ರಿಪ್ಪನ್‍ಪೇಟೆ: ಸನಾತನ ಸಂಸ್ಕೃತಿಯಲ್ಲಿ ಭಗವಂತನಿಂಗಿತ ಪೂಜ್ಯನೀಯ ಸ್ಥಾನ ಗುರುವಿಗೆ ನೀಡಲಾಗಿದೆ ಎಂದು ಹೊಂಬುಜ ಜೈನಮಠದ ಡಾ.ದೇವೇಂದ್ರ ಕೀರ್ತಿಭಟ್ಟಾರಕ ಸ್ವಾಮೀಜಿ ತಿಳಿಸಿದರು.
ಭಾರತೀಯ ಸಂಸ್ಕೃತಿಯ ಸನಾತನ ಧರ್ಮದ ಗ್ರಂಥಗಳನ್ನು ವಿದೇಶಿಗರು ಅಧ್ಯಯನ ಮಾಡುವ ಮೂಲಕ ನಮ್ಮ ಸಂಸ್ಕೃತಿ ಸಂಸ್ಕಾರಗಳನ್ನು ತಮ್ಮ ನಿತ್ಯ ಬದುಕಿನಲ್ಲಿ ಅಳವಡಿಸಿಕೊಳ್ಳುತ್ತಿದ್ದು ಹೆಮ್ಮಯ ಸಂಗತಿಯಾಗಿದೆ ಎಂದರು.
ಅದರೆ ನಮ್ಮ ಭಾರತೀಯರು ಇನ್ನೂ ಜಿಜ್ಞಾಸೆಗಳಲ್ಲಿ ಕಾಲಕಳೆಯುತ್ತಿದ್ದಾರೆ. ವಿದೇಶಿಗರು ಅತ್ಯಧಿಕ ಸಂಪತ್ತು ಹೊಂದಿ ಐಶಾರಾಮಿ ಜೀವನ ನಡೆಸುತ್ತಿದ್ದರೂ ಕೂಡಾ ಎಲ್ಲವನ್ನು ತೊರೆದು ಭಾರತೀಯ ಸಂಸ್ಕೃತಿ ಸಂಸ್ಕಾರಕ್ಕೆ ಮಾರು ಹೋಗಿ ಭಾರತ ದೇಶದ ಆಶ್ರಮಗಳಲ್ಲಿ ಸೇವೆಯ ಮೂಲಕ ನೆಮ್ಮದಿಯನ್ನು ಕಾಣುತ್ತಿದ್ದಾರೆ ಎಂದು ಹೇಳಿದರು.15-16ನೇ ಶತಮಾನದ ಭಕ್ತಿ ಪರಂಪರೆಯ ಕಾಲಘಟ್ಟ ಕನಕದಾಸ ಪುರಂದರದಾಸ ಹಾಗೂ ರಾಘವೇಂದ್ರ ಸ್ವಾಮಿಗಳು ದೈವಾರಾಧನೆಯ ಮೂಲಕ ಜನರಿಗೆ ಒಳಿತನ್ನು ಕಂಡುಕೊಳ್ಳುವ ಸಂದೇಶ ನೀಡಿ ಕಲಿಯುಗದ ಕಲ್ಪವೃಕ್ಷರಾಗಿದ್ದಾರೆ. ಗುರುರಾಯರಿಗೆ ಜಾತಿ, ಧರ್ಮ ಭೇದ ಭಾವನೆಯಿಲ್ಲದೆ ತಮ್ಮನ್ನು ಅರಾಧಿಸುವ ಭಕ್ತರ ಕಷ್ಟಕಾರ್ಪಣ್ಯಗಳಿಗೆ ಪರಿಹಾರ ಕಲ್ಪಿಸುವ ಕಾಮಧೇನುವಾಗಿದ್ದಾರೆ ಎಂದರು.
ನಿಟ್ಟೂರು ನಾರಾಯಣಗುರು ಮಠದ ರೇಣುಕಾನಂದ ಸ್ವಾಮೀಜಿ ಮಾತನಾಡಿ, ತಮ್ಮ ಉಪದೇಶಾಮೃತವನ್ನು ನೀಡಿ ಮನುಷ್ಯನ ಬದುಕಿಗೆ ಶಾಂತಿ ನೆಮ್ಮದಿ ಕೊಡುವುದೇ ಧರ್ಮ ಎಂಬುದನ್ನು ಅನೇಕ ಭಾರತೀಯ ಋಷಿಮುನಿಗಳು ಹೇಳಿದ್ದಾರೆ. ಇಂದಿನ ಕಾಲಘಟ್ಟದಲ್ಲಿ ಪರಿಪೂರ್ಣ ಬದುಕಿ ಅಧ್ಯಾತ್ಮಿಕ ಚಿಂತನೆ ವರ್ತಮಾನದ ಅಗತ್ಯವಾಗಿದೆ. ಹಣ ಮುಖ್ಯವೆಂಬ ಭ್ರಮೆಯಲ್ಲಿರುವುದರಿಂದ ಜನರು ಅರೋಗ್ಯ ನೆಮ್ಮದಿ ಕಳೆದುಕೊಳ್ಳುತ್ತಿದ್ದಾರೆ. ದುಡಿಮೆಯ ಅಲ್ಪಸ್ವಲ್ಪ ಹಣವನ್ನು ದಾನ, ಧರ್ಮದ ಕಾರ್ಯಗಳಿಗೆ ಸದ್ವಿನಿಯೋಗ ಮಾಡಿದ್ದಾಗ ಮಾತ್ರ ಸಾರ್ಥಕ ಬದುಕಿಗೆ ಸಹಕಾರಿಯಾಗುವುದು ಎಂದರು.ಇದೇ ವೇಳೆ ಮಠದ ಕಟ್ಟಡ ಮತ್ತು ರಥ ನಿರ್ಮಾಣ ಕಾರ್ಯದಲ್ಲಿ ಸಹಕಾರ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು.
ಭಜನಾ ಮಂಡಳಿಯ ಮಹಿಳೆಯರು ಪ್ರಾರ್ಥಿಸಿದರು. ಜೆ.ಪಿ.ಕಿರಣ್ ಸ್ವಾಗತಿಸಿದರು. ಕಾರ್ಯದರ್ಶಿ ಎಚ್.ಎಸ್.ಅನಂತಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.