ಹಿರಿಯೂರು: ನ್ಯಾಯ, ಸಮಾನತೆ, ಮನುಷ್ಯತ್ವ, ಬದುಕಿನ ಘನತೆ, ಸರಳ ಜೀವನ, ಮಾದರಿ ಕುಟುಂಬಕ್ಕೆ ಪ್ರವಾದಿ ಮುಹಮ್ಮದ್ ಅವರ ಮಾರ್ಗದರ್ಶನ ಮನುಷ್ಯನಿಗೆ ಬೆಳಕಿನ ಸಂಕೇತವಾಗಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ನ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ ಹೇಳಿದರು.
ಮನುಷ್ಯ ಹೊಣೆಗಾರಿಕೆಗಳಿಂದ ಹಿಂದೆ ಸರಿಯುತ್ತಿದ್ದಾನೆ. ಮೌಲ್ಯಾಧಾರಿತ ಜೀವನದ ಮೂಲಕ ಬದುಕುವ ಅಧಿಕಾರದ ಹಕ್ಕನ್ನು ಪ್ರತಿಯೊಬ್ಬರಿಗೂ ಅಲ್ಲಾಹನ ಆಜ್ಞೆಯ ಅನುಸಾರ ಪ್ರವಾದಿಯವರು ಮಂಡಿಸಿದ್ದಾರೆ. ಮೇಲು ಕೀಳುಗಳ ಭಾವ ತೊರೆದು ಮನುಷ್ಯರನ್ನು ಮನುಷ್ಯರೊಂದಿಗೆ ಜೋಡಿಸುವ ಕೆಲಸವನ್ನು ಧರ್ಮ ಎಂದು ಬೇರ್ಪಡಿಸುವುದನ್ನು ಅಧರ್ಮ ಎಂದಿದ್ದಾರೆ. ಸರ್ವಧರ್ಮಿಯರೊಂದಿಗೆ ಪರಸ್ಪರ ಗೌರವ ಪ್ರೀತಿಯ ಸಮತೆಯನ್ನು ಖುರಾನ್ ಭೋದಿಸಿದೆ ಎಂದು ತಿಳಿಸಿದರು.
ಪ್ರಸ್ತುತ ಕಲಿಕೆಯಲ್ಲಿ ಗ್ರಹಿಕೆಯ ಸಾಮರ್ಥ್ಯ ಮತ್ತು ಸ್ವೀಕರಿಸುವ ಮನಸ್ಥಿತಿ ಬಹಳ ನಿರ್ಣಾಯಕವಾಗಬೇಕಿದೆ. ಪ್ರವಾದಿಯವರು ಬದುಕಿದ್ದ ಕಾಲದಲ್ಲಿ ತಮ್ಮ ಸಂಪರ್ಕಕ್ಕೆ ಬಂದ ಎಲ್ಲ ಸಮುದಾಯದ ಶಕ್ತಿ ಮತ್ತು ಶತ್ರುಗಳೊಂದಿಗೂ ಸೌಹಾರ್ದ ಸಾಧಿಸಿ ಲೋಕಕ್ಕೆ ಮಾದರಿಯಾಗಿದ್ದಾರೆ ಎಂದರುಎಸ್ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಬಸವಕುಮಾರ ಸ್ವಾಮೀಜಿ ಮಾತನಾಡಿ, ಪ್ರವಾದಿಯವರು ಜಾತಿಯ ಸ್ವತಲ್ಲ. ಸಿದ್ಧಾಂತಗಳ ಸ್ವತ್ತು ಆಗಿದ್ದಾರೆ. ನಮ್ಮ ದೇಶದಲ್ಲಿ ಹಲವಾರು ಧರ್ಮಗಳು ಇದ್ದು ಆಯಾ ಧರ್ಮದ ಪ್ರತಿಪಾದಕರು ಮೌಲ್ಯಯುತ ಮಾತುಗಳನ್ನು ಹೇಳಿದ್ದಾರೆ. ಅವುಗಳ ಪ್ರಾಮಾಣಿಕ ಅನುಕರಣೆ ಪಾಲನೆ ನಮ್ಮದಾಗಬೇಕಿದೆ. ಭಾವೈಕ್ಯತೆ ಸೌಹಾರ್ದತೆಗೆ ಪ್ರಜ್ಞಾವಂತರ ಕೂಡುವಿಕೆ ಅವಶ್ಯವಾಗಿದೆ ಎಂದರು.
ಬಸವಣ್ಣನವರ ವಚನಗಳಂತೆ ಪ್ರವಾದಿ ಮುಹಮ್ಮದ್ ಅವರ ದಿವ್ಯವಾಣಿಗಳು ಕೂಡ ಪ್ರಪಂಚದಲ್ಲಿ ಐತಿಹಾಸಿಕ ಹೆಜ್ಜೆಗಳನ್ನು ಹೊಂದಿವೆ. ಯಾವುದೇ ಧರ್ಮದವರಾದರೂ ಇತರೆ ಧರ್ಮಗಳ ಸೌಮ್ಯತೆ ಅಂತರಾಳಗಳನ್ನು ಅರ್ಥೈಸಿಕೊಳ್ಳಬೇಕು. ಮಾನವೀಯತೆ ಮತ್ತು ಪ್ರೀತಿಗಿಂತ ಧರ್ಮವಿಲ್ಲ. ಸರ್ವರಿಗೂ ಇಂದಿನ ಬಲಿಷ್ಠ ಎದುರಾಳಿ ಮೌಢ್ಯತೆಯಾಗಿದೆ. ಮನುಷ್ಯ ಉದಾಸೀನತೆ, ದ್ವೇಷ, ಅಸೂಯೆ, ಮತ್ಸರಗಳಲ್ಲಿ ಕರಗುತ್ತಿದ್ದಾನೆ. ಅದು ಮಸೀದಿ ಮಂದಿರ ಇಗರ್ಜಿಗಳಿಗೂ ವ್ಯಾಪಿಸುತ್ತಿದೆ. ತಾರತಮ್ಯಗಳು ಕೊನೆಗೊಳ್ಳಬೇಕು. ಧರ್ಮ ಕೇಂದ್ರಗಳಲ್ಲಿ ಸಮಾನತೆ ಮೂಡಬೇಕು. ಮನುಷ್ಯತ್ವದಲ್ಲಿನ ಬಿರುಕುಗಳು ಧರ್ಮಸಮ್ಮತವಲ್ಲ ಎಂದರು.ಈ ಸಂದರ್ಭದಲ್ಲಿ ಜಾಮೀಯಾ ಮಸೀದಿಯ ಧರ್ಮ ಗುರುಗಳಾದ ಹಾಫೀಜ್ ಸಿಗಬತ್ ಉಲ್ಲಾ, ಜಮಾಅತೆ ಇಸ್ಲಾಮೀ ಹಿಂದ್ ನ ಜಿಲ್ಲಾ ಸಂಯೋಜಕ ಮುಕರಮ್ ಸಯೀದ್, ಹೈದರ್ ಅಲಿ, ಅಮೀಮ್ ಅಹಮದ್, ಮುನೀರ್ ಮುಲ್ಲಾ, ಅಸ್ಗರ್ ಅಹಮದ್, ಗ್ಯಾರಂಟಿ ಬಾಷ, ನೂರುಲ್ಲಾ, ಚಮನ್ ಷರೀಫ್, ಅಬ್ದುಲ್ ಗಫ್ಫರ್, ನೌಷದ್, ಅಯೂಬ್, ನವೀದ್, ಕ್ಯಾಸೆಟ್ ಜಬೀವುಲ್ಲಾ, ಅಲ್ತಾಫ್ ಅಹಮದ್ , ಮಹಮದ್ ಫಕ್ರುದ್ದೀನ್, ಸಿರಾಜ್ ಅಹಮದ್ ಮುಂತಾದವರು ಹಾಜರಿದ್ದರು.