ಅಂಗನವಾಡಿಗಳಿಂದಲೇ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಚಿಂತನೆ: ಲಕ್ಷ್ಮೀ ಹೆಬ್ಬಾಳ್ಕರ್

KannadaprabhaNewsNetwork |  
Published : May 25, 2025, 01:27 AM IST
ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಶನಿವಾರ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಸಚಿವೆ ಲಕ್ಷ್ಮೀ ಆರ್.ಹೆಬ್ಬಾಳ್ಕರ್ ಉದ್ಘಾಟಿಸಿದರು. ಶಾಸಕ ಎಚ್‌.ಡಿ. ತಮ್ಮಯ್ಯ, ಬಿ.ಎಚ್‌. ಹರೀಶ್‌, ಎಂ.ಸಿ. ಶಿವಾನಂದಸ್ವಾಮಿ ಇದ್ದರು. | Kannada Prabha

ಸಾರಾಂಶ

ಚಿಕ್ಕಮಗಳೂರು,ಅಂಗನವಾಡಿ ಕೇಂದ್ರಗಳಲ್ಲಿ ಮಾಂಟೆಸ್ಸರಿ, ನರ್ಸರಿ, ಎಲ್.ಕೆ.ಜಿ., ಯುಕೆಜಿ ಮಾದರಿ ತರಗತಿಗಳನ್ನು ಈ ವರ್ಷದಿಂದ ತೆರೆದು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಯೋಜನೆಯನ್ನು ಸರ್ಕಾರದಿಂದ ರೂಪಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲ ಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಲಕ್ಷ್ಮೀ ಆರ್.ಹೆಬ್ಬಾಳ್ಕರ್ ಹೇಳಿದರು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಅಂಗನವಾಡಿ ಕೇಂದ್ರಗಳಲ್ಲಿ ಮಾಂಟೆಸ್ಸರಿ, ನರ್ಸರಿ, ಎಲ್.ಕೆ.ಜಿ., ಯುಕೆಜಿ ಮಾದರಿ ತರಗತಿಗಳನ್ನು ಈ ವರ್ಷದಿಂದ ತೆರೆದು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಯೋಜನೆಯನ್ನು ಸರ್ಕಾರದಿಂದ ರೂಪಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲ ಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಲಕ್ಷ್ಮೀ ಆರ್.ಹೆಬ್ಬಾಳ್ಕರ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಹಾಗೂ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಅಂಗನವಾಡಿ ಕೇಂದ್ರಗಳು ಆರಂಭವಾಗಿ 50 ವರ್ಷಗಳು ಕಳೆದಿವೆ. ಈ ಸುವರ್ಣ ಮಹೋತ್ಸವ ನೆನಪಿನಲ್ಲಿ ಜಿಲ್ಲೆಯಲ್ಲಿ ಗುರುತಿ ಸಲಾಗಿರುವ 130 ಅಂಗನವಾಡಿ ಕೇಂದ್ರಗಳನ್ನು ಈ ಯೋಜನೆಗೆ ಗುರುತಿಸಲಾಗಿದೆ ಎಂದು ಹೇಳಿದರು.ನಮ್ಮ ಸರ್ಕಾರ ಇರುವುದೇ ಜನರ ಅಭಿವೃದ್ಧಿಗಾಗಿ, ಮಹಿಳೆಯರನ್ನು ಯಜಮಾನಿ ಎಂದು ಗುರುತಿಸಿದ್ದು ನಮ್ಮ ಸರ್ಕಾರ. ಮಹಿಳೆಯರನ್ನು ಸ್ವಾಭಿಮಾನಿಗಳನ್ನಾಗಿ ಮಾಡಲು ನಮ್ಮ ಸರ್ಕಾರ ಗೃಹಲಕ್ಷ್ಮೀ ಯೋಜನೆ ಜಾರಿ ಮಾಡಿತು. ನಮ್ಮ ಸರ್ಕಾರ ಯಾವುದೇ ಮಧ್ಯವರ್ತಿಗಳ ಪ್ರವೇಶಕ್ಕೆ ಅವಕಾಶವಿಲ್ಲದೆ ಸರ್ಕಾರದ ಹಣವನ್ನು ಅವರ ಖಾತೆಗೆ ನೇರವಾಗಿ ಜಮೆ ಮಾಡುತ್ತಿದೆ ಎಂದು ಹೇಳಿದರು. ಇಡೀ ರಾಜ್ಯಕ್ಕೆ ಅನುಕೂಲವಾಗುವಂತೆ ನಮ್ಮ ಸರ್ಕಾರ ಮಾದರಿ ಯೋಜನೆ ರೂಪಿಸಿದ್ದು, ಚಿಕ್ಕಮಗಳೂರು ಜಿಲ್ಲೆ ಗ್ಯಾರಂಟಿ ಯೋಜನೆಗಳ ಅನುಷ್ಟಾನದ ವಿಚಾರದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದೆ. ಇಡೀ ರಾಜ್ಯದಲ್ಲಿ ಈ ಯೋಜನೆಗೆ ಸಂಬಂಧಿಸಿ ದಂತೆ ಮೂರು ಜಿಲ್ಲೆಗಳು ಅತ್ಯಂತ ಚುರುಕಾಗಿ ಕೆಲಸ ಮಾಡುತ್ತಿವೆ. ಅದರಲ್ಲಿ ಚಿಕ್ಕಮಗಳೂರು ಸೇರಿದೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳ ಜೊತೆಗೆ ಭೂ ಗ್ಯಾರಂಟಿ ಯೋಜನೆಯನ್ನು ಘೋಷಿಸಿದೆ. ದಶಕಗಳಿಂದ ಕಂದಾಯ ವ್ಯಾಪ್ತಿಗೆ ಬಾರದ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ ಅದರಲ್ಲಿನ ಕುಟುಂಬಗಳಿಗೆ "ಉಳುವವನೇ ಭೂಮಿ ಒಡೆಯ ಮಾದರಿಯಲ್ಲಿ "ವಾಸಿಸುವವನೇ ಮನೆಯ ಒಡೆಯ’ ಎಂದು ಹಕ್ಕುಪತ್ರ ವಿತರಿಸುವುದು ಈ ಯೋಜನೆ ಉದ್ದೇಶ ಎಂದು ಹೇಳಿದರು.ಕರ್ನಾಟಕದ ಭೂಮಿ ಹಕ್ಕುಪತ್ರ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಮಹತ್ವದ ಯೋಜನೆ ಇದಾಗಿದ್ದು, ಇದರಿಂದ ಲಕ್ಷಾಂತರ ಜನರಿಗೆ ತಮ್ಮ ಭೂಮಿಯ ಅಧಿಕೃತ ಮಾಲೀಕತ್ವ ಸಿಗಲಿದೆ. ಹಕ್ಕುಪತ್ರ ಕರ್ನಾಟಕ ಸರ್ಕಾರ ಗ್ರಾಮೀಣ ಪ್ರದೇಶ ಗಳಲ್ಲಿ ವಾಸಿಸುವ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ನೀಡುವ ಆಸ್ತಿಗಳ ಸ್ವಾಮ್ಯದ ಪತ್ರವಾಗಿದೆ. ಸರಕಾರದ ಸ್ವಾಧೀನ ದಲ್ಲಿರುವ ಅದರೆ ಬಡವರಿಗೆ ಒದಗಿಸಿದ ಮನೆಗಳಿಗೆ ಇಂತಹ ಪತ್ರವನ್ನು ಸರ್ಕಾರ ನೀಡುತ್ತದೆ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಗ್ಯಾರಂಟಿ ಯೋಜನೆ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ಐದು ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದು ಜನರ ಅಭಿವೃದ್ಧಿಗೆ ಸಹಕಾರಿಯಾಗಿದೆ. ನಮ್ಮ ಸರ್ಕಾರದ ಗುರಿ ನಮ್ಮ ದೇಶದ ಅಭಿವೃದ್ಧಿ ಜೊತೆಗೆ ಜನರನ್ನು ಅಭಿವೃದ್ದಿಪಡಿಸುವ ಕೆಲಸ ನಾವು ಮಾಡಲು ಮುಂದಾಗಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಮೂಡಿಗೆರೆ ಶಾಸಕರಾದ ನಯನಾ ಮೋಟಮ್ಮ, ಟಿ.ಡಿ.ರಾಜೇಗೌಡ,ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಪಂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಎಚ್.ಎಸ್.ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ, ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷ ಬಿ.ಎಚ್.ಹರೀಶ್, ತಾಲೂಕು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಮಲ್ಲೇಶಸ್ವಾಮಿ, ತಾಲೂಕು ತಹಸೀಲ್ದಾರ್ ರೇಷ್ಮಾ ಉಪಸ್ಥಿತರಿದ್ದರು.

24 ಕೆಸಿಕೆಎಂ 6ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಶನಿವಾರ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಸಚಿವೆ ಲಕ್ಷ್ಮೀ ಆರ್.ಹೆಬ್ಬಾಳ್ಕರ್ ಉದ್ಘಾಟಿಸಿದರು. ಶಾಸಕ ಎಚ್‌.ಡಿ. ತಮ್ಮಯ್ಯ, ಬಿ.ಎಚ್‌. ಹರೀಶ್‌, ಎಂ.ಸಿ. ಶಿವಾನಂದಸ್ವಾಮಿ ಇದ್ದರು.

PREV