- ಬಿಜೆಪಿ ಪಾಲಿಗೆ ದಾವಣಗೆರೆ ಅದೃಷ್ಟ ತಾಣವಲ್ಲ: ಡಿ.ಬಸವರಾಜ ಹೇಳಿಕೆ
- - - ಕನ್ನಡಪ್ರಭ ವಾರ್ತೆ, ದಾವಣಗೆರೆ ರಾಜಕೀಯ ಪಕ್ಷಗಳ ಅದೃಷ್ಟದ ನೆಲವಾದ ದಾವಣಗೆರೆ ಬಿಜೆಪಿಗೆ ಮಾತ್ರ ಒಲಿದಿಲ್ಲ ಎಂಬುದಕ್ಕೆ ಇಲ್ಲಿ ನಡೆದ ಬಿಜೆಪಿ ಪ್ರಚಾರ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ತಲೆಗೆ ಹಾಕಿದ್ದ ಅರಳುವ ಕಮಲದ ಟೋಪಿ ಜಾರಿ ಬಿದ್ದಿರುವುದೇ ಸಾಕ್ಷಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ ಟೀಕಿಸಿದರು.ನಗರದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಕಳೆದ ವಿಧಾನಸಭೆ ಚುನಾವಣೆ ವೇಳೆ ಇಲ್ಲಿ ದೊಡ್ಡ ಸಮಾವೇಶ ಮಾಡಿ, ಸೋತು ಸುಣ್ಣವಾದರು. ನಿನ್ನೆ ಪ್ರಚಾರ ಸಮಾವೇಶದಲ್ಲಿ ಮೋದಿ ತಲೆ ಮೇಲಿದ್ದ ಕಮಲದ ಹೂವಿದ್ದ ಟೋಪಿ ಜಾರಿ ಬಿದ್ದಿದ್ದು, ಬಿಜೆಪಿ ಹಾಗೂ ಮೋದಿ ಕೈಯಿಂದ ಅಧಿಕಾರ ಜಾರಿ ಬೀಳುವ ಕುರುಹು ಆಗಿದೆ ಎಂದರು.
ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ ಸಮಾವೇಶ ಇದಾಗಿರದೇ, ಆರ್‌ಎಸ್‌ಎಸ್ ಭಾರತದ ಸಂವಿಧಾನವನ್ನೇ ಸರ್ವನಾಶ ಮಾಡುವ ಸಂಕಲ್ಪ ಸಮಾವೇಶದ್ದಾಗಿತ್ತು. ಅಂಬಾನಿ, ಅದಾನಿಗೆ ದೇಶ ನಡೆಸಲು ಕೊಟ್ಟು, ವಿದೇಶದಲ್ಲಿ ಸುತ್ತಾಡಿ, ಮೋಜು ಮಸ್ತಿ ಮಾಡುವ ಸಂಕಲ್ಪಕ್ಕೆ ಈ ಸಮಾವೇಶವೆಂದರೂ ಅತಿಶಯೋಕ್ತಿಯಲ್ಲ. ಮಾಂಗಲ್ಯ ಕಿತ್ತುಕೊಳ್ಳುವುದು ಹೇಗೆಂಬುದುನ್ನು ಸ್ವತಃ ಮೋದಿ ತಮ್ಮ ಜೀವನದಲ್ಲೇ ತೋರಿಸಿದ್ದಾರೆ ಎಂದು ಕುಟುಕಿದರು.ಪತ್ನಿ ಇರುವುದನ್ನು ಮುಚ್ಚಿಟ್ಟರೆ ನಾಮಪತ್ರ ತಿರಸ್ಕೃತವಾಗುತ್ತದೆ ಎಂಬುದು ಗೊತ್ತಾಗುತ್ತದೆಂಬ ಕಾರಣಕ್ಕೆ ಮದುವೆ ಆಗಿರುವುದಾಗಿ ಮೋದಿ ಹೇಳಿಕೊಂಡಿದ್ದರು. ಮೋದಿ ಪತ್ನಿಯನ್ನು ಪತ್ತೆ ಮಾಡಿದ್ದು ಚುನಾವಣಾ ಆಯೋಗವಾಗಿದೆ. ಚುನಾವಣೆ ಪ್ರಚಾರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆಬಂದರೆ ನಿಮ್ಮೆಲ್ಲರ ಸಂಪತ್ತು, ದೇಶದ ಮನೆ ಮನೆಗೆ ದಾಳಿ ಮಾಡಿ, ನೀವು ಕೂಡಿಟ್ಟ ಹಣ, ಧನ, ಚಿನ್ನಾಭರಣವಷ್ಟೇ ಅಲ್ಲ, ಹೆಣ್ಣು ಮಕ್ಕಳ ಮಾಂಗಲ್ಯ ಸೂತ್ರವನ್ನೂ ತೆಗೆದುಕೊಳ್ಳುತ್ತದೆಂದು ಕಾಂಗ್ರೆಸ್ ವಿರುದ್ಧ ಮಿತ್ಯಾರೋಪ ಮಾಡುತ್ತಾ, ದೇಶದ ಜನರನ್ನು ದಾರಿ ತಪ್ಪಿಸುವ ಕೆಲಸ ಮೋದಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮುಖಂಡರಾದ ಎಸ್.ಎಂ.ಜಯಪ್ರಕಾಶ, ಕೆ.ಎಂ.ಮಂಜುನಾಥ, ಬಿ.ಎಚ್.ಉದಯಕುಮಾರ, ಬಿ.ಶಿವಕುಮಾರ, ಮುಬಾರಕ್, ಸುರೇಶ, ಡಿ.ಶಿವಕುಮಾರ ಇತರರು ಇದ್ದರು.- - -
ಕೋಟ್ ಕೊಟ್ಟ ಮಾತಿನಂತೆ ಕಾಂಗ್ರೆಸ್ ನಡೆದುಕೊಳ್ಳುತ್ತಿದೆ. ದಾವಣಗೆರೆ ಕ್ಷೇತ್ರದಲ್ಲಿ ಡಾ.ಪ್ರಭಾ ಮಲ್ಲಿಕಾರ್ಜುನ ಭಾರಿ ಮತಗಳ ಅಂತರದಲ್ಲಿ ಜಯ ಸಾಧಿಸುತ್ತಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ರಾಹುಲ್ ಗಾಂಧಿ ಪ್ರಧಾನಿ ಆಗಬೇಕು ಎಂಬುದು ನಮ್ಮ ಮನವಿಯಾಗಿದೆ. ಹಿರಿಯ ಅನುಭವಿ ಮಲ್ಲಿಕಾರ್ಜುನ ಖರ್ಗೆ ಸಹ ಪ್ರಧಾನಿಯಾಗುವ ಸುದೀರ್ಘ ರಾಜಕೀಯ ಅನುಭವಿ ನಾಯಕ - ಡಿ.ಬಸವರಾಜ, ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ- - - -29ಕೆಡಿವಿಜಿ6:
ದಾವಣಗೆರೆಯಲ್ಲಿ ಸೋಮವಾರ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.