ಕನ್ನಡಪ್ರಭ ವಾರ್ತೆ ಹೊಸದುರ್ಗ
ತಾಲೂಕಿನ ಸುಪ್ರಸಿದ್ಧ ಪುಣ್ಯ ಕ್ಷೇತ್ರ ಹಾಲುರಾಮೇಶ್ವರ ಕ್ಷೇತ್ರದಲ್ಲಿ ನಾಗದೇವತೆಯ ನೂತನ ಶಿಲಾಮೂರ್ತಿಯ ಪ್ರಾಣ ಪ್ರತಿಷ್ಠೆ ಹಾಗೂ ಶಿಲಾಮಯ ದೇವಾಲಯದ ಲೋಕಾರ್ಪಣೆ ಕಾರ್ಯಕ್ರಮ ಬುಧವಾರ ಅತ್ಯಂತ ಸಂಭ್ರಮ ಸಡಗರದಿಂದ ಜರುಗಿತು.ಈ ಸಂಬಂಧ ಮಂಗಳವಾರ ಬೆಳಗ್ಗೆ ದೇವತಾ ಪ್ರಾರ್ಥನೆ, ಸ್ವಸ್ತಿ ವಾಚನ, ಸಭಾವಂದನೆ, ಮಹಾಸಂಕಲ್ಪ, ಗಣಪತಿ ಪೂಜೆ, ಪುಣ್ಯಾಹ, ದೇವತನಾಂದಿ, ಕೌತುಕ ಬಂಧನ, ಪಂಚಗವ್ಯ ಮೇಳನ, ಅಂಕುರಾರ್ಪಣೆ, ಬಿಂಬಶುದ್ಧಿ, ಜಲಾಧಿವಾಸ, ಕ್ಷೀರವಾಸ, ಧಾನ್ಯ ದಿವಸ, ಮಹಾಗಣಪತಿ ಹೋಮ, ನವಗ್ರಹ ಹೋಮ, ಪೂರ್ಣಾಹುತಿ, ಮಹಾ ಮಂಗಳಾರತಿ ನಡೆದವು. ನಂತರ ಸಂಜೆ 5 ರಿಂದ ಮಂಡಲ ರಚನೆ, ವಾಸ್ತು ಹೋಮ, ಪ್ರತಿಷ್ಠಾಂಗ ಹೋಮ, ಪೂರ್ಣಾಹುತಿ, ಪ್ರಕಾರ ಶುದ್ಧಿ, ದಿಗ್ಬಲಿ, ನಿದ್ರಾಕಳಶ ಸ್ಥಾಪನೆ, ಶಯ್ಯಾಧಿವಾಸ ಮತ್ತು ಮಹಾಮಂಗಳಾರತಿ ನಡೆದವು.
ಬುಧವಾರ ದೇವಾಲಯದಲ್ಲಿ ಸುಪ್ರಭಾತ, ಸ್ವಸ್ತಿ ವಾಚನ, ಪಿಂಡಿಕಾ ಸ್ಥಾಪನೆ, ಬಿಂಬಪ್ರತಿಷ್ಠೆ, ಪೂಜಾಂಗ ಪ್ರತಿಷ್ಠಾಂಗ ಹೋಮ, ಪೂರ್ಣಾಹುತಿ, ನಿರೀಕ್ಷಣೆ, ಕುಂಭಾಭಿಷೇಕ, ಮಹಾಪೂಜೆ, ಮಹಾ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ಜರುಗಿತು.ಹಾಸನದ ಕೃಷ್ಣಮೂರ್ತಿ ಘನಪಾಠಿ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಕಾರ್ಯಕ್ರಮದಲ್ಲಿ ಶಾಸಕ ಬಿ.ಜಿ.ಗೋವಿಂದಪ್ಪ, ತಹಸೀಲ್ದಾರ್ ತಿರುಪತಿ ಪಾಟೀಲ್, ಉದ್ಯಮಿ ಸದ್ಗುರು ಪ್ರದೀಪ್ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.
ಈ ಧಾರ್ಮಿಕ ಕಾರ್ಯಕ್ಕೆ ದೇವಪುರ ಗ್ರಾಮದ ಹಾಲುರಾಮೇಶ್ವರ ಸ್ವಾಮಿ, ಕೆರೆಯಾಗಳಮ್ಮದೇವಿ, ಬೀರಲಿಂಗೇಶ್ವರಸ್ವಾಮಿ ಹಾಗೂ ಸೊಡರನಹಾಳ್ ಗ್ರಾಮದ ಆಂಜನೇಯಸ್ವಾಮಿಯನ್ನು ಕರೆತರಲಾಗಿತ್ತು.ದೇವಾಲಯ ನಿರ್ಮಾಣಕ್ಕೆ ಸಹಕರಿಸಿ
ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾಗಿರುವ ಹಾಲುರಾಮೇಶ್ವರ ಪುಣ್ಯ ಕ್ಷೇತ್ರದಲ್ಲಿ ಮೂಲ ದೇಗುಲದ ನಿರ್ಮಾಣ ನೆನಗುದಿಗೆ ಬಿದ್ದಿದೆ. ಉದ್ಭವ ಗಂಗೆ ರಾಜ್ಯಾದಾದ್ಯಂತ ಹೆಸರು ವಾಸಿಯಾಗಿದೆ. ಇಂತಹ ತ್ವಿತ್ರ ಕ್ಷೇತ್ರದ ಅಭಿವೃದ್ಧಿಗೆ ಎಲ್ಲಾ ಭಕ್ತರು ಕೈ ಜೋಡಿಸುವ ಮೂಲಕ ನೂತನ ದೇವಾಲಯ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಉದ್ಯಮಿ ಸದ್ಗುರು ಪ್ರದೀಪ್ ಮನವಿ ಮಾಡಿದರು.