ಕನ್ನಡಪ್ರಭ ವಾರ್ತೆ ಭದ್ರಾವತಿ
ಮಹಿಳೆಯರು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು. ಇಲ್ಲಿನ ವಿಐಎಸ್‌ಎಲ್ ಕಾರ್ಖಾನೆ ಸಮಸ್ಯೆ ಸೇರಿ ಅನೇಕ ಸಮಸ್ಯೆಗಳು ಗಾಢವಾಗಿ ಬೇರೂರಿ ನಿಂತಿವೆ. ಈ ಎಲ್ಲಾ ಸಮಸ್ಯೆಗಳಿಗೆ ಕೇಂದ್ರದ ಹಂತದಲ್ಲಿ ಪರಿಹಾರ ಒದಗಿಸಲು ಮತ ನೀಡಿ ಅವಕಾಶ ಕಲ್ಪಿಸಿಕೊಡಿ ಎಂದು ಶಿವಮೊಗ್ಗ ಲೋಕಸಭಾ ಅಭ್ಯರ್ಥಿ ಗೀತಾ ಕೋರಿದರು.ನಗರಸಭೆ ವ್ಯಾಪ್ತಿಯ ಕೆಲವು ಭಾಗಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಅವರು ಭರ್ಜರಿ ಚುನಾವಣಾ ಪ್ರಚಾರ ನಡೆಸಿದರು.
ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಈ ಬಾರಿ ಚುನಾವಣೆಯಲ್ಲಿ ಗೀತಾ ಅವರಿಗೆ ಬೆಂಬಲಿಸಿ ಎಂದು ಘೋಷಣೆ ಹಾಕಿದರು. ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಗೀತಾ ಅವರನ್ನು ಆಯಾ ಭಾಗದ ಮುಖಂಡರು, ನಿವಾಸಿಗಳು ಪಟಾಕಿ ಸಿಡಿಸಿ, ಆರತಿ ಬೆಳಗಿ ಬೃಹತ್ ಪುಷ್ಪಮಾಲೆಗಳೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಿದರು.ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆಯಿಂದ ಆರಂಭಗೊಂಡ ಪ್ರಚಾರ ಕಾರ್ಯ ಉಜ್ಜನಿಪುರ, ಕಾಗದನಗರ, ಕೂಲಿ ಬ್ಲಾಕ್ ಶೆಡ್, ಮೇಲೂರ್ ಶೆಡ್, ಉಜ್ಜನಿಪುರ, ಸುರಗಿತೋಪು, ಆಂಜನೇಯ ಅಗ್ರಹಾರ, ಜಿಂಕ್‌ಲೈನ್ ಸೇರಿ ಹಲವು ಭಾಗಗಳಲ್ಲಿ ನಡೆಯಿತು.
ಶಾಸಕ ಬಿ.ಕೆ ಸಂಗಮೇಶ್ ಮಾತನಾಡಿ, ಜಿಲ್ಲೆಯ ಸರ್ವೋತೋಮುಖ ಏಳಿಗೆಗೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ರವರಿಗೆ ಮತ ನೀಡಿ ಎಂದು ಮನವಿ ಮಾಡಿದರು.ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಬಲ್ಮೀಷ್ ಬಾನು ಮಾತನಾಡಿ, ಇಲ್ಲಿನ ಸ್ಥಳೀಯ ಸಮಸ್ಯೆ ಪರಿಹರಿಸಲು ಶಾಸಕ ಸಂಗಮೇಶ್ವರ್ ಅವರ ಕೈ ಬಲಪಡಿಸಿ, ಕ್ಷೇತ್ರವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯಲು ಗೀತಾ ರವರಿಗೆ ಮತ ನೀಡಿ ಆಶೀರ್ವದಿಸಬೇಕೆಂದರು.
ಲೋಕಸಭೆ ಚುನಾವಣೆ ಜಿಲ್ಲಾ ಉಸ್ತುವಾರಿ ಅನಿಲ್ ಕುಮಾರ್ ತಡಕಲ್, ನಟ ಶಿವರಾಜ್‌ಕುಮಾರ್, ಮುಖಂಡರಾದ ಬಿ.ಕೆ ಮೋಹನ್, ಎಸ್. ಕುಮಾರ್, ಎಚ್.ಎಲ್ ಷಡಾಕ್ಷರಿ, ಬಿ.ಎಸ್ ಗಣೇಶ್, ಎಚ್. ರವಿಕುಮಾರ್, ಅರುಣ್‌ಕುಮಾರ್, ರಮೇಶ್ ಶಂಕರಘಟ್ಟ ಸೇರಿ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು.