ಮಲೆನಾಡಿನ ಆತಿಥ್ಯ ಸದಾ ಮೆಲುಕು ಹಾಕುವಂಥದ್ದು

KannadaprabhaNewsNetwork | Published : May 21, 2025 2:16 AM
ಶಿವಮೊಗ್ಗ: ಮಲೆನಾಡು ರಾಜ್ಯದಲ್ಲಿಯೇ ಆತಿಥ್ಯಕ್ಕೆ ಹೆಸರುವಾಸಿಯಾಗಿದ್ದು, ಇಲ್ಲಿನ ಕ್ರೀಡಾಕೂಟಕ್ಕೆ ರಾಜ್ಯದ ಮೂಲೆಮೂಲೆಗಳಿಂದ ಆಗಮಿಸಿರುವ ನೌಕರ ಕ್ರೀಡಾಪಟುಗಳು ಶಿವಮೊಗ್ಗದಲ್ಲಿ ಕಳೆದ ಅಲ್ಪ ಸಮಯ, ಇಲ್ಲಿನ ಆತಿಥ್ಯವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡಿದೆ ಎಂದು ಮಾಜಿ ಸಂಸದ ಆಯನೂರು ಮಂಜುನಾಥ್‌ ಹೇಳಿದರು.
Follow Us

ಶಿವಮೊಗ್ಗ: ಮಲೆನಾಡು ರಾಜ್ಯದಲ್ಲಿಯೇ ಆತಿಥ್ಯಕ್ಕೆ ಹೆಸರುವಾಸಿಯಾಗಿದ್ದು, ಇಲ್ಲಿನ ಕ್ರೀಡಾಕೂಟಕ್ಕೆ ರಾಜ್ಯದ ಮೂಲೆಮೂಲೆಗಳಿಂದ ಆಗಮಿಸಿರುವ ನೌಕರ ಕ್ರೀಡಾಪಟುಗಳು ಶಿವಮೊಗ್ಗದಲ್ಲಿ ಕಳೆದ ಅಲ್ಪ ಸಮಯ, ಇಲ್ಲಿನ ಆತಿಥ್ಯವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡಿದೆ ಎಂದು ಮಾಜಿ ಸಂಸದ ಆಯನೂರು ಮಂಜುನಾಥ್‌ ಹೇಳಿದರು.ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ಏರ್ಪಡಿಸಿದ್ದ ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟದ ಸಮಾರೋಪದಲ್ಲಿ ಮಾತನಾಡಿ, ಹಲವು ವೈಶಿಷ್ಟ್ಯಗಳ ತವರಾಗಿರುವ ಶಿವಮೊಗ್ಗ ಜಿಲ್ಲೆಗೆ ದೇಶದಲ್ಲಿಯೇ ವಿಶಿಷ್ಟಸ್ಥಾನವಿದೆ. ಇಲ್ಲಿ ವಿಜೇತರಾಗಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವ ಸ್ಪರ್ಧಿಗಳು ರಾಷ್ಟ್ರಮಟ್ಟದಲ್ಲಿಯೂ ಸ್ಥಾನ ಪಡೆದು, ರಾಜ್ಯಕ್ಕೆ ಕೀರ್ತಿ ತರುವಂತೆ ಆಶಿಸಿದರು.ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್‌ ಮಾತನಾಡಿ, ನೌಕರರು ತಮ್ಮ ಜವಾಬ್ದಾರಿಯರಿತು ಪ್ರಾಮಾಣಿಕವಾಗಿ ನಿರ್ವಹಿಸುವ ಕಾರ್ಯದಿಂದ ಸರ್ಕಾರದ ಗೌರವ ಹೆಚ್ಚಲಿದೆ. ಸರ್ಕಾರದ ಬೆನ್ನೆಲುಬಾಗಿರುವ ನೌಕರರಿಂದಾಗಿಯೇ ಸರ್ಕಾರದ ಜನಪರ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಮಹತ್ವದ ಕಾರ್ಯವೂ ನಡೆಯಲಿದೆ ಎಂದರು.

ನೌಕರರು ತಮ್ಮ ದೈನಂದಿನ ಕೆಲಸಗಳ ಒತ್ತಡದ ಮಧ್ಯೆ ಒಂದಷ್ಟು ಸಮಯ ಸಂತೋಷದಿಂದ ಲವಲವಿಕೆಯಿಂದಿರಲು ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಅಗತ್ಯವಾಗಿವೆ. ದೈಹಿಕ ಮತ್ತು ಮಾನಸಿಕ ವಿಕಾಸಕ್ಕೆ ಕ್ರೀಡೆಗಳು ಸಹಕಾರಿಯಾಗಿವೆ ಎಂದರು.ಕಾರ್ಯಕ್ರಮದಲ್ಲಿ ಕೆ.ಇ.ಕಾಂತೇಶ್, ಯೋಗೀಶ್, ಜಗದೀಶ್, ಗೋಪಿನಾಥ್, ಗುರುಮೂರ್ತಿ, ಆರ್.ಮೋಹನ್‌ಕುಮಾರ್, ರೇಖ್ಯಾನಾಯ್ಕ ಸೇರಿದಂತೆ ಸರ್ಕಾರಿ ನೌಕರರ ಸಂಘದ ವಿವಿಧ ಜಿಲ್ಲೆಗಳ ಜಿಲ್ಲಾಧ್ಯಕ್ಷರು, ಕೇಂದ್ರ ಸಂಘದ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿಪತ್ರ, ಸ್ಮರಣಿಕೆ ಹಾಗೂ ಟ್ರಾಲಿಬ್ಯಾಗ್‌ ನೀಡಿ ಗೌರವಿಸಲಾಯಿತು.

ಕ್ರೀಡಾಳುಗಳಿಗೆ ಏಕರೀತಿಯ ಟ್ರಾಕ್‌ಶೂಟ್‌

ಈ ಹಿಂದೆ ಪ್ರತಿ ಮೂರು ನಾಲ್ಕು ವರ್ಷಗಳಿಗೊಮ್ಮೆ ನಡೆಸಲಾಗುತ್ತಿದ್ದ ರಾಜ್ಯಮಟ್ಟದ ಕ್ರೀಡಾಕೂಟವನ್ನು ಕಳೆದ ಕೆಲವು ವರ್ಷಗಳಿಂದ ಪ್ರತಿವರ್ಷ ನಿರಂತರವಾಗಿ ವ್ಯವಸ್ಥಿತವಾಗಿ ನಡೆಸಿಕೊಂಡು ಬರಲಾಗುತ್ತಿದೆ. ರಾಜ್ಯಮಟ್ಟದ ಕ್ರೀಡೆಯಲ್ಲಿ ವಿಜೇತರಾಗಿ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಕ್ರೀಡಾಳುಗಳಿಗೆ ಏಕರೀತಿಯ ಟ್ರಾಕ್‌ಶೂಟ್‌ ಒದಗಿಸಲಾಗುವುದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ತಿಳಿಸಿದರು. ಪ್ರತಿ ವರ್ಷಕ್ಕಿಂತ ಈ ಬಾರಿಯ ಅದರಲ್ಲೂ ಶಿವಮೊಗ್ಗದಲ್ಲಿ ಆಯೋಜಿಸಲಾಗಿರುವ ಕ್ರೀಡಾಕೂಟ ವಿಶಿಷ್ಟವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ರಚನಾತ್ಮಕವಾಗಿ ಕ್ರೀಡಾಕೂಟವನ್ನು ಆಯೋಜಿಸಲು ವಿಶೇಷ ಗಮನಹರಿಸಲಾಗುವುದು ಎಂದರು.