ದೇಶದಲ್ಲಿ ಎಲ್ಲಾ ಕ್ಷೇತ್ರಗಳೂ ಖಾಸಗೀಕರಣದ ತೆಕ್ಕೆಗೆ: ಶಿವಾನಂದ ಕುಗ್ವೆ

KannadaprabhaNewsNetwork |  
Published : Aug 15, 2025, 01:00 AM IST
ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು | Kannada Prabha

ಸಾರಾಂಶ

ಕಾರ್ಪೋರೇಟ್ ಕಂಪನಿಗಳೇ ದೇಶ ಬಿಟ್ಟು ತೊಲಗಿ, ಬಹುರಾಷ್ಟ್ರೀಯ ಕಂಪನಿಗಳೆ ಭಾರತ ಬಿಟ್ಟು ಹೋಗಿ ಎಂಬ ಘೋಷ ವಾಕ್ಯದೊಂದಿಗೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ರೈತ ಕಾರ್ಮಿಕ ದಲಿತ ಸಂಘಟನೆಗಳ ಒಕ್ಕೂಟದಿಂದ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಸಾಗರ

ಕಾರ್ಪೋರೇಟ್ ಕಂಪನಿಗಳೇ ದೇಶ ಬಿಟ್ಟು ತೊಲಗಿ, ಬಹುರಾಷ್ಟ್ರೀಯ ಕಂಪನಿಗಳೆ ಭಾರತ ಬಿಟ್ಟು ಹೋಗಿ ಎಂಬ ಘೋಷ ವಾಕ್ಯದೊಂದಿಗೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ರೈತ ಕಾರ್ಮಿಕ ದಲಿತ ಸಂಘಟನೆಗಳ ಒಕ್ಕೂಟದಿಂದ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ಈ ವೇಳೆ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ ಮಾತನಾಡಿ, ದೇಶದಲ್ಲಿ ಬಹುರಾಷ್ಟ್ರೀಯ ಮತ್ತು ಕಾರ್ಪೋರೇಟ್ ಕಂಪನಿಗಳ ದಬ್ಬಾಳಿಕೆಯಿಂದ ಬಡ ರೈತರು ತಮ್ಮ ಭೂಮಿ ಉಳಿಸಿಕೊಳ್ಳುವುದು ಕಷ್ಟಸಾಧ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ದೇಶದಲ್ಲಿ ಎಲ್ಲಾ ಕ್ಷೇತ್ರವನ್ನೂ ಖಾಸಗೀಕರಣದ ತೆಕ್ಕೆಗೆ ತಳ್ಳಲಾಗುತ್ತಿದೆ. ರೈತ ಸಂಘದ ಹೋರಾಟದಿಂದ ಕರಾಳ ಕಾಯ್ದೆ ಹಿಂದಕ್ಕೆ ಪಡೆಯುವ ಭರವಸೆ ನೀಡಿದ್ದ ಕೇಂದ್ರ ಸರ್ಕಾರ ಅದನ್ನು ಈತನಕ ಅನುಷ್ಠಾನಕ್ಕೆ ತಂದಿಲ್ಲ. ರೈತರ ಬೆಳೆಗೆ ಕನಿಷ್ಟ ಬೆಂಬಲ ಬೆಲೆಗೆ ಬೇಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿರುವುದು ದುರದೃಷ್ಟಕರ ಸಂಗತಿ. ಕ್ವಿಟ್ ಇಂಡಿಯಾ ಚಳವಳಿ ನಡೆದು ೮೨ ವರ್ಷವಾಯಿತು. ಈ ವರ್ಷಾಚರಣೆ ಹಿನ್ನೆಲೆಯಲ್ಲಿ ರೈತ ಸಂಘ ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ ಎಂದರು.

ಸಂಯುಕ್ತ ಹೋರಾಟ ಕರ್ನಾಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಡಿ.ವಸಂತ ಕುಮಾರ್ ಮಾತನಾಡಿ, ಎಲ್ಲ ರಾಜಕೀಯ ಪಕ್ಷಗಳು ರೈತರ ಪಾಲಿಗೆ ಶತ್ರುಗಳಾಗಿವೆ. ಬಹುರಾಷ್ಟ್ರೀಯ ಕಂಪನಿಗಳಿಗೆ ಒಂದು ರುಪಾಯಿ ದರದಲ್ಲಿ ಭೂಮಿ ಕೊಡುತ್ತೇವೆ ಎನ್ನುವ ರಾಜಕಾರಣಿಗಳು ಬಡ ರೈತರಿಗೆ ಬಗರ್‌ಹುಕುಂ ಸೇರಿದಂತೆ ಸಣ್ಣ ನಿವೇಶನ ಕೊಡಲು ಹಿಂದೇಟು ಹಾಕುತ್ತಾರೆ. ಬಡವರಿಗೆ, ರೈತರಿಗೆ ಭೂಮಿ ಕೊಡಲು ನೂರಾರು ಅಡ್ಡಿ ಇರುತ್ತದೆ. ಆದರೆ ಬಹುರಾಷ್ಟ್ರೀಯ ಕಂಪನಿಗಳಿಗೆ ಭೂಮಿ ಕೊಡಲು ಕಾನೂನನ್ನೆ ತಿದ್ದುಪಡಿ ಮಾಡುತ್ತಾರೆ ಎಂದು ದೂರಿದರು.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಪರಮೇಶ್ವರ ದೂಗೂರು ಮಾತನಾಡಿ, ಸರ್ಕಾರ ರೈತರ ಭೂಮಿ ಕಿತ್ತುಕೊಂಡು ದೊಡ್ಡದೊಡ್ಡ ಕಂಪನಿಗಳಿಗೆ ನೀಡುತ್ತಿದೆ. ನಗರ ಪ್ರದೇಶದ ರಿಯಲ್ ಎಸ್ಟೇಟ್ ದಂಧೆ ಗ್ರಾಮೀಣ ಭಾಗಕ್ಕೆ ವ್ಯಾಪಿಸಿದ್ದು ರೈತರ ಭೂಮಿಯ ದಾಖಲೆಯನ್ನೆ ಬದಲಾಯಿಸುವ ಕೆಲಸ ನಡೆಯುತ್ತಿದೆ. ಅಕ್ರಮ ಹಣವನ್ನು ಭೂಮಿ ಖರೀದಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ನಾಗರಾಜ್, ಸುರೇಶ್ ಅಂಗಡಿ, ಮೋಹನಮೂರ್ತಿ, ದ್ಯಾವಪ್ಪ ಕೆಳದಿ, ಕೆ.ಟಿ.ರಮೇಶ್ ಐಗಿನಬೈಲು, ಶಿವಪ್ಪ, ಅಣ್ಣಪ್ಪ, ಚೌಡಪ್ಪ ಇನ್ನಿತರರು ಹಾಜರಿದ್ದರು.

PREV

Recommended Stories

ಲೋಕಾ ಎಸ್ಪಿ ಬದ್ರಿನಾಥ್‌ ಸೇರಿ 19 ಪೊಲೀಸರಿಗೆ ರಾಷ್ಟ್ರ ಪದಕ
ಕೊಲೆ ಆರೋಪಿ ದರ್ಶನ್‌ಗೆ ತಪ್ಪದ ದಯಾನಂದ್ ಕಂಟಕ