ಕನ್ನಡಪ್ರಭ ವಾರ್ತೆ ದಾವಣಗೆರೆ
ನ್ಯಾಯಮೂರ್ತಿ ನಾಗಮೋಹನ ದಾಸ್ ಏಕ ಸದಸ್ಯ ಆಯೋಗದ ವರದಿಯಲ್ಲಿ ಛಲವಾದಿ ಸಮುದಾಯಕ್ಕೆ ಅನ್ಯಾಯ ಮಾಡಿದ್ದನ್ನು ಖಂಡಿಸಿ ಛಲವಾದಿ ಮಹಾಸಭಾ ಜಿಲ್ಲಾ ಘಟಕದಿಂದ ನಗರದಲ್ಲಿ ಗುರುವಾರ ಕಹಳೆಗಳನ್ನು ಮೊಳಗಿಸುವ ಮೂಲಕ ಛಲವಾದಿ ಸಮುದಾಯ ಪ್ರತಿಭಟನೆ ನಡೆಸಿತು.ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಛಲವಾದಿ ಮಹಾಸಭಾ ನೇತೃತ್ವದಲ್ಲಿ ಸಮಾಜ ಬಾಂಧವರು ನ್ಯಾಯಮೂರ್ತಿ ನಾಗಮೋಹನ ದಾಸ್ ಆಯೋಗದ ವರದಿಯಲ್ಲಿ ತಮ್ಮ ಸಮುದಾಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ವೇಳೆ ಮಾತನಾಡಿದ ಮಹಾಸಭಾ ಜಿಲ್ಲಾಧ್ಯಕ್ಷ, ನಿವೃತ್ತ ಪೊಲೀಸ್ ಅಧೀಕ್ಷಕ ಎನ್.ರುದ್ರಮುನಿ, ನ್ಯಾ.ನಾಗಮೋಹನ ದಾಸ್ ಏಕ ಸದಸ್ಯ ಆಯೋಗವು ಆಗಸ್ಟ್ 4 2025 ರಂದು ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಸೇರಿದ ಪರೈಯ್ಯ, ಪರವನ್ ಜಾತಿಗಳನ್ನು ಎಡಗೈ ಪಂಗಡಕ್ಕೆ ಸೇರಿಸಿದೆ. ಬಲಗೈ ಸಮುದಾಯಕ್ಕೆ ಸೇರಿದ ಇನ್ನೂ ಹಲವಾರು ಜಾತಿಗಳನ್ನು ಅತ್ಯಂತ ಹಿಂದುಳಿದ ಜಾತಿಗಳ ಗುಂಪಿಗೆ ಸೇರಿಸಿ, ಬಲಗೈ ಸಮುದಾಯದ ಜನಸಂಖ್ಯೆಯಲ್ಲಿ ಉದ್ದೇಶಪೂರ್ವಕವಾಗಿ ಕಡಿಮೆ ಮಾಡಿದೆ ಎಂದು ಆರೋಪಿಸಿದರು.ಜಾತಿಯೇ ಅಲ್ಲದ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಸಮೂಹಕ್ಕೆ ಶೇ.18 ಮೀಸಲಾತಿ ನಿಗದಿಪಡಿಸಿದ್ದನ್ನು ರದ್ದುಪಡಿಸಿ, ಆ ಮೀಸಲಾತಿಯನ್ನು ಸಂಬಂಧಿಸಿದ ಜಾತಿಗಳಿಗೆ ಹಂಚಿಕೆ ಮಾಡಲು ಸಚಿವ ಸಂಪುಟದ ಉಪ ಸಮಿತಿ ರಚಿಸಬೇಕು. ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಸೇರ್ಪೆಡೆಗೊಳ್ಳುವ ಜಾತಿಗಳನ್ನು ನಮೂದಿಸಿ, ಸರ್ಕಾರಿ ಆದೇಶ ಹೊರಡಿಬೇಕು. ಈ ಆದೇಶವನ್ನು ಎಡ್ಗರ್ ಥರ್ಸ್ಟನ್ ಮತ್ತು ಕೆ.ರಂಗಾಚಾರಿ ಸಂಶೋಧಿಸಿದ ದೊಡ್ ಕ್ಯಾಸ್ಟ್ ಅಂಡ್ ಟ್ರೈಬ್ಸ್ ಆಫ್ ಸೌಥರ್ನ್ ಇಂಡಿಯಾದಲ್ಲಿ ಗುರುತಿಸಿದಂತೆ ಅದರ ಜನಸಂಖ್ಯೆ ಒಟ್ಟುಗೂಡಿಸುವ ಹಾಗೂ ಮೀಸಲಾತಿ ಪ್ರಮಾಣ ಮರು ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು.
ಸಮೀಕ್ಷೆಯನ್ನು ಸಮರ್ಪಕವಾಗಿ ಮನೆ ಮನೆಗೆ ಭೇಟಿ ನೀಡಿ, ಮಾಹಿತಿ ಸಂಗ್ರಹಿಸದಿರುವುದರಿಂದ ಸಂಗ್ರಹಿಸಿದ ದತ್ತಾಂಶಗಳನ್ನು ದೃಢೀಕರಿಸಲು 15 ದಿನ ಕಾಲಾವಕಾಶ ನೀಡಿ, ಆಕ್ಷೇಪಣೆಗಳನ್ನು ತಂತ್ರಾಂಶದ ಮೂಲಕ ಆಹ್ವಾನಿಸಬೇಕು. ಸ್ವೀಕೃತ ದೂರು, ಮನವಿಗಳನ್ನು ಆಧರಿಸಿ, ಸೂಕ್ತ ಸಮಂಜಸವಾಗಿ ಮೀಸಲಾತಿ ಮರು ಹಂಚಿಕೆಗೆ ಕ್ರಮ ಕೈಗೊಳ್ಳಬೇಕು. ಆಯೋಗವು ದುರುದ್ದೇಶಪೂರ್ವಕವಾಗಿ ಪಠ್ಯಯ್ಯ, ಪರವನ್ ಸಮುದಾಯವನ್ನು ಎಡಗೈ ಗುಂಪಿಗೆ ಸೇರಿಸಿರುವುದನ್ನು ರದ್ದುಪಡಿಸಿ, ಬಲಗೈ ಗುಂಪಿಗೆ ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿದರು.ಸಮಾಜದ ಹಿರಿಯ ಮುಖಂಡ ಕೆ.ಎಸ್.ಬಸವರಾಜ ಮಾತನಾಡಿ, ನ್ಯಾ.ನಾಗಮೋಹನ ದಾಸ್ ಆಯೋಗ ಸರ್ಕಾರ ಸಲ್ಲಿಸಿದ ಏಕಪಕ್ಷೀಯವಾದ, ಪಕ್ಷಪಾತದಿಂದ ಕೂಡಿದ ವರದಿ. ಯಥಾವತ್ ಒಪ್ಪಿಕೊಳ್ಳದೇ, ರಾಜ್ಯ ಸರ್ಕಾರವು ಸಂಪುಟದ ಉಪ ಸಮಿತಿ ರಚಿಸಿ, ಮೇಲಿನಂತೆ ಕ್ರಮ ಕೈಗೊಳ್ಳಬೇಕು. ಆಯೋಗದ ವರದಿಯ ಶಿಫಾರಸ್ಸಿನಲ್ಲಿರುವ ನೂನ್ಯತೆಯ ವಿರುದ್ಧ ರಾಜ್ಯ ವ್ಯಾಪಿ ಹೋರಾಟ ನಡೆಸಿ, ಸರ್ಕಾರದ ಗಮನ ಸೆಳೆಯುತ್ತಿದ್ದೇವೆ. ನಮ್ಮದು ಯಾವುದೇ ಜಾತಿ, ಬಣಗಳ ವಿರುದ್ಧದ ಹೋರಾಟವಲ್ಲ. ನಮಗೆ ಆದ ಅನ್ಯಾಯದ ವಿರುದ್ಧದ ಹೋರಾಟ ಇದು ಎಂದು ಹೇಳಿದರು.
ನಮ್ಮ ಹೋರಾಟ ಮಾದಿದ ಸಮುದಾಯದ ವಿರುದ್ಧವಲ್ಲ. ಮಾದಿಗ ಸಮುದಾಯದ ಶೇ.6 ಮೀಸಲಾತಿ ಧ್ವನಿಗೆ ನಮ್ಮ ಸಹಮತವಿದೆ. ರಾಜ್ಯದಲ್ಲಿ ಆಯೋಗದ ದತ್ತಾಂಶದ ಪ್ರಕಾರವೇ 38.70 ಲಕ್ಷ ಜನಸಂಖ್ಯೆ ಹೊಂದಿದ್ದರೂ ಛಲವಾದಿ ಸಮಾಜಕ್ಕೆ ಶೇ.5 ಮೀಸಲಾತಿ ಮಾತ್ರ ಮಾಡಿದ್ದಾರೆ. ನಮ್ಮ ಪಾಲು ನಮಗೆ ಬಂದಿಲ್ಲವೆಂಬ ಅಸಮಾಧಾನ ನಮ್ಮದು. ನಮ್ಮ ಸಮುದಾಯದಲ್ಲೇ ಐದು ಪಾಲು ಮಾಡಿದ್ದು, ಯಾಕಾಗಿ ಹೀಗೆ ಗುಂಪು ಮಾಡಲಾಗಿದೆ? ಅವುಗಳನ್ನೆಲ್ಲಾ ಬೇರ್ಪಡಿಸಿ, ಶೇ.1 ಮೀಸಲಾತಿ ಮಾಡಿದ್ದಾರೆ. ನಮ್ಮ ಪಾಲಿನ ಶೇ.5ರ ಜೊತೆಗೆ ಉಳಿದ ಶೇ.1 ಮೀಸಲಾತಿ ಸಹ ನೀಡಿ, ಶೇ.6ಕ್ಕೆ ಮೀಸಲಾತಿ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.ಸಮಾಜದ ಹಿರಿಯ ಮುಖಂಡ ಎಸ್.ಶೇಖರಪ್ಪ ಮಾತನಾಡಿ, ಆಯೋಗವು 101 ಜಾತಿಗಳ ಅಂಕಿ ಅಂಶಗಳನ್ನು ಸ್ಪಷ್ಟ ವರದಿ ತಯಾರಿಸಿಲ್ಲ. ನಾಗಮೋಹನ ದಾಸ್ ಆಯೋಗದ ವರದಿ ತಪ್ಪುಗಳನ್ನೇ ಹೊಂದಿದೆ. ಶೇ.15 ಮೀಸಲಾತಿ ಇದ್ದುದನ್ನು ಶೇ.17ಕ್ಕೆ ಕೊಡಲು ನಾಗಮೋಹನ ದಾಸ್ ಆಯೋಗಕ್ಕೆ ಅಧಿಕಾರವೇ ಇಲ್ಲ. ಈ ಬಗ್ಗೆ ಸಚಿವ ಸಂಪುಟದಲ್ಲಿ ಸಿಎಂ ಸುಧೀರ್ಘ ಚರ್ಚೆ ಮಾಡಲಿ. 101 ಜಾತಿ ಸಮುದಾಯಕ್ಕೆ ಅನ್ಯಾಯವಾಗದಂತೆ ಶೇ.15 ಮೀಸಲಾತಿಯಲ್ಲೇ ಒಳ ಮೀಸಲಾತಿ ಕಾಯ್ದಿರಿಸಲಿ. ಸಚಿವ ಸಂಪುಟದ ಉಪ ಸಮಿತಿ ಮಾಡಿ, ವರದಿಯ ಬಗ್ಗೆ ಸ್ಪಷ್ಟ ಅಂಕಿ ಅಂಶಕ್ಕೆ ರೂಪ ನೀಡಬೇಕು. ಚುನಾವಣೆ ಪೂರ್ವ ನೀಡಿದ್ದ ಭರವಸೆಯಂತೆ ಕಾಂಗ್ರೆಸ್ ಸರ್ಕಾರ ನಡೆಯಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಮಾಜದ ಮುಖಂಡರಾದ ಎಂ.ಡಿ.ರೇವಣಸಿದ್ದಪ್ಪ, ಎ.ಡಿ.ಕೊಟ್ರಬಸಪ್ಪ, ನವೀನ ಹರಳಹಳ್ಳಿ, ಹರೀಶ, ಸಮಾಜದ ಜಯಪ್ರಕಾಶ, ಎಚ್.ಕೆ.ಬಸವರಾಜ, ಹಾಲೇಶಪ್ಪ, ಸಿ.ನಾಗರಾಜ, ಎಚ್.ಗಿರೀಶ ಹರಳಹಳ್ಳಿ, ಎಂ.ಸಿ.ಓಂಕಾರಪ್ಪ, ಎಚ್.ಜಯಪ್ಪ, ದೊಡ್ಡಮನಿ ರವಿ, ಎಚ್.ನವೀನಕುಮಾರ, ಹಾಲೇಶ ಬಸವನಾಳು, ಡಾ.ಎಚ್.ಜಗನ್ನಾಥ, ಅಂಜಿನಪ್ಪ, ಕೆ.ಎಚ್.ಧರಣೇಂದ್ರಪ್ಪ, ನವೀನಕುಮಾರ, ನಿಜಲಿಂಗಪ್ಪ, ರುದ್ರಮ್ಮ, ಬ್ಯಾಂಕ್ ಶಿವಣ್ಣ, ರಾಘವೇಂದ್ರ ಇತರರಿದ್ದರು.ನಂತರ ಉಪ ವಿಭಾಗಾಧಿಕಾರಿ ಕಚೇರಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಲಾಯಿತು.