ಶೌರ್ಯ ವಿಪತ್ತು ಸ್ವಯಂ ಸೇವಕರ ಸೇವೆ ಸ್ಮರಣೀಯ

KannadaprabhaNewsNetwork | Published : Oct 2, 2024 1:04 AM

ಸಾರಾಂಶ

ಚಿಕ್ಕಮಗಳೂರು, ಶೌರ್ಯ ವಿಪತ್ತು ಘಟಕದಲ್ಲಿ ಕರ್ತವ್ಯ ನಿರ್ವಹಿಸುವ ಸ್ವಯಂ ಸೇವಕರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಾಗಾರ ಹಮ್ಮಿಕೊಂಡು ಪ್ರೇರೇಪಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪ್ರವೀಣ್ ಹೇಳಿದರು.

- ಜೀವ ರಕ್ಷಣಾ ಕೌಶಲ್ಯ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಪ್ರವೀಣ್ ಅಭಿಮತ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಶೌರ್ಯ ವಿಪತ್ತು ಘಟಕದಲ್ಲಿ ಕರ್ತವ್ಯ ನಿರ್ವಹಿಸುವ ಸ್ವಯಂ ಸೇವಕರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಾಗಾರ ಹಮ್ಮಿಕೊಂಡು ಪ್ರೇರೇಪಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪ್ರವೀಣ್ ಹೇಳಿದರು.

ನಗರದ ಅಗ್ನಿಶಾಮಕ ಇಲಾಖೆ ಕಚೇರಿ ಆವರಣದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್, ಜನಜಾಗೃತಿ ವೇದಿಕೆ ಸಹಯೋಗದಲ್ಲಿ ಏರ್ಪಡಿಸಿದ್ದ ಶೌರ್ಯ ವಿಪತ್ತು ಸ್ವಯಂ ಸೇವಕರಿಗೆ ಜೀವ ರಕ್ಷಣಾ ಕೌಶಲ್ಯ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ತುರ್ತು, ಪ್ರವಾಹ ಅಥವಾ ಭೂಕುಸಿತದಂಥ ಸನ್ನಿವೇಶದಲ್ಲಿ ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸುವ ಸ್ವಯಂಸೇವಕರ ಸೇವೆ ಅವಿಸ್ಮರಣೀಯ ಎಂದ ಅವರು, ಜವಾಬ್ದಾರಿಯುತ ಕೆಲಸ ಮಾಡುವವರಿಗೆ ಧರ್ಮಸ್ಥಳ ಟ್ರಸ್ಟ್ ಸಹಕರಿಸುತ್ತಿರುವುದು ಖುಷಿಯ ಸಂಗತಿ ಎಂದರು.ವಿಪತ್ತು ಘಟಕದ ಯೋಜನಾಧಿಕಾರಿ ಆರ್. ಕಿಶೋರ್ ಮಾತನಾಡಿ, ವಿಪತ್ತು ವೇಳೆ ಸ್ಥಳೀಯರಿಗೆ ರಕ್ಷಣೆ ಮಾಡುವ ಬಗ್ಗೆ ಅರಿವು ಇದ್ದರೆ ರಕ್ಷಣೆ ಸುಲಭ ಸಾಧ್ಯ. ಇದಕ್ಕಾಗಿ ಧರ್ಮಸ್ಥಳ ಟ್ರಸ್ಟ್ ಎಲ್ಲಾ ರೀತಿ ಅನುಕೂಲವಾಗಲು ತರಬೇತಿ ಕಾರ್ಯಾಗಾರ ಹಮ್ಮಿಕೊಂಡಿದೆ ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜನಜಾಗೃತಿ ವೇದಿಕೆ ಸದಸ್ಯ ಮಂಜುನಾಥ್, ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಸ್ಥಳೀಯರಿಗೆ ಅಪದ್ಭಾಂಧವರಾಗಿ ಕೆಲಸ ಮಾಡುತ್ತಾರೆ. ಕಳೆದ ಕೆಲವು ವರ್ಷಗಳಿಂದ ಸಮಾಜದಲ್ಲಿ ಸಂಭವಿಸಿದ ಅವಘಡದಲ್ಲಿ ಶೌರ್ಯ ತಂಡ ಕೆಲಸ ಮಾಡಿರುವುದು ಹೆಮ್ಮೆ ಯ ಸಂಗತಿ ಎಂದರು.ಇದೇ ವೇಳೆ ಕಾರ್ಯಾಗಾರದಲ್ಲಿ ಸ್ವಯಂ ಸೇವಕರಿಗೆ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡಲಾಯಿತು. ಸಣ್ಣ ಮತ್ತು ದೊಡ್ಡಮಟ್ಟದಲ್ಲಿ ಅವಘಡ ಸಂಭವಿಸಿದರೆ ಯಾವ ಕ್ರಮ ಕೈಗೊಳ್ಳಬಹುದು ಎಂಬುದನ್ನು ಪ್ರಾತ್ಯಕ್ಷತೆ ಮೂಲಕ ತಿಳಿಸಲಾಯಿತು. ಈ ಸಂದರ್ಭದಲ್ಲಿ ತಹಸೀಲ್ದಾರ್ (ಗ್ರೇಡ್‌- 2) ರಾಮರಾವ್ ದೇಸಾಯಿ, ಜಿಲ್ಲಾ ವಿಪತ್ತು ಕೋಶದ ಅಧಿಕಾರಿ ದೀಕ್ಷಿತ್, ಎಐಟಿ ಕಾಲೇಜು ಉಪನ್ಯಾಸಕ ಶೇಖರ್, ಪ್ರಾದೇಶಿಕ ಜನಜಾಗೃತಿ ಯೋಜನಾಧಿಕಾರಿ ನಾಗರಾಜ್ ಕುಲಾಲ್, ತಾಲೂಕು ಯೋಜನಾಧಿಕಾರಿ ಕೊರಗಪ್ಪ ಪೂಜಾರಿ, ರಮೇಶ್, ಮೇಲ್ವಿಚಾರಕ ಚಂದನ್, ರುದ್ರಪ್ಪ, ಸಂಯೋಜಕ ಹಾಗೂ ಸ್ವಯಂ ಸೇವಕರು ಉಪಸ್ಥಿತರಿದ್ದರು.

29 ಕೆಸಿಕೆಎಂ 2ಚಿಕ್ಕಮಗಳೂರಿನ ಅಗ್ನಿಶಾಮಕ ಇಲಾಖೆ ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ ಶೌರ್ಯ ವಿಪತ್ತು ಸ್ವಯಂ ಸೇವಕರಿಗೆ ಜೀವ ರಕ್ಷಣಾ ಕೌಶಲ್ಯ ತರಬೇತಿ ಕಾರ್ಯಾಗಾರವನ್ನು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪ್ರವೀಣ್ ಉದ್ಘಾಟಿಸಿದರು. ರಾಮರಾವ್‌ ದೇಸಾಯಿ, ದೀಕ್ಷಿತ್‌ ಇದ್ದರು.

Share this article