ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಾಂಡವಪುರ ಉಪವಿಭಾಗ ಅಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ್, ಟಿಎಪಿಸಿಎಂಎಸ್ ನಿರ್ದೇಶಕ ಎಚ್.ಟಿ ಲೋಕೇಶ್ ಬ್ರಹ್ಮರಥೋತ್ಸವ ಪೂಜಾ ಕಾರ್ಯಕ್ಕೆ ಚಾಲನೆ ನೀಡಿದರು.
ರಥೋತ್ಸವದ ಹಿನ್ನೆಲೆ ಗ್ರಾಮದ ಶ್ರೀಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಪ್ರಧಾನ ಆರ್ಚಕ ಶ್ರೀಧರ್ ನೇತೃತ್ವದಲ್ಲಿ ಮುಂಜಾನೆಯಿಂದ ಮಂತ್ರ ಪಠಿಸುವ ಮೂಲಕ ವಿಶೇಷ ಪೂಜೆಗಳು ನಡೆದವು.ರಥಕ್ಕೆ ವಿವಿಧ ಪುಷ್ಪಗಳಿಂದ ಹಾಗೂ ಕೇಸರಿ ಸೇರಿದಂತೆ ಹಲವು ಬಗೆಯ ಬಣ್ಣ ಬಣ್ಣಗಳ ಬಾವುಟಗಳಿಂದ ಅಲಂಕಾರಗೊಂಡ ರಥ ಮೇಲೆ ಶ್ರೀಲಕ್ಷ್ಮಿ ನರಸಿಂಹಸ್ವಾಮಿ ದೇವರ ಉತ್ಸವ ಮೂರ್ತಿಗಳನ್ನು ರಥದ ಮೇಲೆ ಇರಿಸಿ ಆಕಾಶದಲ್ಲಿ ಗರುಡ ಪಕ್ಷಿಗಳು ಪ್ರದಕ್ಷಣೆ ಹಾಕಿ ಶುಭ ಸೂಚನೆಯ ನಂತರ ಶುಭಗಳಿಗೆಯಲ್ಲಿ ಗಣ್ಯರು ಹಾಗೂ ಭಕ್ತಾದಿಗಳು ರಥಕ್ಕೆ ಪೂಜೆ ಸಲ್ಲಿಸಿದರು.
ನೆರೆದಿದ್ದ ಭಕ್ತ ಸಮೂಹ ಉಘೇ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ಜೈಕಾರದೊಂದಿಗೆ ರಥ ಎಳೆದು ಭಕ್ತಿ ಸಮರ್ಪಣೆ ಮಾಡಿದರು. ನವ ದಂಪತಿಗಳು ಸೇರಿದಂತೆ ಆಗಮಿಸಿದ ಭಕ್ತರು ಹಣ್ಣು ಜವನ ಎಸೆದು ತಮ್ಮ ಇಷ್ಟಾರ್ಥ ಈಡೇರಿಸುವಂತೆ ಪ್ರಾರ್ಥಿಸಿಕೊಂಡರು. ರಥೋತ್ಸವ ಆಗಮಿಸಿದ 5 ಸಾವಿರಕ್ಕೂ ಹೆಚ್ಚು ಭಕ್ತಾದಿಗಳಿಗೆ ತಾಂಡವೇಶ್ವರ ಕುಟುಂಬಸ್ಥರಿಂದ ಅನ್ನ ಸಂತರ್ಪಣೆ ಗ್ರಾಮದ ಹೇಮಾವತಿ ಹೊನ್ನಾರು ವೇದಿಕೆಯಿಂದ ಯಶಸ್ವಿಯಾಗಿ ನಡೆಯಿತು.ಪ್ರತಿ ವರ್ಷ ರಥಸಪ್ತಮಿಯಾದ ಒಂದು ವಾರದ ನಂತರ ನಡೆಯುವ ರಥೋತ್ಸವದ ವಿಶೇಷವೆಂದರೆ ಆಕಾಶದಲ್ಲಿ ಗರುಡ ಪಕ್ಷಿಗಳು ರಥದ ಮೇಲ್ಬಾಗದಲ್ಲಿ 60 ಅಡಿ ಅಂತರದಲ್ಲಿ ಪ್ರದಕ್ಷಿಣೆ ಹಾಕಿದ ನಂತರ ರಥೋತ್ಸವವನ್ನು ಮುನ್ನಡೆಸುವ ಪದ್ಧತಿ. ಈ ದೃಶ್ಯ ವೈಜ್ಞಾನಿಕ ಲೋಕಕ್ಕೆ ಸವಾಲೆಸೆಯುವಂತಾಗಿದೆ ಎಂಬ ಭಾವ ಪ್ರತಿಯೊಬ್ಬ ಪ್ರತ್ಯಕ್ಷದರ್ಶಿ ಭಕ್ತಾದಿಗಳಲ್ಲಿ ಮೂಡಿ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವರ ಮಹಿಮೆಯನ್ನು ಭಕ್ತಸಾಗರ ಕಣ್ತುಂಬಿಕೊಂಡರು.
ರಥೋತ್ಸವದಲ್ಲಿ ಮೈಷುಗರ್ ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್, ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರ ಕುಮಾರ್, ದಿಶಾ ಕಮಿಟಿ ಸದಸ್ಯ ನರಸನಾಯ್ಕ, ಜೆಡಿಎಸ್ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಅಕ್ಕಿಹೆಬ್ಬಾಳು ರಘು, ಮನ್ಮುಲ್ ಹಾಲಿ ನಿರ್ದೇಶಕ ಎಂ.ಬಿ.ಹರೀಶ್, ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ರಾಜನಾಯ್ಕ, ಟಿಎಪಿಸಿಎಂಎಸ್ ನಿರ್ದೇಶಕ ಬೊಮ್ಮನಹಳ್ಳಿ ಮಂಜುನಾಥ್, ಗ್ರಾಮದ ಹಿರಿಯ ಮುಖಂಡರಾದ ಎ.ಸಿ.ಮಂಜೇಗೌಡ, ನಾರಾಯಣಸ್ವಾಮಿ ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.