ಕನಕಪುರ: ಮತ ಕಳ್ಳತನ ತನಿಖೆ ಕನಕಪುರದಿಂದ ಮೊದಲು ಆಗಲಿ ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಮಾಗಡಿ ಯ.ಎ.ಮಂಜುನಾಥ್ ತಿಳಿಸಿದರು.
ಪ್ರಾಮಾಣಿಕವಾಗಿ ಜಿಲ್ಲೆಯಲ್ಲಿ ಚುನಾವಣೆ ನಡೆದಿದ್ದರೆ, ನಾನು ಮತ್ತು ನಿಖಿಲ್ ಕುಮಾರಸ್ವಾಮಿ ಸೋಲುತ್ತಿರಲಿಲ್ಲ ನಮ್ಮ ಹತ್ತಿರ ಹಣ ಇದ್ದು ನಾವು ಆಡಿದ್ದೇ ಆಟ ಎಂದು ತಿಳಿದುಕೊಂಡು ಇಂದು ನಮ್ಮ ಕಾರ್ಯಕರ್ತರು ಹಾಗೂ ಮುಖಂಡರ ಮೇಲೆ ದೂರುಗಳ ಮೇಲೆ ದೂರುಗಳನ್ನು ಹಾಕಿಸಿ ದಿನನಿತ್ಯ ಕಿರುಕುಳ ನೀಡುತ್ತಿದ್ದು, ಇದಕ್ಕೆಲ್ಲಾ ಮುಂದಿನ ದಿನಗಳಲ್ಲಿ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಸಾತನೂರು ಹೋಬಳಿಯ 7 ಗ್ರಾಪಂ ವ್ಯಾಪ್ತಿ ಗ್ರಾಮಗಳಲ್ಲಿ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಸೇರಿ ಪ್ರತಿ ಬೂತ್‌ನಲ್ಲಿಯೂ ಕನಿಷ್ಠ 50 ಮತದಾರನ್ನು ಮೊಬೈಲ್ ಆ್ಯಪ್ ಮೂಲಕ ಸದಸ್ಯತ್ವ ನೋಂದಣಿ ಮಾಡಿಸಬೇಕು. ಆಫ್‌ಲೈನ್ ಅರ್ಜಿಗಳನ್ನು ಭರ್ತಿಮಾಡಿ ಸದಸ್ಯತ್ವ ಪಡೆದವರಿಂದ 10 ರು. ಪಡೆದು ನೋಂದಣಿ ಮಾಡಿಸಬೇಕು. ಕನಕಪುರ ತಾಲೂಕಿನಲ್ಲಿ ಇದು ಕಷ್ಟದ ಕೆಲಸವಾದರೂ ಮನಸು ಮಾಡಿದರೆ ಎಲ್ಲವೂ ಸಾಧ್ಯ ಎಂದರು.ತಾಲೂಕು ಜೆಡಿಎಸ್ ಅಧ್ಯಕ್ಷ ಬಿ.ನಾಗರಾಜು ಮಾತನಾಡಿ, ಈ ಸರ್ಕಾರದಲ್ಲಿ ಕಂಟ್ರಾಕ್ಟರ್, ಬಿಲ್ಡರ್, ಡೆವಲಪರ್, ಆಟೋ ಚಾಲಕ, ಕಾರು ಚಾಲಕ, ಸರ್ಕಾರಿ ಅಧಿಕಾರಿಗಳು ನೌಕರರೂ ನೆಮ್ಮದಿಯಾಗಿಲ್ಲ. ಗೋಮಾಳ ಜಮೀನನ್ನು ಯಾರದೋ ಹೆಸರಿಗೆ ಬರೆಸಿ, ಯಾರಿಗೋ ನೋಂದಣಿ ಮಾಡಿಸಿ ಹೋಗುತ್ತಾರೆ. ಇದು ಪ್ರತಿನಿತ್ಯ ನಡೆಯುತ್ತಿದೆ. ಕುಮಾರಸ್ವಾಮಿ ಸರ್ಕಾರದಲ್ಲಿ ರೈತರಿಗೆ ಒಂದು ಟಿಸಿ ಹಾಕಬೇಕಾದರೆ 30ರಿಂದ 40 ಸಾವಿರ ರುಪಾಯಿಯಲ್ಲಿ ಟಿಸಿ ಹಾಕಿಸುತ್ತಿದ್ದರು. ಇಂದು ಒಂದು ಟಿಸಿ ಹಾಕಿಸಬೇಕೆಂದರೆ 4ರಿಂದ 5 ಲಕ್ಷ ಹಣವನ್ನು ರೈತ ಕೊಡಬೇಕಾಗಿದೆ. ತನ್ನ ತೋಟದಲ್ಲಿ ಮನೆ ಕಟ್ಟಲು ರೈತನಿಗೆ ಬಿಡುತ್ತಿಲ್ಲ. ರೈತರು, ಬಡ ಕುಟುಂಬಗಳು ಜೀವನ ಮಾಡಲು ಸಾಧ್ಯವಾಗುತ್ತಿಲ್ಲ. ಇದು ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಸಾಕ್ಷಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಯುವ ಜನತಾದಳ ಉಪಾಧ್ಯಕ್ಷ ಚಿನ್ನಸ್ವಾಮಿ, ಹಿರಿಯ ಮುಖಂಡರಾದ ಸಣ್ಣಪ್ಪ, ಸಿದ್ದಮರಿಗೌಡ, ಕಬ್ಬಾಳೆಗೌಡ, ನಗರಸಭಾ ಸದಸ್ಯರಾದ ಸ್ಟುಡಿಯೋ ಚಂದ್ರು, ಸುರೇಶ್, ದಿಶಾ ಸಮಿತಿ ಸದಸ್ಯರಾದ ಗೇರಹಳ್ಳಿ ರಾಜೇಶ್, ಶೋಭಾ, ತಾಪಂ ಮಾಜಿ ಸದಸ್ಯ ಧನಂಜಯ, ಗ್ರಾಮಾಂತರ ಜೆಡಿಎಸ್ ಮಹಿಳಾಧ್ಯಕ್ಷೆ ಪವಿತ್ರ, ರಮ್ಯಾ, ತೊಪ್ಪಗನಹಳ್ಳಿರಾಜ್ ಗೋಪಾಲ್, ರಮೇಶ್, ಸುರೇಶ್ ಶಂಭುಲಿಂಗಸ್ವಾಮಿ, ಪಂಚಲಿಗೇಗೌಡ, ಶಿವಸ್ವಾಮಿ ಇತರರು ಪಾಲ್ಗೊಂಡಿದ್ದರು.ಕೆ ಕೆ ಪಿ ಸುದ್ದಿ 01:
ಕನಕಪುರ ತಾಲೂಕಿನ ಕಬ್ಬಾಳು ಗ್ರಾಮದಲ್ಲಿ ಏರ್ಪಡಿಸಿದ್ದ ಜೆಡಿಎಸ್ ಪಕ್ಷದ ಡಿಜಿಟಲ್ ಸದಸ್ಯತ್ವ ಅಭಿಯಾನಕ್ಕೆ ಜಿಲ್ಲಾಧ್ಯಕ್ಷ ಎ.ಮಂಜುನಾಥ್ ಚಾಲನೆ ನೀಡಿದರು.