ಕಾರ್ಕಳ: ಇತ್ತೀಚೆಗೆ ನಡೆದ ಮಂಗಳೂರು ಕಂಬಳದಲ್ಲಿ ‘ಕಂಬಳ ಬೀಷ್ಮ’ ಎಂದೇ ಖ್ಯಾತರಾದ ಗುಣಪಾಲ ಕಡಂಬರ ಅವರನ್ನು ಕಂಬಳದ ವೇದಿಕೆಯಲ್ಲಿ ವ್ಯಕ್ತಿಯೊಬ್ಬರು ಸಾರ್ವಜನಿಕವಾಗಿ ಅವಹೇಳನ ಮಾಡಿದ ಘಟನೆ ತೀವ್ರವಾಗಿ ಖಂಡನೀಯ. ಆ ವ್ಯಕ್ತಿಯು ಕೂಡಲೇ ಕ್ಷಮೆಯಾಚಿಸಬೇಕು ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ಆಗ್ರಹಿಸಿದ್ದಾರೆ.ಕಂಬಳ ಕ್ಷೇತ್ರಕ್ಕೆ ಗುಣಪಾಲ ಕಡಂಬರ ಅವರ ಕೊಡುಗೆ ಅಪಾರವಾಗಿದೆ. ಕಂಬಳಕ್ಕಾಗಿ ತಮ್ಮ ಬದುಕನ್ನೇ ಸಮರ್ಪಿಸಿದ ಶ್ರೇಷ್ಠ ವ್ಯಕ್ತಿ ಅವರು. ಅವರ ಗಟ್ಟಿ ನಿರ್ಧಾರಗಳ ಫಲವಾಗಿ ಕಂಬಳದಲ್ಲಿ ಶಿಸ್ತು ಮತ್ತು ವ್ಯವಸ್ಥೆ ಅಳವಡಿಕೆಯಾಗಿದ್ದು, ಕಂಬಳದ ಬೆಳವಣಿಗೆಗಾಗಿ ಅಕಾಡೆಮಿಯನ್ನು ಆರಂಭಿಸಿ ಅನೇಕ ಉದಯೋನ್ಮುಖ ಓಟಗಾರು ಹಾಗೂ ಪರಿಚಾರಕರ ಬೆಳವಣಿಗೆಗೆ ಕಾರಣರಾಗಿದ್ದಾರೆ. ಜೊತೆಗೆ ಹಲವು ಹೊಸ ಕಂಬಳಗಳ ಆರಂಭಕ್ಕೂ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.ಕಂಬಳದಲ್ಲಿ ಗುಣಪಾಲ ಕಡಂಬರ ಅವರ ಧ್ವನಿಯೇ ಒಂದು ವಿಶಿಷ್ಟ ಆಕರ್ಷಣೆಯಾಗಿದ್ದು, ಅವರ ಧ್ವನಿಯಲ್ಲಿ ಕಂಬಳದ ಇತಿಹಾಸವನ್ನು ಕೇಳಲು ಸಾವಿರಾರು ಕಂಬಳ ಅಭಿಮಾನಿಗಳು ನಿರೀಕ್ಷೆಯಿಂದ ಕಾಯುತ್ತಾರೆ. ಅಂತಹ ವ್ಯಕ್ತಿಯ ಧ್ವನಿಯನ್ನು ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ. ಗುಣಪಾಲ ಕಡಂಬರ ಅವರೊಂದಿಗೆ ಲಕ್ಷಾಂತರ ಕಂಬಳ ಅಭಿಮಾನಿಗಳು ನಿಂತಿದ್ದಾರೆ. ಅವಹೇಳನ ಮಾಡಿದ ವ್ಯಕ್ತಿಯನ್ನು ಕಂಬಳ ಕೂಟಗಳಿಂದ ಬಹಿಷ್ಕರಿಸಬೇಕು ಎಂದು ಶುಭದರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.