ಹೋಟೆಲ್ ಉದ್ಯಮಕ್ಕೂ ತಟ್ಟಿದ ಯುದ್ಧದ ಬಿಸಿ!

KannadaprabhaNewsNetwork |  
Published : Mar 12, 2026, 01:15 AM IST
ಗದಗ ನಗರದಲ್ಲಿ ಬುಧವಾರ ಗ್ಯಾಸ್‌ ಸಿಲಿಂಡರ್‌ ವಿತರಣೆ ಮಾಡುತ್ತಿರುವುದು. | Kannada Prabha

ಸಾರಾಂಶ

​ಗ್ಯಾಸ್ ಲಭ್ಯತೆಯ ಕೊರತೆಯಿಂದ ಗ್ಯಾಸ್ ಉಳಿತಾಯಕ್ಕಾಗಿ ಕೆಲವು ಹೋಟೆಲ್‌ಗಳು ಕೇವಲ ಅಗತ್ಯವಿರುವ ತಿಂಡಿ, ತಿನಿಸುಗಳನ್ನು ಮಾತ್ರ ತಯಾರಿಸಲು ನಿರ್ಧರಿಸುತ್ತಿದ್ದಾರೆ.

ಶಿವಕುಮಾರ ಕುಷ್ಟಗಿಗದಗ: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ಇದರ ನೇರ ಹೊಡೆತ ಇದೀಗ ನಗರ ಹಾಗೂ ಜಿಲ್ಲೆಯ ತಾಲೂಕು ಕೇಂದ್ರಗಳ ಹೋಟೆಲ್ ಉದ್ಯಮದ ಮೇಲೆ ಬಿದ್ದಿದೆ.​ಕಳೆದ ಕೆಲವು ದಿನಗಳಿಂದ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಕೇಳಿಬರುತ್ತಿದ್ದ ಸಿಲಿಂಡರ್ ಕೊರತೆಯ ಕೂಗು, ಬುಧವಾರ ಬೆಳಗ್ಗೆಯಿಂದ ಗದಗ ನಗರವನ್ನೂ ಪ್ರವೇಶಿಸಿದೆ. ಗ್ಯಾಸ್ ಏಜೆನ್ಸಿಗಳಿಂದ ಪೂರೈಕೆಯಾಗಬೇಕಿದ್ದ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಸಂಖ್ಯೆಯಲ್ಲಿ ದಿಢೀರ್ ಇಳಿಕೆಯಾಗಿದ್ದು, ಹೋಟೆಲ್ ಉದ್ಯಮಿಗಳು ಆತಂಕಗೊಂಡಿದ್ದಾರೆ.​ಹೋಟೆಲ್ ಉದ್ಯಮಕ್ಕೆ ಕಂಟಕ: ​ಗದುಗಿನ ಪ್ರಸಿದ್ಧ ಹೋಟೆಲ್‌ಗಳಲ್ಲಿ ಒಂದಾದ ಗೀತಾಂಜಲಿ ಹೋಟೆಲ್ ಸೇರಿದಂತೆ ನಗರದ ಬಹುತೇಕ ಉಪಾಹಾರ ಮಂದಿರಗಳು ಈಗಾಗಲೇ ಈ ಸಮಸ್ಯೆಯನ್ನು ಎದುರಿಸುತ್ತಿವೆ. ಗೀತಾಂಜಲಿ ಹೋಟೆಲ್‌ನಲ್ಲಿ ಉಂಟಾಗಿದ್ದ ಅನಿಲ ಕೊರತೆಯನ್ನು ಸದ್ಯಕ್ಕೆ ತಾತ್ಕಾಲಿಕವಾಗಿ ಸರಿದೂಗಿಸಲಾಗಿದೆಯಾದರೂ ಇದು ಎಷ್ಟು ದಿನಗಳವರೆಗೆ ಸಾಧ್ಯ ಎಂಬ ಪ್ರಶ್ನೆ ಕಾಡುತ್ತಿದೆ.​ನಮ್ಮಲ್ಲಿರುವ ಸಿಲಿಂಡರ್‌ಗಳ ದಾಸ್ತಾನು ಇನ್ನು ಕೇವಲ ಎರಡು ದಿನಗಳ ಕಾಲ ಬರಬಹುದು. ಪೂರೈಕೆ ಇದೇ ರೀತಿ ಸ್ಥಗಿತಗೊಂಡರೆ ಅಥವಾ ವಿಳಂಬವಾದರೆ ಹೋಟೆಲ್ ನಡೆಸುವುದು ಅಸಾಧ್ಯವಾಗಲಿದೆ ಎಂದು ಸ್ಥಳೀಯ ಹೋಟೆಲ್ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.ಸಮಸ್ಯೆ ಗಂಭೀರ?: ​ಗ್ಯಾಸ್ ಲಭ್ಯತೆಯ ಕೊರತೆಯಿಂದ ಗ್ಯಾಸ್ ಉಳಿತಾಯಕ್ಕಾಗಿ ಕೆಲವು ಹೋಟೆಲ್‌ಗಳು ಕೇವಲ ಅಗತ್ಯವಿರುವ ತಿಂಡಿ, ತಿನಿಸುಗಳನ್ನು ಮಾತ್ರ ತಯಾರಿಸಲು ನಿರ್ಧರಿಸುತ್ತಿದ್ದಾರೆ. ಪೂರೈಕೆ ಕಡಿಮೆಯಾಗಿ ಬೇಡಿಕೆ ಹೆಚ್ಚಾದಾಗ ಕಾಳಸಂತೆಯಲ್ಲಿ ಮಾರಾಟವಾಗುವ ಸಾಧ್ಯತೆ ಇದೆ. ಪೂರ್ಣ ಪ್ರಮಾಣದ ಅಡುಗೆ ಮಾಡಲು ಸಾಧ್ಯವಾಗದಿದ್ದರೆ ವ್ಯಾಪಾರ ಕುಂಠಿತಗೊಂಡು ದಿನಗೂಲಿ ನೌಕರರ ಮೇಲೆ ಪರಿಣಾಮ ಬೀರಲಿದೆ.​ಒತ್ತಾಯ:​ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆಗಳು ತಕ್ಷಣ ಮಧ್ಯಪ್ರವೇಶಿಸಿ, ಹೋಟೆಲ್ ಉದ್ಯಮಕ್ಕೆ ಅಗತ್ಯವಿರುವ ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಹಾಗೂ ಉದ್ಯಮಿಗಳ ಒತ್ತಾಯವಾಗಿದೆ.

ಪಿಜಿ, ಸರ್ಕಾರಿ ಹಾಸ್ಟೆಲ್‌ಗೆ ತಟ್ಟಿದ ಬಿಸಿಗದಗ ನಗರದಲ್ಲಿರುವ ಪಿಜಿಗಳು ಹಾಗೂ ಸರ್ಕಾರಿ ಹಾಸ್ಟೆಲ್‌ಗಳಲ್ಲಿರುವ ನೂರಾರು ಯುವಕ- ಯುವತಿಯರಿಗೂ ಸಿಲಿಂಡರ್ ಕೊರತೆಯ ಬಿಸಿ ತಟ್ಟುತ್ತಿದ್ದು, ಇದೇ ರೀತಿ ಕೊರತೆ ಮುಂದುವರಿದಲ್ಲಿ ಪಿಜಿ ಹಾಗೂ ಹಾಸ್ಟೆಲ್‌ಗಳಲ್ಲಿರುವವರು ತಮ್ಮ ತಮ್ಮ ಮನೆಗಳಿಗೆ ತೆರಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ. ಆಟೋ ಎಲ್ಪಿಜಿ ದರ ದಿಢೀರ್ ಏರಿಕೆನಗರದಲ್ಲಿ ಕಳೆದ 10 ದಿನಗಳ ಅಂತರದಲ್ಲಿ ಆಟೋ ಎಲ್‌ಪಿಜಿ ದರದಲ್ಲಿ ಬರೋಬ್ಬರಿ ₹19.50 ಏರಿಕೆಯಾಗಿದ್ದು, ಆಟೋ ಚಾಲಕರು ಮತ್ತು ಮಾಲೀಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಂಗಳವಾರ ಕೆಜಿಗೆ ₹73 ಇತ್ತು. ಬುಧವಾರ ₹77.50ಕ್ಕೆ ಏರಿಕೆಯಾಗಿದ್ದು ​ಒಂದೇ ದಿನಕ್ಕೆ ₹4.50 ಹೆಚ್ಚಳವಾಗಿದೆ. ಯುದ್ಧದ ಸನ್ನಿವೇಶಕ್ಕೂ ಮುನ್ನ ದರ ಕೆಜಿಗೆ ಕೇವಲ ₹58 ಇತ್ತು.

​ಬಂಕ್‌ಗಳ ಮುಂದೆ ಸರದಿ: ​ಗ್ಯಾಸ್ ಅಭಾವ ಉಂಟಾಗಬಹುದು ಎಂಬ ಭೀತಿಯಿಂದ ಮತ್ತು ಮುಂದಿನ ದಿನಗಳಲ್ಲಿ ದರ ಮತ್ತಷ್ಟು ಹೆಚ್ಚಾಗಬಹುದು ಎಂಬ ಆತಂಕದಿಂದ ಚಾಲಕರು ಗದಗ ನಗರದ ಗ್ಯಾಸ್‌ ಬಂಕ್‌ಗಳಿಗೆ ಮುಗಿಬೀಳುತ್ತಿದ್ದಾರೆ. ಈ ಹಿಂದೆ ದಿನಕ್ಕೆ ₹300 ಗ್ಯಾಸ್ ತುಂಬಿಸುತ್ತಿದ್ದವರು, ಈಗ ಅನಿವಾರ್ಯವಾಗಿ ಫುಲ್ ಟ್ಯಾಂಕ್ ಮಾಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ.​ಗ್ಯಾಸ್ ದರ ಗಗನಕ್ಕೇರಿದ್ದರೂ ಗ್ರಾಹಕರಿಂದ ಪಡೆಯುವ ಕನಿಷ್ಠ ಬಾಡಿಗೆ ಮಾತ್ರ ಇನ್ನೂ ₹20 ಮಟ್ಟದಲ್ಲೇ ಇದೆ. ಹೆಚ್ಚುವರಿ ಗ್ಯಾಸ್ ವೆಚ್ಚದಿಂದಾಗಿ ದಿನದ ಸಂಪಾದನೆಯಲ್ಲಿ ಬಹುಪಾಲು ಮೊತ್ತ ಇಂಧನಕ್ಕೇ ವ್ಯಯವಾಗುತ್ತಿದೆ. ದರ ಏರಿಕೆಯನ್ನು ಭರಿಸಲಾಗದೆ ಅಸಹಾಯಕರಾಗಿರುವ ಹಲವು ಚಾಲಕರು ತಮ್ಮ ಆಟೋಗಳನ್ನು ಮನೆಯಲ್ಲೇ ನಿಲ್ಲಿಸುವ ನಿರ್ಧಾರ ಮಾಡಿದ್ದಾರೆ ಎನ್ನುತ್ತಾರೆ ಕೆಲವು ಆಟೋ ಚಾಲಕರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೆಹರು ಮಾರ್ಕೆಟ್‌ನಲ್ಲಿ ವ್ಯಾಪಾರಕ್ಕೆ ಅಡ್ಡಿ ಮಾಡದಂತೆ ಮನವಿ
ಖಾಸಗಿ ಕನ್ನಡ ಮಾಧ್ಯಮ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಲು ಆಗ್ರಹ