ಅಖಿಲ ಭಾರತ ಕವಿ ಸಮ್ಮೇಳನ ಕಾರ್ಯಕ್ರಮ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಕೊಪ್ಪಳ
ನೀವು ಇನ್ನೊಬ್ಬರಿಗೆ ಆಕರ್ಷಣೆಯಾಗಬೇಡಿ, ಬದಲಿಗೆ ಆದರ್ಶವಾಗಿ, ಏಕೆಂದರೆ ಆಕರ್ಷಣೆ ಬೇಗ ಅಳಿಯುತ್ತದೆ, ಆದರೆ ಆದರ್ಶ ಇತಿಹಾಸ ಉದ್ದಕ್ಕೂ ಉಳಿಯುತ್ತದೆ ಎಂದು ಬಸವಕಲ್ಯಾಣದ ಉದ್ಯಮಿ ಹಾಗೂ ಇಸ್ಲಾಮಿಯಾ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್‌ನ ಚೇರ್ ಮನ್ ಅಬ್ದುಲ್ ರಜಾಕ್ ಬಾಬಾ ಚೌಧರಿ ಹೇಳಿದರು.ನಗರದ ಸಾಹಿತ್ಯ ಭವನದಲ್ಲಿ ಫಿರ್‌ದೋಸ್ ಸಾಂಸ್ಕೃತಿಕ ಕ್ರೀಡಾ ಹಾಗೂ ತರಬೇತಿ ಸಂಸ್ಥೆ ಹಾಗೂ ಕರ್ನಾಟಕ ಉರ್ದು ಅಕಾಡೆಮಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಅಖಿಲ ಭಾರತ ಕವಿ ಸಮ್ಮೇಳನ ಹಾಗೂ ಮುಷಾಯಿರಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಪರಸ್ಪರ ರಾಷ್ಟ್ರೀಯ ಭಾವೈಕ್ಯತೆ ಸೌಹಾರ್ದತೆ ಬೆಳೆಸಿಕೊಂಡು ಜೀವನ ಸಾಗಿಸಬೇಕು. ಅಂದಾಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದರು. ಕವಿತೆಗಳಲ್ಲಿ ಒಳ್ಳೆಯ ಸಂಸ್ಕಾರ ಅಡಗಿರುತ್ತದೆ. ಕವಿಗಳು ವಾಚನ ಮಾಡುವ ಕವಿತೆಗಳಲ್ಲಿ ಅಪಾರವಾದ ಶಕ್ತಿ ಇರುತ್ತದೆ. ಸಮಾಜ ತಿದ್ದುವ ಶಕ್ತಿ ಕೂಡ ಅದರಲ್ಲಿ ಅಡಗಿದೆ ಎಂದರು.ಸಮಾರಂಭದ ಸಾನಿಧ್ಯ ವಹಿಸಿದ್ದ ಶ್ರೀರಾಮಕೃಷ್ಣ ಸ್ವಾಮಿ ವಿವೇಕಾನಂದ ಆಶ್ರಮದ ಪೀಠಾಧಿಪತಿ ಚೈತನ್ಯಾನಂದ ಸ್ವಾಮೀಜಿ ಮಾತನಾಡಿ, ಪರಸ್ಪರ ಅರ್ಥೈಸಿಕೊಳ್ಳುವುದೇ ಭಾಷೆ. ಉರ್ದು ಭಾಷೆ ಕೂಡ ಅತ್ಯಂತ ಸೊಗಸಾದ ಭಾಷೆ. ನಮ್ಮ ಭಾರತೀಯ ಭಾಷೆ ಇದರಲ್ಲಿ ಕೂಡ ಉತ್ತಮ ಸಂಸ್ಕಾರ ಅಡಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಉರ್ದು ಅಕಾಡೆಮಿಯ ಅಧ್ಯಕ್ಷ ಮುಫ್ತಿ ಮೊಹಮ್ಮದ್ ಅಲಿ ಖಾಜಿ ಮಾತನಾಡಿ, ನಮ್ಮ ದೇಶದಲ್ಲಿಯೇ ಹುಟ್ಟಿ ಬೆಳೆದ ಉರ್ದು ಭಾಷೆ ಯಾವುದೇ ಒಂದು ಜನಾಂಗಕ್ಕೆ ಸೀಮಿತವಾದುದ್ದಲ್ಲ. ಇದು ಎಲ್ಲ ಭಾರತೀಯರ ಭಾಷೆಯಾಗಿದೆ. ಇಡೀ ವಿಶ್ವದಲ್ಲಿ ಎರಡನೇ ಅತ್ಯಂತ ಅತಿ ದೊಡ್ಡ ಭಾಷೆ ಮತ್ತು ಹೆಚ್ಚಿನ ಬಳಕೆಯಲ್ಲಿರುವ ಭಾಷೆಯಾಗಿದೆ ಎಂದರು.ಮುಸ್ಲಿಂ ಧರ್ಮ ಗುರುಗಳಾದ ಮೌಲಾನ ಮುಫ್ತಿ ಮೊಹಮ್ಮದ್ ನಜೀರ್ ಅಹಮದ್ ಖಾದ್ರಿ ತಸ್ಕಿನಿ ಮತ್ತು ಮೌಲಾನ ಮುಸ್ತಫಾ ಕಮಾ ಲ್ ಪಾಶಾ ಖಾದ್ರಿ ತಸ್ಕಿನಿ ಮಾತನಾಡಿದರು.
ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್, ಸೈಯದ್ ಫೌಂಡೇಶನ್ ಅಧ್ಯಕ್ಷ ಕೆ.ಎಂ. ಸಯ್ಯದ್, ನಗರ ಕಾಂಗ್ರೆಸ್ ಅಧ್ಯಕ್ಷ ಎಂ. ಪಾಷಾ ಕಾಟನ್, ಸಲೀಂ ಅಲವಂಡಿ ಉರ್ದು ಅಕಾಡೆಮಿಯ ಸದಸ್ಯ ಶಾಹಿದ್ ಖಾಜಿ, ಉದ್ಯಮಿ ಆರ್.ಎನ್. ಡೆವಲಪರ್ಸ್‌ನ ಪ್ರೊಪರೇಟರ್ ರಫೀಕ್ ಅಗಡಿ, ಕೊಪ್ಪಳದ ಉಮೀದ್ ಅರ್ಥ ಮೂವರ್ಸ್ ಪ್ರೊಪರೇಟರ್ ಜಾಕೀರ್ ಹುಸೇನ್ ಖಾನ್, ಕುಷ್ಟಗಿ ರಾಬ್ತಾ ಮಿಲ್ಲತ್ ಜಿಲ್ಲಾಧ್ಯಕ್ಷ ಎಂ. ಲಾಯಕ್ ಅಲಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.ರಾಷ್ಟ್ರೀಯ ಹಿಂದಿ ಮತ್ತು ಉರ್ದು ಕವಿಗಳು ಪಾಲ್ಗೊಂಡು ತಮ್ಮ ಕವನ ವಾಚನ ಮಾಡಿದರು. ಬದಿಯುದ್ದೀನ್ ಅಹಮದ್ ನವೀದ್ ನಿರೂಪಿಸಿದರು. ಮೌಲಾನ ಮೊಹಮ್ಮದ್ ಅಲಿ ಹಿಮಾಯಿತಿ ಕುರಾನ್ ಪಠಣ ಮಾಡಿದರು. ರಾಯಚೂರಿನ ಡಾ. ಶಕೀಲ್ ಕಾರ್ಯಕ್ರಮ ನಿರೂಪಿಸಿ, ಏಜಾಜ್ ಅಹಮದ್ ವಂದಿಸಿದರು.