ವಿಕಸಿತ ಭಾರತ ಸಾಧಿಸಲು ವಿಜ್ಞಾನಿಗಳ ಪಾತ್ರ ಪ್ರಮುಖ: ಡಾ. ಜಿತೇಂದ್ರ ಆರ್. ಜಹಗೀರದಾರ

KannadaprabhaNewsNetwork |  
Published : Mar 12, 2026, 01:15 AM IST
ರಾಷ್ಟ್ರೀಯ ವಿಜ್ಞಾನ ಕಾರ್ಯಕ್ರಮವನ್ನು ಡಾ. ಜಿತೇಂದ್ರ ಆರ್. ಜಹಗೀರದಾರ ಉದ್ಘಾಟಿಸಿದರು. | Kannada Prabha

ಸಾರಾಂಶ

2047ರ ವೇಳೆಗೆ ಭಾರತವನ್ನು ವಿಕಸಿತ ಭಾರತವಾಗಿ ಪರಿವರ್ತಿಸಲು ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಔಷಧ, ಬಾಹ್ಯಾಕಾಶ ಇತ್ಯಾದಿ ಕ್ಷೇತ್ರಗಳಲ್ಲಿನ ವಿಜ್ಞಾನಿಗಳ ಕೊಡುಗೆಗಳು ಬಹಳಷ್ಟು ಮಹತ್ವದ್ದಾಗಿವೆ.

ನರಗುಂದ: ಎಲ್ಲ ಕ್ಷೇತ್ರಗಳಲ್ಲಿ ವಿಕಸಿತ ಭಾರತವನ್ನು ಸಾಧಿಸುವಲ್ಲಿ ವಿಜ್ಞಾನಿಗಳ ಪಾತ್ರ ದೊಡ್ಡದಿದೆ ಎಂದು ಹುಲಕೋಟಿಯ ಎಚ್.ಕೆ. ಪಾಟೀಲ್ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ಜಿತೇಂದ್ರ ಆರ್. ಜಹಗೀರದಾರ ತಿಳಿಸಿದರು.

ಬುಧವಾರ ಯಡೆಯೂರ ಸಿದ್ದಲಿಂಗೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿವರ್ಷ ಫೆ. 28ರಂದು ಸರ್ ಸಿ.ವಿ. ರಾಮನ್ ಅವರ ‘ರಾಮನ್ ಎಫೆಕ್ಟ್’ ದಿನವನ್ನು ಒಂದು ನಿರ್ದಿಷ್ಟ ಥೀಮ್‍ನೊಂದಿಗೆ ಆಚರಿಸಲಾಗುತ್ತಿದೆ. ಈ ವರ್ಷದ ಥೀಮ್ ವಿಜ್ಞಾನದಲ್ಲಿ ಮಹಿಳೆಯರು ವಿಕಸಿತ ಭಾರತ ಸಾಧನೆಯನ್ನು ವೇಗಗೊಳಿಸುವುದು ಆಗಿದೆ ಎಂದರು.

2047ರ ವೇಳೆಗೆ ಭಾರತವನ್ನು ವಿಕಸಿತ ಭಾರತವಾಗಿ ಪರಿವರ್ತಿಸಲು ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಔಷಧ, ಬಾಹ್ಯಾಕಾಶ ಇತ್ಯಾದಿ ಕ್ಷೇತ್ರಗಳಲ್ಲಿನ ವಿಜ್ಞಾನಿಗಳ ಕೊಡುಗೆಗಳು ಬಹಳಷ್ಟು ಮಹತ್ವದ್ದಾಗಿವೆ. ಪ್ರಸಕ್ತ ವರ್ಷದ ಕಾರ್ಯಕ್ರಮದ ಗಮನವು ವೈಜ್ಞಾನಿಕ ತಂತ್ರಜ್ಞಾನ, ಎಂಜಿನಿಯರಿಂಗ್, ಔಷಧಗಳು, ಗಣಿತ, ಬಾಹ್ಯಾಕಾಶ ಇತ್ಯಾದಿ ವಿಭಾಗಗಳಲ್ಲಿನ ಲಿಂಗ ಅಂತರವನ್ನು ತುಂಬುವುದು ಮತ್ತು ಆ ಮೂಲಕ ವಿಕಸಿತ ಭಾರತ ಕಡೆಗೆ ಭಾರತದ ಅಭಿವೃದ್ಧಿಯ ವೇಗವನ್ನು ಹೆಚ್ಚಿಸುವುದು ಆಗಿದೆ ಎಂದರು.

ಉಪನ್ಯಾಸಕ ಎಂ.ಬಿ. ಹೂಗಾರ ಪ್ರಾಸ್ತಾವಿಕವಾಗಿ ಮಾತನಾಡಿ, ವಿಜ್ಞಾನ ದಿನಾಚರಣೆಯ ಈ ವರ್ಷದ ಧ್ಯೇಯ ವಿಜ್ಞಾನದಲ್ಲಿ ಮಹಿಳೆ ವಾಕ್ಯವು ಪ್ರಮುಖವಾಗಿದೆ. ನಂದಿನಿ ಹರಿನಾಥ, ರಿತು ಕರಿದಾಳ ಅವರಂಥ ಮಹಿಳಾ ವಿಜ್ಞಾನಿಗಳು ಇಸ್ರೋದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ಕಾಲೇಜಿನ ಪ್ರಾಚಾರ್ಯ ಆರ್.ಬಿ. ಪಾಟೀಲ ಮಾತನಾಡಿ, ಭಾರತದ ಮಹಾನ್‌ ವಿಜ್ಞಾನಿ ಸಿ.ವಿ. ರಾಮನ್‌ ಅವರು 1928ರ ಫೆ. 28ರಂದು ಬೆಳಕಿನ ಪರಿಣಾಮವನ್ನು ಕಂಡುಹಿಡಿದ ದಿನದ ಸ್ಮರಣೆಗಾಗಿ ಈ ದಿನವನ್ನು ವಿಜ್ಞಾನ ದಿನವಾಗಿ ಆಚರಿಸಲಾಗುತ್ತಿದೆ. ಬರಿಗಣ್ಣಿಗೆ ಕಾಣುವ ಬೆಳಕು ಬಿಳಿಯಾಗಿದ್ದರೂ ಅದರಲ್ಲಿ ಏಳು ಬಣ್ಣಗಳು ಇರುತ್ತವೆ ಎಂಬುದನ್ನು ಪ್ರಯೋಗದಿಂದ ತೋರಿಸಿದ್ದರು ಎಂದರು.

ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ವೀರನಗೌಡ ಬಿ. ಪಾಟೀಲ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಕಾಲೇಜಿನ ಅನೇಕ ಪ್ರಶಿಕ್ಷಣಾರ್ಥಿಗಳು ಭೌತವಿಜ್ಞಾನ ಮತ್ತು ರಸಾಯನ ಶಾಸ್ತ್ರದ ಬಗ್ಗೆ ತಯಾರಿಸಿದ ಆಸಕ್ತಿದಾಯಕ ಪ್ರಯೋಗಗಳನ್ನು ಪ್ರದರ್ಶಿಸಲಾಯಿತು.

ಕಾಲೇಜಿನ ವೈ.ಎಂ. ಅನ್ಸಾರಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶೋಭಾ ಮಡಿವಾಳರ ಸ್ವಾಗತಿಸಿದರು. ಭರತ ಬೂದನವರ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾ ಬಡಿಗೇರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೆಹರು ಮಾರ್ಕೆಟ್‌ನಲ್ಲಿ ವ್ಯಾಪಾರಕ್ಕೆ ಅಡ್ಡಿ ಮಾಡದಂತೆ ಮನವಿ
ಖಾಸಗಿ ಕನ್ನಡ ಮಾಧ್ಯಮ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಲು ಆಗ್ರಹ