ದೇವಸ್ಥಾನ ಅಭಿವೃದ್ಧಿಗೆ ದಾನಿಗಳ ನೆರವು ಅಗತ್ಯ

KannadaprabhaNewsNetwork | Published : Jan 7, 2024 1:30 AM

ಸಾರಾಂಶ

ದೇವಸ್ಥಾನಗಳ ಅಭಿವೃದ್ಧಿ ಮಾಡಲು ಸರ್ಕಾರದ ಅನುದಾನ ಜೊತೆಗೆ ಸ್ಥಳೀಯ ದಾನ ಮಾಡಿದರೆ ಉತ್ತಮ ದೇವಸ್ಥಾನ ನಿರ್ಮಾಣವಾಗುತ್ತದೆ.

ಚಿತ್ರದುರ್ಗ: ದೇವಸ್ಥಾನಗಳ ಅಭಿವೃದ್ಧಿ ಮಾಡಲು ಸರ್ಕಾರದ ಅನುದಾನ ಜೊತೆಗೆ ಸ್ಥಳೀಯ ದಾನ ಮಾಡಿದರೆ ಉತ್ತಮ ದೇವಸ್ಥಾನ ನಿರ್ಮಾಣವಾಗುತ್ತದೆ. ಇಂತಹ ಕೆಲಸ ಭೀಮರೆಡ್ಡಿ ಪಾಪಮ್ಮ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ತಾಲೂಕಿನ ಬೆಳಗಟ್ಟ ಗ್ರಾಮದಲ್ಲಿ ನಡೆದ ದುರ್ಗಾದೇವಿ ದೇವಸ್ಥಾನದ ಕಳಸಾರೋಹಣ ಮತ್ತು ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿ ಗ್ರಾಮದಲ್ಲಿ ದೇವಸ್ಥಾನಗಳ ನಿರ್ಮಾಣದಿಂದ ಶಾಂತಿ ನೆಲೆಸುತ್ತದೆ. ದೇವಸ್ಥಾನಗಳ ಅಭಿವೃದ್ಧಿ ಮಾಡಲು ಶಾಸಕರ ಅನುದಾನ ಮತ್ತು ಮುಜರಾಯಿ ಇಲಾಖೆ ಅನುದಾನ ನೀಡುತ್ತೇನೆ. ಆದರೆ ಸಂಪೂರ್ಣ ಅಭಿವೃದ್ಧಿ ಮಾಡಲು ಸ್ಥಳೀಯ ಗ್ರಾಮಸ್ಥರು ಮತ್ತು ಭಕ್ತರು ಕೈ ಜೋಡಿಸಬೇಕು. ಹಣ ಇದ್ದವರೆಲ್ಲ ದಾನ ಮಾಡಲು ಸಾಧ್ಯವಿಲ್ಲ. ಸಮಾಜದ ಬಗ್ಗೆ ಕಾಳಜಿ ಮತ್ತು ದಾನ ಮಾಡುವ ಮನಸ್ಸಿರಬೇಕು. ಅಂತಹ ದಾನ ಮಾಡುವ ಗುಣವನ್ನು ಬೆಳಘಟ್ಟ ಗ್ರಾಮದ ಭೀಮರೆಡ್ಡಿ ಮತ್ತು ಪತ್ನಿ ಪಾಪಮ್ಮ ಅಳವಡಿಸಿಕೊಳ್ಳುವ ಮೂಲಕ ದೇವಸ್ಥಾನ ಅಭಿವೃದ್ಧಿಗೆ 42 ಲಕ್ಷ ರು. ಹಣ ನೀಡಿದ್ದಾರೆಂದು ಶ್ಲಾಘಿಸಿದರು.

ಮುಜರಾಯಿ ಇಲಾಖೆಯಿಂದ 10 ಲಕ್ಷ ರು. ಅನುದಾನ ದುರ್ಗಾದೇವಿ ದೇವಸ್ಥಾನ ನಿರ್ಮಾಣಕ್ಕೆ ನೀಡಿದ್ದೇನೆ. ಆದರೆ ಅದು ಪೂರ್ಣಗೊಳ್ಳಲು ಭೀಮರೆಡ್ಡಿ ಅವರ ಸಹಕಾರದಿಂದ ಸಾಧ್ಯವಾಯಿತು. ಎಲ್ಲರಿಗೂ ಇಂತಹ ಗುಣ ಬೆಳೆಸಿಕೊಂಡರೆ ಉತ್ತಮ ವಾತಾವರಣ ನಿರ್ಮಾಣವಾಗುತ್ತದೆ ಜೊತೆಗೆ ಗ್ರಾಮಗಳಲ್ಲಿ ಸಹಬಾಳ್ವೆ ಬದುಕು ನಡೆಸಲು ಅನುಕೂಲವಾಗುತ್ತದೆ ಎಂದು ರಘು ಮೂರ್ತಿ ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುಶ್ರೀ, ಉಪಾಧ್ಯಕ್ಷ ರಾಮಚಂದ್ರ ರೆಡ್ಡಿ, ಜಿಪಂ ಮಾಜಿ ಸದಸ್ಯ ಬಾಬುರೆಡ್ಡಿ, ದಾನಿಗಳಾದ ಭೀಮರೆಡ್ಡಿ, ಪಾಪಮ್ಮ, ಗ್ರಾಮ ಪಂಚಾಯತಿ ಸದಸ್ಯ ಹನುಮಂತರೆಡ್ಡಿ ಮತ್ತು ಸ್ಥಳೀಯ ಮುಖಂಡರು ಇದ್ದರು.

Share this article