ವಿಸಿ ಫಾರ್ಮ್‌ನಲ್ಲಿ ಕೃಷಿ ವಿವಿ ಸ್ಥಾಪಿಸಲು ನಾಲ್ವಡಿಯವರೇ ಪ್ರೇರಣೆ: ಕೃಷಿ ಸಚಿವ ಚಲುವರಾಯಸ್ವಾಮಿ

KannadaprabhaNewsNetwork |  
Published : Jun 07, 2025, 12:00 AM ISTUpdated : Jun 07, 2025, 12:01 AM IST
6ಕೆಎಂಎನ್ ಡಿ29,30 | Kannada Prabha

ಸಾರಾಂಶ

ಹಾಸದ ಸರ್ಕಾರಿ ಕೃಷಿ ಕಾಲೇಜು ಹೊರತುಪಡಿಸಿ ಖಾಸಗಿಯಾಗಿ ಕೃಷಿ ಕಾಲೇಜಿಗೆ ಎಲ್ಲೂ ಒಪ್ಪಿಗೆ ನೀಡಿರಲಿಲ್ಲ. ಆದರೆ, ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅವರು ಆದಿಚುಂಚನಗಿರಿಯಲ್ಲಿ ಕೃಷಿ ಕಾಲೇಜು ಆರಂಭಿಸಲು ಬಹಳ ಆಸಕ್ತಿ ತೋರಿದ್ದರಿಂದಾಗಿ ಪ್ರಥಮ ಬಾರಿಗೆ ಖಾಸಗಿ ಕೃಷಿ ಕಾಲೇಜು ಸ್ಥಾಪಿಸಲು ಒಪ್ಪಿಗೆ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ವಿ.ಸಿ.ಫಾರ್ಮ್‌ನಲ್ಲಿ ಸಂಶೋಧನಾ ಕೇಂದ್ರ ಸ್ಥಾಪಿಸಿದ್ದರು. ಇದರ ಭಾಗವಾಗಿ ಈ ಸ್ಥಳದಲ್ಲಿಯೇ ಸಮಗ್ರ ಕೃಷಿಗೆ ಹೆಚ್ಚು ಅನುಕೂಲವಾಗುತ್ತದೆ ಎಂಬುದನ್ನು ಮನಗಂಡು ಕೃಷಿ ವಿವಿ ಸ್ಥಾಪಿಸಲಾಗುತ್ತಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.ನಗರದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್‌ನಿಂದ ಶುಕ್ರವಾರ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತ್ಯುತ್ಸವ ಹಾಗೂ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಮುಖ್ಯಮಂತ್ರಿಗಳು ಮತ್ತು ವಿಪಕ್ಷದವರು ಸೇರಿದಂತೆ ಎಲ್ಲರನ್ನು ಒಪ್ಪಿಸಿ ಸ್ಥಾಪಿಸಲಾಗುತ್ತಿದೆ. ತಾಲೂಕಿನ ವಿ.ಸಿ.ಫಾರ್ಮ್‌ನಲ್ಲಿ ಕೃಷಿ ವಿವಿ ಸ್ಥಾಪಿಸಲು ನಾಲ್ವಡಿಯವರೇ ಪ್ರೇರಣೆ ಎಂದರು.

ಹಾಸದ ಸರ್ಕಾರಿ ಕೃಷಿ ಕಾಲೇಜು ಹೊರತುಪಡಿಸಿ ಖಾಸಗಿಯಾಗಿ ಕೃಷಿ ಕಾಲೇಜಿಗೆ ಎಲ್ಲೂ ಒಪ್ಪಿಗೆ ನೀಡಿರಲಿಲ್ಲ. ಆದರೆ, ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅವರು ಆದಿಚುಂಚನಗಿರಿಯಲ್ಲಿ ಕೃಷಿ ಕಾಲೇಜು ಆರಂಭಿಸಲು ಬಹಳ ಆಸಕ್ತಿ ತೋರಿದ್ದರಿಂದಾಗಿ ಪ್ರಥಮ ಬಾರಿಗೆ ಆದಿಚುಂಚನಗಿರಿಯಲ್ಲಿ ಖಾಸಗಿ ಕೃಷಿ ಕಾಲೇಜು ಸ್ಥಾಪಿಸಲು ಒಪ್ಪಿಗೆ ನೀಡಲಾಗಿದೆ. ಅದೇ ರೀತಿ ಕನಕಪುರ ತಾಲೂಕಿಗೂ ಒಪ್ಪಿಗೆ ನೀಡಲಾಗಿದೆ ಎಂದರು.

ಸಾಮಾಜಿಕ, ಶೈಕ್ಷಣಿಕ ಮತ್ತ ಆರ್ಥಿಕವಾಗಿ ಉತ್ತಮ ಆಡಳಿತ ನಡೆಸಿದ ಕಾಲವೆಂದರೆ ಅದು ನಾಲ್ವಡಿ ಅವರ ಆಡಳಿತದ ಕಾಲ. ಕೇವಲ 39 ವರ್ಷ ಬದುಕಿದ್ದರೂ ನೂರಾರು ಯೋಜನೆಗಳನ್ನು ತಂದು ಹಳೇ ಮೈಸೂರು, ಬೆಳಗಾವಿ ಭಾಗಗಳಲ್ಲಿ ಆಭಿವೃದ್ಧಿ ಮಾಡಿದ್ದಾರೆ. ಹಳೇ ಮೈಸೂರು ಪ್ರಾಂತ್ಯದಲ್ಲಿ ವಾಸಿಸುತ್ತಿರುವ ನಾವು ಇಂದು ಸುಖವಾಗಿರಲು ನಾಲ್ವಡಿ ಹಾಕಿಕೊಟ್ಟ ಅಡಿಪಾಯ ಎಂದು ಶ್ಲಾಘಿಸಿದರು.

ಐಎಎಸ್, ಐಪಿಎಸ್ ಸೇರಿದಂತೆ ಉನ್ನತ ಹುದ್ದೆ ಅಲಂಕರಿಸಿರುವವರು ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದವರೇ ಹೆಚ್ಚು. ಶೇ.70 ರಷ್ಟು ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದವರೇ ಹೆಚ್ಚು ಸಾಧನೆ ಮಾಡಿದ್ದಾರೆ. ಜಿಲ್ಲೆಯ ಜನ ನನಗೆ ಪ್ರೀತಿ ಹಾಗೂ ಶಕ್ತಿ ತುಂಬಿದ್ದಾರೆ. ಅವರ ಋಣ ತೀರಿಸಲು ಎಂದಿಗೂ ಸಾಧ್ಯವಿಲ್ಲ ಎಂದರು.

ಶಾಕಸ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ರೈತರ ಅಭ್ಯುದಯಕ್ಕಾಗಿ ಕೆ.ಆರ್.ಎಸ್.ಅಣೆಕಟ್ಟೆ ಕಟ್ಟಿಸಿ ಹಲವು ಕಾರ್ಖಾನೆ ಸ್ಥಾಪಿಸಿ ಸಿಹಿ ಬೆಳೆಯಲು ಕಾರಣರಾದರು. ಆದರೆ, ನಾವು ಭೂಮಿಗೆ ರಾಸಾಯನಿಕ ಗೊಬ್ಬರಗಳನ್ನು ಹಾಕಿ ಭೂಮಿ ಫಲವತ್ತತೆ ನಾಶ ಮಾಡುತ್ತಿದ್ದೇವೆ. ಅನ್ನ ಕೊಡುವ ತಾಕತ್ತು ಇರುವ ನಾವು ಆಹಾರದ ಜತೆಗೆ ವಿಷವನ್ನೂ ನೀಡುತ್ತಿದ್ದೇವೆ. ಇನ್ನಾದರೂ ಸಾವಯವ ಬೆಳೆ ಬೆಳೆಯುವ ವಿಧಾನ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಮಾತನಾಡಿ, ಸನ್ಮಾನ ಸ್ವೀಕರಿಸುವರಿಗೆ ಒಂದು ಹುರುಪು ಬರುತ್ತದೆ. ಸಚಿವ ಚಲುವರಾಯಸ್ವಾಮಿ ಅವರು ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಿ. ಅವರ ಬಗ್ಗೆ ಎಲ್ಲರೂ ಒಳ್ಳೆಯ ಮಾತುಗಳನ್ನು ಹಾಡುತ್ತಿರುವುದನ್ನು ನೋಡಿದರೆ ಸಂತಸವಾಗುತ್ತದೆ ಎಂದರು.

ಶಾಸಕ ಅಶ್ವತ್ಥ ನಾರಾಯಣ ಮಾತನಾಡಿ, ಭ್ರಷ್ಟಾಚಾರಕ್ಕೆ ಸಿಂಹಸ್ವಪ್ನವಾಗಿದ್ದ ಸಂತೋಷ್ ಹೆಗ್ಡೆ ಅವರ ಉಪಸ್ಥಿತಿಯನ್ನು ಗೌರವಿಸಿ ಪಕ್ಷಾತೀತವಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದೇನೆ. ನನ್ನ ಸ್ನೇಹಿತ ಚಲುವರಾಯಸ್ವಾಮಿ ಅವರು ಕೃಷಿ ಕ್ಷೇತ್ರಕ್ಕೆ ನೀಡಿರುವ ಕೊಡುಗೆ, ಕೃಷಿ ವಿವಿ ತರಲು ಶ್ರಮಿಸಿದ್ದಕ್ಕೆ ಅಭಿನಂದಿಸುತ್ತಿರುವುದು ಉತ್ತಮ ಕೆಲಸ ಎಂದರು.

ಇದೇ ವೇಳೆ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಹಾಗೂ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅವರು ಬೆಳ್ಳಿ ಕಿರೀಟ ಧಾರಣೆ ಮಾಡಿ ಅಭಿನಂದಿಸಿದರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಆದಿಚುಂಚನಗಿರಿ ಕೊಮ್ಮೇರಹಳ್ಳಿ ಶಾಖಾ ಮಠದ ಪುರುಷುತ್ತಮಾನಂದನಾಥ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಜಿಪಂ ಸಿಇಒ ಕೆ.ಆರ್.ನಂದಿನಿ, ಟ್ರಸ್ಟ್‌ನ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಮುಖಂಡರಾದ ಲಂಕೇಶ್ ಮಂಗಲ, ನಾಗರಾಜು ಇತರರು ಇದ್ದರು.

PREV

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್