಗೆ ತನ್ನದೆ ಆದ ಇತಿಹಾಸವಿದೆ. ಸ್ವಾತಂತ್ರ್ಯ ನಂತರ ಆರಂಭವಾದ ಕಾಲೇಜುಗಳಲ್ಲಿ ಚಿತ್ರದುರ್ಗ ಸರ್ಕಾರಿ ಕಲಾ ಕಾಲೇಜು ಸೇರಿದೆ. ದಾವಣಗೆರೆ ವಿಶ್ವವಿದ್ಯಾನಿಲಯಕ್ಕೆ ಒಳಪಡುವ 130 ಕಾಲೇಜುಗಳಲ್ಲಿ ಸರ್ಕಾರಿ ಕಲಾ ಕಾಲೇಜು ಸ್ವಾಯತ್ತಕ್ಕೊಳಪಟ್ಟಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಇತಿಹಾಸ ಸಂಶೋಧಕ. ವಿಶ್ರಾಂತ ಪ್ರಾಂಶುಪಾಲ ಡಾ.ಬಿ.ರಾಜಶೇಖರಪ್ಪ ದಿಕ್ಸೂಚಿ ಭಾಷಣ ಮಾಡಿ ಚಿತ್ರದುರ್ಗಕ್ಕೆ ವಿಶೇಷ, ಅಪರೂಪವಾದ ಸ್ಥಾನವಿದೆ. ಇಲ್ಲಿನ ಇತಿಹಾಸದ ಬಗ್ಗೆ ಜಗತ್ತಿನ ವಿಜ್ಞಾನಿಗಳು ಮಾತನಾಡಿದ್ದಾರೆ. ಜೀವದ ಉಗಮ ಮೊಟ್ಟ ಮೊದಲು ಚಿತ್ರದುರ್ಗದಲ್ಲಿ ಆರಂಭವಾಗಿದೆ ಎಂದು ಅಮೇರಿಕಾದ ವಿಜ್ಞಾನಿ ಹೇಳಿದ್ದಾರೆ. ಅದಕ್ಕೆ ಇಲ್ಲಿನ ಬಂಡೆಗಳಲ್ಲಿ ಪಳೆಯುಳಿಕೆಯಿರುವುದು ಸಾಕ್ಷಿಯಾಗಬಹುದು ಎಂದರು.

ಪ್ರಾಚೀನ ಪರಂಪರೆಯುಳ್ಳ ಚಿತ್ರದುರ್ಗವನ್ನು ಶಾತವಾಹನರು, ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು, ವಿಜಯನಗರದ ಅರಸರು ಆಳಿದ್ದಾರೆ. ತಿಮ್ಮಣ್ಣನಾಯಕನ ಆಳ್ವಿಕೆಯಿಲ್ಲದೆ ಚಿತ್ರದುರ್ಗದ ಪಾಳೆಯಪಟ್ಟು ಆರಂಭವಾಗಿಲ್ಲ. ಚರಿತ್ರೆ ಎಂದ ಮೇಲೆ ಸಮಸ್ಯೆ ಇದ್ದೇ ಇರುತ್ತದೆ. ಸಮಸ್ಯೆಯಿಲ್ಲದ ಚರಿತ್ರೆ ಯಾವುದೂ ಇಲ್ಲ ಎಂದು ಹೇಳಿದರು.

ಡಾ.ಬಿ.ಸುರೇಶ್ ಪ್ರಾಸ್ತಾವಿಕ ಮಾತನಾಡಿದರು.ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಟಿ.ತಿಪ್ಪೇರುದ್ರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.ಆಂಧ್ರಪ್ರದೇಶ ಅನಂತಪುರದ ಕೃಷ್ಣದೇವರಾಯ ವಿವಿಯ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಆರ್.ಶೇಷಶಾಸ್ತ್ರಿ, ಕರ್ನಾಟಕ ವಿವಿ ಧಾರವಾಡದ ಡಾ.ರು.ಮ.ಷಡಾಕ್ಷರಯ್ಯ, ದಾವಣಗೆರೆ ವಿವಿ ಯ ಪ್ರಾಧ್ಯಾಪಕ ಡಾ.ವೆಂಕಟರಾವ್ ಎಂ.ಪಲಾಟೆ, ಸ್ನಾತಕೋತ್ತರ ಇತಿಹಾಸ ವಿಭಾಗ ಮುಖ್ಯಸ್ಥ ಡಾ.ಆರ್.ಶಿವಪ್ಪ, ದಾವಣಗೆರೆ ವಿವಿ ಇತಿಹಾಸ ಅಧ್ಯಾಪಕರ ವೇದಿಕೆ ಅಧ್ಯಕ್ಷ ಪ್ರೊ.ಸಿ.ಜಗದೀಶ, ಐಕ್ಯೂಎಸಿ ಸಂಚಾಲಕಿ ಡಾ.ಆರ್.ತಾರಿಣಿ ಶುಭದಾಯಿನಿ, ಅಧ್ಯಾಪಕ ಸಂಘದ ಕಾರ್ಯದರ್ಶಿ ಡಾ.ಆರ್.ಗಂಗಾಧರ್, ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ ಉಪ ನಿರ್ದೇಶಕ ಡಾ.ನೆಲ್ಕುದುರಿ ಸದಾನಂದ ವೇದಿಕೆಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ