ಈ ವರ್ಷವೂ ನನಸಾಗದೇ ಉಳಿದ ಗುರುಭವನ

KannadaprabhaNewsNetwork |  
Published : Sep 03, 2026, 01:15 AM IST
ಸಿಕೆಬಿ-1 ಮತ್ತು 2 ನಿರ್ಮಾಣ ಹಂತದಲ್ಲಿ ಇರುವ ಗುರು ಭವನದ ಕಟ್ಟಡ | Kannada Prabha

ಸಾರಾಂಶ

ಜಿಲ್ಲಾ ಕೇಂದ್ರದಲ್ಲಿ ಗುರುಭವನ ಬೇಕೆಂಬ ಕೂಗಿಗೆ 2 ದಶಕಗಳ ಇತಿಹಾಸವಿದೆ. ಈ ವಿಚಾರದಲ್ಲಿ ಇಂದಿಗೂ ಕೂಡ ಶಿಕ್ಷಕ ವೃಂದ ಹೋರಾಟ ನಡೆಸುತ್ತಲೇ ಬಂದಿದ್ದರೂ ಪ್ರತಿಫಲ ಮಾತ್ರ ಶೂನ್ಯ ಎನ್ನುವಂತಿದೆ.

ಅರ್ಧಂಬರ್ಧ ಕೆಲಸವಾಗಿ ಲೋಕಾರ್ಪಣೆಗೆ ಕಾದುನಿಂತಿರುವ ಕಟ್ಟಡ । ಪತ್ರಿ ವರ್ಷ ಬಾಡಿಗೆ ಕಟ್ಟಡಗಳನ್ನೇ ಆಶ್ರಯಿಸಬೇಕಾದ ಪರಿಸ್ಥಿತಿ

ದಯಾಸಾಗರ್ ಎನ್.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಿಲ್ಲಾ ಕೇಂದ್ರವಾದ ಚಿಕ್ಕಬಳ್ಳಾಪುರದಲ್ಲಿ ಸುಸಜ್ಜಿತವಾದ ಗುರುಭವನ ಬೇಕೆಂಬುದು ಅಖಂಡ ಗುರು ವೃಂದದ ಹಲವು ದಶಕಗಳ ಕನಸು. ಇದಕ್ಕಾಗಿ ನಡೆಸಿದ ಹೋರಾಟ, ಮಾಡಿದ ತ್ಯಾಗ, ಕ್ರಮಿಸಿದ ಹಾದಿ, ರೂಪಿಸಿದ ಯೋಜನೆ, ಸಂಗ್ರಹಿಸಿದ ವಂತಿಗೆ, ರಾಜಕಾರಣಿಗಳ ಶ್ರೀರಕ್ಷೆ ಇದ್ದರೂ ಈವರೆಗೂ ಗುರಿ ಮುಟ್ಟಿಲ್ಲ. ಹಂಗಿನ ಅರಮನೆಯಲ್ಲಿ ಶಿಕ್ಷಕರ ದಿನಾಚರಣೆ ಮಾಡುವ ಪರಿಪಾಟಕ್ಕೆ ವಿರಾಮ ಬೀಳದಿರುವುದು ವಿಚಿತ್ರವಾದರೂ ಸತ್ಯ.

ಜಿಲ್ಲಾ ಕೇಂದ್ರದಲ್ಲಿ ಗುರುಭವನ ಬೇಕೆಂಬ ಕೂಗಿಗೆ 2 ದಶಕಗಳ ಇತಿಹಾಸವಿದೆ. ಈ ವಿಚಾರದಲ್ಲಿ ಇಂದಿಗೂ ಕೂಡ ಶಿಕ್ಷಕ ವೃಂದ ಹೋರಾಟ ನಡೆಸುತ್ತಲೇ ಬಂದಿದ್ದರೂ ಪ್ರತಿಫಲ ಮಾತ್ರ ಶೂನ್ಯ ಎನ್ನುವಂತಿದೆ. ಕಳೆದ ಬಿಜೆಪಿ ಸರ್ಕಾರದಲ್ಲಿ ಅಂದಿನ ಸಚಿವ ಡಾ.ಕೆ.ಸುಧಾಕರ್ ನಗರದ ಹೊರವಲಯ ಜೈನ್ ಆಸ್ಪತ್ರೆ ಸಮೀಪ 2020ರಲ್ಲಿ ಗುರು ಭವನಕ್ಕಾಗಿ ಅರ್ಧ ಎಕರೆ ಭೂಮಿಯನ್ನು ಗುರುತಿಸಿ ಅಂದಾಜು 4.5 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ಕಟ್ಟಲು ಭೂಮಿ ಪೂಜೆ ನೆರವೇರಿಸಿ 2022 ರ ಶಿಕ್ಷಕರ ದಿನಾಚರಣೆ ಇಲ್ಲಿಯೇ ಎಂದು ಸಾರಿದ್ದರು. ಆದರೆ ಬದಲಾದ ರಾಜಕೀಯದ ಸುಳಿಗೆ ಸಿಕ್ಕಿ ಆ ಕನಸು ಹುಸಿಯಾಗಿರುವುದು ವಿಪರ್ಯಾಸವೇ ಸರಿ. 5 ವರ್ಷಗಳ ಹಿಂದೆಯೇ ಕಟ್ಟಡ ಕಾಮಗಾರಿ ಪ್ರಾರಂಭವಾಗಿದ್ದರೂ ನೆಲಮಹಡಿ ಮಾತ್ರ ಸಿದ್ಧವಾಗಿದ್ದು ಬಿಟ್ಟರೆ ಅರ್ಧಂಬರ್ಧ ಕೆಲಸವಾಗಿ ಲೋಕಾರ್ಪಣೆ ಕನಸಿಗೆ ಎಳ್ಳು ನೀರು ಬಿಟ್ಟಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಯಾರ ಹಂಗೂ ಇಲ್ಲದೆ ಶಿಕ್ಷಕರ ದಿನಾಚರಣೆ ಮಾಡಲಾಗದೆ ಗುರು ವೃಂದ ಹಂಗಿನ ಅರಮನೆಯಲ್ಲಿ ಹೋಗಿ ಆಚರಣೆ ಮಾಡಬೇಕಾದ ಸಂದರ್ಭ ಎದುರಿಸುತ್ತಿರುವುದು ದುರಂತವೇ ಸರಿ.

ಜಿಲ್ಲೆಯಲ್ಲಿ 6 ಸಾವಿರಕ್ಕೂ ಹೆಚ್ಚು ಶಿಕ್ಷಕರಿದ್ದರೂ ವರ್ಷಕ್ಕೊಮ್ಮೆ ಬರುವ ಶಿಕ್ಷಕರ ದಿನಾಚರಣೆಗೆ ಮಾತ್ರ ಪರಾವಂಭನೆ ತಪ್ಪಿಲ್ಲ. ಸದಾ ಕಾಲಕ್ಕೂ ಬಾಡಿಗೆ ಕಟ್ಟಡಗಳನ್ನೇ ಆಶ್ರಯಿಸಬೇಕಾದ ಪರಿಸ್ಥಿತಿ ಎದುರಾಗಲು ಏನು ಕಾರಣ ಎಂಬುದನ್ನು ಶಿಕ್ಷಕ ಸಂಘದ ಪದಾಧಿಕಾರಿಗಳೇ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಬಲಿಷ್ಟ ಸಂಘಟನೆ ಇದ್ದರೂ, ಭವನ ನಿರ್ಮಾಣಕ್ಕೆ ತನ್ನ ಪಾಲಿನ ವಂತಿಗೆ ನೀಡಿದ್ದರೂ, ಭೂಮಿ ದೊರೆತು ಕಾಮಗಾರಿ ಆರಂಭವಾಗಿದ್ದರೂ ಕಾಲಮಿತಿಯಲ್ಲಿ ಸಿದ್ಧವಾಗಿ ಬಳಕೆಗಿಲ್ಲವಾಗಿದೆ. ಜಿಲ್ಲಾಡಳಿತವೂ ಈ ವಿಚಾರದಲ್ಲಿ ದಿವ್ಯ ನಿರ್ಲಕ್ಷ್ಯ ವಹಿಸಿರುವುದು ಎದ್ದು ಕಾಣಿಸುತ್ತಿದೆ. ಶಿಕ್ಷಕ ದಿನದ ಸಂದರ್ಭದಲ್ಲಿಯಾದರೂ ಇದಕ್ಕಿರುವ ಸಂಕಷ್ಟಗಳನ್ನು ದೂರ ಮಾಡಿ ತಾರ್ಕಿಕ ಅಂತ್ಯ ಕಾಣಿಸುದೇ ಎಂಬುದನ್ನು ಕಾದು ನೋಡಬೇಕಿದೆ.

ನಿರ್ಮಿತಿ ಕೇಂದ್ರದ ಮೂಲಕ ಕೈಗೆತ್ತಿಕೊಂಡಿರುವ ಐದು ಕೋಟಿ ವೆಚ್ಚದ ಗುರುಭವನದ ಕಾಮಗಾರಿಗೆ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಿಎಸ್‌ಆರ್‌ ನಿಧಿಯಿಂದ 2 ಕೋಟಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಗುರುಭವನ ನಿಧಿಯಿಂದ 1 ಕೋಟಿ ಪೈಕಿ 50 ಲಕ್ಷ ಖರ್ಚು ಮಾಡಲಾಗಿದೆ. ಇದರಿಂದ ನೆಲಮಾಳಿಗೆ ಹಾಗೂ ಬೃಹತ್ ಸಭಾಂಗಣದ ಮೇಲ್ಚಾವಣಿಯ ಗೋಡೆಗಳ ನಿರ್ಮಾಣ ಮಾತ್ರ ನಡೆದಿದ್ದು, ನಂತರ ಅನುದಾನದ ಕೊರತೆಯಿದೆ ಎಂದು ಕಾಮಗಾರಿ ಸ್ಥಗಿತಗೊಂಡಿದೆ.

ಕಾಮಗಾರಿಗೆಂದು ತರಲಾಗಿದ್ದ ಕಬ್ಬಿಣ, ಸಿಮೆಂಟ್ ಸೇರಿದಂತೆ ನಿರ್ಮಾಣ ಸಾಮಗ್ರಿಗಳು ಸಮರ್ಪಕ ನಿರ್ವಹಣೆಯ ಕೊರತೆಯಿಂದ ಹಾಳಾಗಿವೆ. ಚಿಕ್ಕಬಳ್ಳಾಪುರ- ಬೆಂಗಳೂರು ಮುಖ್ಯ ರಸ್ತೆಯ ಪಕ್ಕದಲ್ಲಿರುವ 12ರಿಂದ 14 ಅಡಿಗೂ ಹೆಚ್ಚು ಆಳದ ಹಳ್ಳದಲ್ಲಿ ನಿರ್ಮಾಣವಾಗುತ್ತಿರುವ ಭವನವನ್ನು ಪೂರ್ಣಗೊಳಿಸಲು ಇನ್ನೂ ಸುಮಾರು 3 ಕೋಟಿ ಅಗತ್ಯ ವಿದೆ ಎಂದು ಶಿಕ್ಷಕರ ಸಂಘದ ಪ್ರತಿನಿಧಿಗಳು ತಿಳಿಸಿದ್ದಾರೆ. ಇದು ಬರುವುದು ಯಾವಾಗ ಪೂರ್ಣ ಗೊಳ್ಳುವುದು ಯಾವಾಗ ಎಂಬುದು ಯಕ್ಷಪ್ರಶ್ನೆಯಾಗಿದೆ.

ಜಿಲ್ಲಾಕೇಂದ್ರದಲ್ಲಿ ಗುರುಭವನವಿಲ್ಲದಿರುವುದು ಶಿಕ್ಷಕರ ಪಾಲಿಗೆ ನೋವಿನ ಸಂಗತಿ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಶಿಕ್ಷಕರು ತಮ್ಮ ಕಾರ್ಯಕ್ರಮಗಳನ್ನು ನಡೆಸಲು ಇನ್ನೊಬ್ಬರ ಹಂಗಿನಲ್ಲಿರಬೇಕಾದ ಸ್ಥಿತಿ ಇದೆ. 2027ರ ಶಿಕ್ಷಕರ ದಿನಾಚರಣೆಯನ್ನಾದರೂ ನಮ್ಮದೇ ಗುರುಭವನ ದಲ್ಲಿ ಆಚರಿಸುವಂತಾಗಬೇಕು ಎಂದು ಸ್ವತಹ ಶಿಕ್ಷಕರಾಗಿರುವ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎ.ನಾರಾಯಣ ಸ್ವಾಮಿ ಆಶಿಸಿದ್ದಾರೆ.

ಗುರುಭವನ ಕಾಮಗಾರಿ ಬೇಗನೆ ಮುಗಿಸಬೇಕು ಎಂಬ ಆಸೆ ನಮಗೂ ಇದೆ. ಆದರೆ ಅನುದಾನ ಬಿಡುಗಡೆ ಆಗಿಲ್ಲ. ಈವರೆಗೆ ಆಗಿರುವ ಕಾಮಗಾರಗೆ 1.5 ಕೋಟಿ ಅಷ್ಟೇ ನೀಡಿದ್ದಾರೆ. ನಾನು ಕೈಯಿಂದ ಹಣ ಹಾಕಿ ನೆಲಮಹಡಿ ಪೂರ್ಣಗೊಳಿಸಿದ್ದೇನೆ. ಇದರ ಒಟ್ಟು ಯೋಜನಾ ವೆಚ್ಚ 4.5 ಕೋಟ ಆಗಿದ್ದು ಅನುದಾನ ಬಿಡುಗಡೆ ಆದ ಕೂಡಲೇ ಉಳಿದ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಗುತ್ತಿಗೆದಾರ ಮುನಿಕೃಷ್ಣಪ್ಪ ಹೇಳಿದ್ದಾರೆ.

ಏನೇ ಆಗಲಿ ಗುರುಭವನಕ್ಕೆ ಹಿಡಿದಿರುವ ಗ್ರಹಣ ದೂರವಾಗಿ ಶಿಕ್ಷಕರ ದಿನಾಚಚರಣೆಯನ್ನು ಸ್ವಂತ ಸೂರಿನಡಿಯಲ್ಲಿ ಆಗುವಂತೆ ಮಾಡುವ ಜವಾಬ್ದಾರಿಯನ್ನು ಸಂಬಂಧಪಟ್ಟವರು ತೆಗೆದುಕೊಳ್ಳಬೇಕು.ಆದಷ್ಟು ಬೇಗ ಈ ಕಾಮಗಾರಿ ಮುಗಿದು ಶಿಕ್ಷಕರ ಭವನ ಲೋಕಾರ್ಪಣೆ ಆದಾಗ ಮಾತ್ರವೇ ದಶಕಗಳ ಹೋರಾಟಕ್ಕೆ ಬೆಲೆ ಬರಲಿದೆ.ಸಿಕೆಬಿ-1 ಮತ್ತು 2 ನಿರ್ಮಾಣ ಹಂತದಲ್ಲಿ ಇರುವ ಗುರು ಭವನದ ಕಟ್ಟಡ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲಬುರಗಿ ಬರಪೀಡಿತ ಘೋಷಣೆಗೆ ಆಗ್ರಹಿಸಿ ಪ್ರತಿಭಟನೆ
ಡಾ. ಅಪ್ಪಾಜಿ ಪುಣ್ಯಸ್ಮರಣೆ: ಭಾವಪೂರ್ಣ ನುಡಿನಮನ