ಇಂದು ಕುಡಗುಂಟಿ ಗದ್ದಿ ಬಸವೇಶ್ವರ ಜಾತ್ರೋತ್ಸವ

KannadaprabhaNewsNetwork |  
Published : Mar 12, 2026, 01:15 AM IST
೧೧ ವೈಎಲ್‌ಬಿ ೦೧ಯಲಬುರ್ಗಾ ತಾಲೂಕಿನ ಕುಡಗುಂಟಿಯ ಶ್ರೀ ಗದ್ದಿಬಸವೇಶ್ವರನ ವಿಗ್ರಹ. | Kannada Prabha

ಸಾರಾಂಶ

ಸ್ವಾತಂತ್ರ್ಯ ಪೂರ್ವದಿಂದಲೂ ಗ್ರಾಮದಲ್ಲಿ ಗದ್ದಿ ಬಸವೇಶ್ವರನ ಜಾತ್ರಾ ಉತ್ಸವವು ಆಚರಣೆಯಲ್ಲಿದೆ ಎಂದು ಹಿರಿಯರು ಹೇಳುತ್ತಾರೆ.

ಯಲಬುರ್ಗಾ: ಗೂಳಿ ಐಕ್ಯವಾದ ಸ್ಥಳದಲ್ಲಿ ಉದ್ಭವಗೊಂಡ ಕಲ್ಲಿನ ಬಸವಮೂರ್ತಿ ಇರುವ ತಾಲೂಕಿನ ಕುಡಗುಂಟಿ ಗ್ರಾಮದ ಆರಾಧ್ಯದೈವ ಶ್ರೀ ಗದ್ದಿಬಸವೇಶ್ವರ ಜಾತ್ರಾ ಮಹೋತ್ಸವ ಗುರುವಾರ (ಮಾ. ೧೨) ನಡೆಯಲಿದೆ.

ಸ್ವಾತಂತ್ರ್ಯ ಪೂರ್ವದಿಂದಲೂ ಗ್ರಾಮದಲ್ಲಿ ಗದ್ದಿ ಬಸವೇಶ್ವರನ ಜಾತ್ರಾ ಉತ್ಸವವು ಆಚರಣೆಯಲ್ಲಿದೆ ಎಂದು ಹಿರಿಯರು ಹೇಳುತ್ತಾರೆ. ಯರೇಹಂಚಿನಾಳ, ಇಟಗಿಯಿಂದ ಎತ್ತಿನ ಚಕ್ಕಡಿ ಮೂಲಕ ಹಳ್ಳಿಗಳಲ್ಲಿ ಗಾಣದ ಎಣ್ಣೆ ವ್ಯಾಪಾರ ಮಾಡಲು ಸಜ್ಜನರು ಬರುತ್ತಿರುವ ಅಂದಿನ ಕಾಲದಲ್ಲಿ ಚಕ್ಕಡಿಯ ಹಿಂದೆ ಗೂಳಿ (ಬಸವಣ್ಣ) ನಿತ್ಯ ಬರುತ್ತಿತ್ತು. ಕುಡಗುಂಟಿಯ ಹೊರವಲಯದಲ್ಲಿ ಒಂದು ದಿನ ವ್ಯಾಪಾರಿಗಳು ಊಟ ಮಾಡುವ ವೇಳೆ ಗೂಳಿ ಗದ್ದೆಯಲ್ಲಿ ನೀರು ಕುಡಿಯಲು ಹೋಗಿ ಮುಳುಗುತ್ತದೆ. ಗ್ರಾಮಸ್ಥರು ಹುಡುಕಿದರೂ ಸಿಗುವುದಿಲ್ಲ. ವರ್ಷ ಕಳೆದಂತೆ ಗೂಳಿ ಐಕ್ಯವಾದ ಸ್ಥಳದಲ್ಲಿ ಕಲ್ಲಿನ ಆಕಾರದ ಕೊಂಬು ಕಾಣಿಸಿಕೊಂಡ ಹಿನ್ನೆಲೆ ಉದ್ಭವ ಮೂರ್ತಿಯಾಗಿ ರೂಪ ತಾಳಿದೆ ಎನ್ನುವುದು ಭಕ್ತರ ನಂಬಿಕೆ. ಅಂದಿನಿಂದ ಗದ್ದಿ ಬಸವಣ್ಣ ಎಂದು ನಾಮಕರಣ ಮಾಡಿ, ಪೂಜೆ ಸಲ್ಲಿಸುತ್ತ ಬರಲಾಗಿದೆ ಎನ್ನುತ್ತಾರೆ ಗ್ರಾಮದ ಹಿರಿಯರು.

ಧಾರ್ಮಿಕ ಕಾರ್ಯಗಳು: ಮಾ. ೧೦ರಂದು ಭಜನಾ ಮೇಳದವರಿಂದ ಕಾರ್ಯಕ್ರಮ, ೧೧ರಂದು ಬೆಳಗಿನ ಜಾವ ಗದ್ದಿಬಸವೇಶ್ವರನಿಗೆ ರುದ್ರಾಭಿಷೇಕ ಮತ್ತು ವಿಶೇಷ ಹೂವಿನ ಅಲಂಕಾರ ಪೂಜೆ ನೆರವೇರಿದೆ. ಮಹಿಳೆಯರಿಂದ ಕುಂಭ ಮೆರವಣಿಗೆ ನಡೆದಿದೆ. ಮಾ. ೧೨ರಂದು ಗ್ರಾಮದ ಹೊರ ವಲಯದಲ್ಲಿರುವ ಗದ್ದಿಬಸವೇಶ್ವರ ದೇವಸ್ಥಾನದಿಂದ ಮಂಗಳ ವಾದ್ಯದೊಂದಿಗೆ ಉತ್ಸವ ಮೂರ್ತಿ ಗ್ರಾಮಕ್ಕೆ ಕರೆತಂದು ಪೂಜಾರಿಗಳಿಂದ ಸಂಪ್ರದಾಯದಂತೆ ಪೂಜಾ ಕೈಂಕರ್ಯ ನೆರವೇರಲಿದೆ.

ಮಾ. ೧೧ರಂದು ಸಂಜೆ ೬.೩೦ಕ್ಕೆ ಗಜೇಂದ್ರಗಡ ತಳ್ಳಿಹಾಳ‌ ಸಂಸ್ಥಾನ ಕೋಡಿಮಠದ ಶಿವಯೋಗಿ ಡಾ. ಶರಣಬಸವ ಸ್ವಾಮೀಜಿಗಳಿಂದ ಪ್ರವಚನ, ಹುಬ್ಬಳ್ಳಿ-ಮುಗನೂರಿನ ಬಸವರಾಜ ರೇವಡಿ ಅವರಿಂದ ಜಾದೂ ಪ್ರದರ್ಶನ ನಡೆಯಿತು.

ಕುಡಗುಂಟಿ ಗ್ರಾಮದ ಆರಾಧ್ಯದೈವ ಶ್ರೀ ಗದ್ದಿ ಬಸವೇಶ್ವರ ತನ್ನದೆಯಾದ ಐತಿಹ್ಯವಿದೆ. ಜಾತ್ರೋತ್ಸವ ಅತ್ಯಂತ ಶ್ರದ್ಧಾ-ಭಕ್ತಿಗಳಿಂದ ನಡೆಯಲಿದೆ. ಐದು ದಿನಗಳ ಕಾಲ ನಡೆಯುವ ವಿವಿಧ ಧಾರ್ಮಿಕ ಕಾರ್ಯಗಳಲ್ಲಿ ಗ್ರಾಮಸ್ಥರು ಪಾಲ್ಗೊಂಡು ದೇವರಿಗೆ ನೈವೇದ್ಯ ಅರ್ಪಿಸುವ ಜತೆಗೆ ಬೇಡಿಕೊಂಡ ಹರಕೆ ಸಲ್ಲಿಸುವ ಮೂಲಕ ದೇವರ ಬಸವೇಶ್ವರನ ಕೃಪೆಗೆ ಪಾತ್ರರಾಗುತ್ತಾರೆ ಎಂದು ಗ್ರಾಮದ ಯುವ ಮುಖಂಡ ಬಸವರಾಜ ಬೊಮ್ಮನಾಳ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೆಹರು ಮಾರ್ಕೆಟ್‌ನಲ್ಲಿ ವ್ಯಾಪಾರಕ್ಕೆ ಅಡ್ಡಿ ಮಾಡದಂತೆ ಮನವಿ
ಖಾಸಗಿ ಕನ್ನಡ ಮಾಧ್ಯಮ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಲು ಆಗ್ರಹ