ಕನ್ನಡಪ್ರಭ ವಾರ್ತೆ ಅರಸೀಕೆರೆ
ಬಾಣಾವರದಿಂದ ಕಡೂರು ಮಾರ್ಗವಾಗಿ ಬೆಂಗಳೂರು ಹಾಗೂ ಮೈಸೂರಿಗೆ ತಲುಪುವಂತಹ ಪ್ರಯಾಣಿಕರು ಬಾಣಾವರ ಮಾರ್ಗವಾಗಿ ಕಡೂರು ಮೂಲಕ ಬೇರೆ ನಗರಗಳಿಗೆ ಸ್ಥಳಗಳಿಗೆ ಬೇರೆ ಕಡೆಗೆ ತರಳಬೇಕಾದ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಬಸ್‌ಗಳಿಗಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಹಲವಾರು ಬಸ್ಸುಗಳು ಹೈವೇ ಮೂಲಕವೇ ಸಂಚರಿಸುತ್ತಿರುವುದರಿಂದ ನಗರದ ಒಳಭಾಗದಲ್ಲಿ ಬಸ್ಸುಗಳು ಬಾರದೆ ಹೈವೇಗಳ ಮೂಲಕವೇ ಹೋಗುತ್ತಿದ್ದು, ಬಸ್ ನಿಲ್ದಾಣದ ಸಮೀಪ ಬಸ್ಸಿಗಾಗಿ ಕಾಯುವ ಪ್ರಯಾಣಿಕರು ಬಸ್ಸಿಗಾಗಿ ಕಾದು ಕಾದು ಕಷ್ಟಪಡುವಂತಾಗಿದೆ.
ಬಾಣಾವರ ನಗರವು ಹಲವಾರು ಗ್ರಾಮಗಳಿಗೆ ಸಂಪರ್ಕವನ್ನು ಕಲ್ಪಿಸುವ ಮುಖ್ಯ ಕೇಂದ್ರವಾಗಿದ್ದು, ಬಾಣಾವರ ಸೇರಿದಂತೆ ಅಕ್ಕಪಕ್ಕದ ನೂರಾರು ಗ್ರಾಮದ ನಾಗರಿಕರು ಬೇರೆಡೆಗೆ ಪ್ರಯಾಣಿಸಲು ಬಾಣವರದಿಂದಲೇ ಬಸ್ಸುಗಳಿಗಾಗಿ ಅವಲಂಬಿತರಾಗಿದ್ದು, ಬಾಣಾವರದಿಂದಲೇ ಬಸ್ಸುಗಳನ್ನು ಹತ್ತಿ ಹೋಗುವ ಹಲವಾರು ಬಸ್ ಚಾಲಕರು ಮಾಡುತ್ತಿರುವ ಈ ಎಡವಟ್ಟಿನಿಂದ ಸಮಸ್ಯೆ ಎದುರಾಗುತ್ತಿದೆ. ಅದರಲ್ಲೂ ರಾತ್ರಿಯ ಸಂದರ್ಭದಲ್ಲಿ ಅರಸೀಕೆರೆಯಿಂದ ರೈಲು ಮಾರ್ಗವಾಗಿ ಬೇರೆ ಕಡೆ ಹೋಗುವಂತಹ ಪ್ರಯಾಣಿಕರಿಗೆ ತೀವ್ರ ಸ್ವರೂಪದ ತೊಂದರೆ ಎದುರಾಗುತ್ತಿದೆ. ಅಷ್ಟು ಮಾತ್ರವಲ್ಲದೆ ಕೆಲವೊಮ್ಮೆ ಒಂದೆರಡು ಪ್ರಯಾಣಿಕರು ಏನಾದರೂ ಈ ಬಸ್ಸುಗಳಲ್ಲಿ ಸಂಚರಿಸಿದರೇ ಅವರನ್ನು ಹೈವೇ ಸಮೀಪವೇ ಇಳಿಸಿ ಹೋದಂತಹ ಹಲವಾರು ಘಟನೆಗಳು ಸಹ ಹೀಗೆ ಕೆಲವು ದಿನಗಳಿಂದ ನಡೆಯುತ್ತಿವೆ.ಹೈವೆಯಿಂದ ಬಸ್ ನಿಲ್ದಾಣ ದೂರವಿದ್ದು ಹಲವಾರು ಪ್ರಯಾಣಿಕರು ಅಲ್ಲಿಂದ ಇಲ್ಲಿಗೆ ಬರಲು ಯಾವುದೇ ವಾಹನದ ಸೌಲಭ್ಯವಿಲ್ಲದೆ ತಮ್ಮ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ರಾತ್ರಿ ವೇಳೆಯಲ್ಲಿ ಬಂದು ಬಾಣಾವರವನ್ನು ತಲುಪುವಂತಹ ದುಸ್ಥಿತಿ ನಿರ್ಮಾಣವಾಗಿದ್ದು, ಪ್ರಯಾಣಿಕರು ರಾಜ್ಯ ಸಾರಿಗೆ ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ.