ತಾವರಕೆರೆ ಶಿಲಾಮಠ ಶ್ರೀ ಅಭಿಮತ
ನೀವಿಂದು ಆಚರಿಸಿದ ಹೇಮರಡ್ಡಿ ಮಲ್ಲಮ್ಮನವರ ದಿಪೋತ್ಸವ ನಿಮಗೆ ದಿವ್ಯ ಅನುಭವ ನೀಡಿದೆ ನಿಜ. ಆದರೆ ಈ ದೀಪೋತ್ಸವದ ಹಿಂದಿನ ಪರಿಶ್ರಮ ಅರ್ಥಮಾಡಿಕೊಂಡು ಮಕ್ಕಳಿಗೆ ಆ ಬಗ್ಗೆ ತಿಳಿಸಬೇಕು ಎಂದು ತಾವರೆಕರೆ ಶ್ರೀ ರಂಭಾಪುರಿ ಶಾಖಾ ಶಿಲಾಮಠದ ಡಾ.ಅಭಿನವಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ಹೇಮರಡ್ಡಿ ಮಲ್ಲಮ್ಮ ಬಂಧು-ಬಳಗ ಭಾನುವಾರ ರಾತ್ರಿ ಆಯೋಜಿಸಿದ್ದ ಹೇಮರಡ್ಡಿ ಮಲ್ಲಮ್ಮ ದೀಪೋತ್ಸವದಲ್ಲಿ ಮಾತನಾಡಿದರು. ಮಣ್ಣಿನ ದೀಪದ ಹಿಂದೆ ಕುಂಬಾರ, ಬತ್ತಿ-ಎಣ್ಣೆಗಳ ಹಿಂದೆ ರೈತರ ಪರಿಶ್ರಮವಿದೆ ಎಂಬುದನ್ನು ಮಕ್ಕಳಿಗೆ ತಿಳಿಸಬೇಕು. ಯಾವುದೂ ಸುಲಭಸಾಧ್ಯವಲ್ಲ. ಆದ್ದರಿಂದ ಯಾವುದೇ ಸಾಧನೆ ಹಿಂದೆ ಪರಿಶ್ರಮವಿದೆ ಎಂಬುದು ಪರೋಕ್ಷವಾಗಿ ಅವರಿಗೆ ಅರ್ಥವಾಗಬೇಕು ಎಂದು ಹೇಳಿದರು.ಬಳಗದಿಂದ ಸನ್ಮಾನಿತರಾದ ನಿವೃತ್ತ ಲೆಫ್ಟಿನೆಂಟ್ ಜನರಲ್ (ಭಾರತೀಯ ಭೂಸೇನೆ) ಬಿ.ಎಸ್.ರಾಜು ಮಾತನಾಡಿ, ಸೇನಾ ಸೇವೆ ಅದ್ಭುತ ಅನುಭವ ತಂದುಕೊಡುತ್ತದೆ. ವ್ಯತಿರಿಕ್ತ ಹವಾಮಾನವುಳ್ಳ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸ ಬೇಕಾಗುತ್ತದೆ. ಅದೇನೇ ಇದ್ದರೂ ಇಂತಹ ವಿಶಿಷ್ಟ ಅನುಭವ ಮತ್ತು ದೇಶ ಕಾಯುವ ಪವಿತ್ರ ಕಾರ್ಯದಿಂದ ಬದುಕು ಸಾರ್ಥಕ ಎಂದು ಹೇಳಿದರು.
ಬಳಗದ ಅಧ್ಯಕ್ಷ ಜಿ.ಬಿ.ಹೇಮಂತಕುಮಾರ್ ಮಾತನಾಡಿ, ರಾಜ್ಯದ ಉತ್ತರದ ಕಡೆಯಿಂದ ಬಂದ ನಮ್ಮ ಸಮುದಾಯ ಬಗ್ಗವಳ್ಳಿ ಮತ್ತು ಗಿರಿಯಾಪುರಗಳಲ್ಲಿ ಕುಲದೇವತೆ ಮಲ್ಲಮ್ಮನವರ ದೇವಾಲಯ ನಿರ್ಮಿಸಿದರು. ಕುಲದೇವತೆಯೇ ನಮಗೆ ಪ್ರೇರಣೆ ಮತ್ತು ಸ್ಫೂರ್ತಿ ಎಂದು ಹೇಳಿದರು.ಗಿರಿಯಾಪುರ ಕೇಂದ್ರ ಅಧ್ಯಕ್ಷ ಎಚ್.ಸಿ.ರೇವಣಸಿದ್ದಪ್ಪ, ಹತ್ತು ಗ್ರಾಮಗಳಲ್ಲಿ ನಮ್ಮ ಜನರು ನೆಲೆಸಿದ್ದು, ಮುಖ್ಯವಾಗಿ ಕೃಷಿಕ ರಾಗಿದ್ದಾರೆ. ಪ್ರತಿ ವರ್ಷ ಹೇಮರಡ್ಡಿ ಮಲ್ಲಮ್ಮ ಜಯಂತಿ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ. 12 ವರ್ಷಕ್ಕೊಮ್ಮೆ ಮಲ್ಲಮ್ಮನವರ ರಥೋತ್ಸವ ನಡೆಯುತ್ತದೆ ಎಂದು ತಿಳಿಸಿದರು.ಕಾರ್ಯದರ್ಶಿ ಶಿವಪ್ಪ ಪ್ರಾಸ್ತಾವಿಕ ಭಾಷಣ ಮಾಡಿದರು. ಬಳಗದ ಗೌರವಾಧ್ಯಕ್ಷ ಮಹಾಲಿಂಗಪ್ಪ, ಹೇಮರಡ್ಡಿ ಸಹಕಾರ ಬ್ಯಾಂಕ್ ನ ವ್ಯವಹಾರಗಳ ವರದಿ ನೀಡಿದರು. ಅಜ್ಜಂಪುರ ಪಟ್ಟಣ ಪಂಚಾಯತಿ ನೂತನ ಅಧ್ಯಕ್ಷ, ಉಪಾಧ್ಯಕ್ಷೆ, ಸದಸ್ಯರನ್ನು ಸನ್ಮಾನಿಸಲಾಯಿತು.ಸನ್ಮಾನಿತರ ಪರವಾಗಿ ಪಪಂ ಉಪಾಧ್ಯಕ್ಷೆ ಕವಿತಾ ಕೇಶವ ಮಾತನಾಡಿ, ಸಾಂಸಾರಿಕ ಕಷ್ಟಗಳಿಗೆ ಎದೆಗುಂದದೆ ಒಬ್ಬ ಸದ್ಗೃಹಿಣಿ, ಶಿವಶರಣೆಯಾಗಿ ಸಾರ್ಥಕ ಜೀವನ ನಡೆಸಿದರು. ನಿಸ್ವಾರ್ಥಿ ಮಲ್ಲಮ್ಮ ತನ್ನ ಸಮುದಾಯಕ್ಕೆ ಒಳಿತಾಗಲು ದೇವರನ್ನು ಪ್ರಾರ್ಥಿಸಿದ್ದರು ಎಂದರು.
ಪಪಂ ಸದಸ್ಯರಾದ ಅಣ್ಣಪ್ಪ, ತೀರ್ಥಪ್ರಸಾದ್, ನಿಸಾರ್ ಅಹಮದ್ ಮಾತನಾಡಿದರು. ದಾಸೋಹದ ಪ್ರಾಯೋಜಿಸಿದ ಕನ್ನಡ ನೂತನ ಸಂಸ್ಥೆ ಪರವಾಗಿ ಪ್ರಸನ್ನ, ನಿವೃತ್ತಲಾಗಲಿರುವ ಪಿಡಿಒ ಪ್ರಸನ್ನರನ್ನು ಸನ್ಮಾನಿಸಲಾಯಿತು. ಕಡೂರು, ತರೀಕೆರೆ ಮತ್ತು ಅಜ್ಜಂಪುರ ತಾಲೂಕಿನ ವಿವಿಧ ಗ್ರಾಮಗಳ ಪದಾಧಿಕಾರಿಗಳು, ಅಜ್ಜಂಪುರ ಬಳಗದ ಸದಸ್ಯ-ಸದಸ್ಯೆಯರು ಪಾಲ್ಗೊಂಡರು. ಸತೀಶ್ ಸ್ವಾಗತಿಸಿ, ಮೋಹನಕುಮಾರ್ ನಿರೂಪಿಸಿದರು. ಕುಮಾರ್ ವಂದಿಸಿದರು.