ಸೋನು ನಿಗಮ್‌ ವಿರುದ್ಧ ತನಿಖೆ ವರದಿಗೆ ತಡೆ

KannadaprabhaNewsNetwork |  
Published : May 16, 2025, 02:05 AM IST
ಸೋನು ನಿಗಮ್‌  | Kannada Prabha

ಸಾರಾಂಶ

ಕನ್ನಡ ಹಾಡು ಹಾಡುವಂತೆ ಒತ್ತಾಯಿಸಿದ್ದನ್ನು ಪಹಲ್ಗಾಂ ಘಟನೆಗೆ ಹೋಲಿಸಿದ ಪ್ರಕರಣ ಸಂಬಂಧ ಗಾಯಕ ಸೋನು ನಿಗಮ್‌ ವಿರುದ್ಧದ ತನಿಖೆಯ ಅಂತಿಮ ವರದಿ ಸಲ್ಲಿಸುವ ಪ್ರಕ್ರಿಯೆಗೆ ಹೈಕೋರ್ಟ್‌ ತಡೆ ನೀಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕನ್ನಡ ಹಾಡು ಹಾಡುವಂತೆ ಒತ್ತಾಯಿಸಿದ್ದನ್ನು ಪಹಲ್ಗಾಂ ಘಟನೆಗೆ ಹೋಲಿಸಿದ ಪ್ರಕರಣ ಸಂಬಂಧ ಗಾಯಕ ಸೋನು ನಿಗಮ್‌ ವಿರುದ್ಧದ ತನಿಖೆಯ ಅಂತಿಮ ವರದಿ ಸಲ್ಲಿಸುವ ಪ್ರಕ್ರಿಯೆಗೆ ಹೈಕೋರ್ಟ್‌ ತಡೆ ನೀಡಿದೆ.

ತಮ್ಮ ವಿರುದ್ದ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಸೋನು ನಿಗಮ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶಿವಶಂಕರ ಅಮರಣ್ಣನವರ್‌ ಅವರ ಪೀಠ ಈ ಆದೇಶ ಮಾಡಿದೆ. ಅಲ್ಲದೆ ತನಿಖೆಗೆ ಸಹಕರಿಸಿದರೆ ಸೋನು ನಿಗಮ್‌ ವಿರುದ್ಧ ಬಲವಂತದ ಯಾವುದೇ ಕಾನೂನು ಕ್ರಮ ಜರುಗಿಸಬಾರದೆಂದು ಇದೇ ವೇಳೆ ಸೂಚಿಸಿತು.

ಅರ್ಜಿದಾರರ ಪರ ವಕೀಲರು, ಸೆಲೆಬ್ರಿಟಿ ಆಗಿರುವ ಸೋನು ನಿಗಮ್‌ ಪೊಲೀಸರ ಮುಂದೆ ತನಿಖೆಗೆ ಹಾಜರಾಗಲು ಖುದ್ದಾಗಿ ಬಂದಲ್ಲಿ ಮತ್ತೆ ಹೈಡ್ರಾಮಾ ನಡೆಯುವ ಸಾಧ್ಯತೆಯಿದೆ. ಹಾಗಾಗಿ, ಆನ್‌ಲೈನ್‌ ಮೂಲಕ ಅಥವಾ ಲಿಖಿತವಾಗಿ ಹೇಳಿಕೆ ದಾಖಲಿಸಲು ಅರ್ಜಿದಾರರಿಗೆ ಅವಕಾಶ ಕಲ್ಪಿಸಬೇಕು ಎಂದು ಕೋರಿದರು.

ಈ ಮನವಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ವಕೀಲರು, ಅರ್ಜಿದಾರರ ಹೇಳಿಕೆಯಿಂದ ಕನ್ನಡಿಗರ ಭಾವನೆಗಳಿಗೆ ಧಕ್ಕೆಯಾಗಿದೆ. ಆದ್ದರಿಂದ ಅವರನ್ನು ವಿಚಾರಣೆಗೆ ಒಳಪಡಿಸಬೇಕಿದೆ. ಆಗ ಮಾತ್ರ ಯಾವ ಉದ್ದೇಶದಿಂದ ಹೇಳಿಕೆ ನೀಡಿದರು ಎಂಬುದನ್ನು ತಿಳಿಯಲು ಸಾಧ್ಯ. ತನಿಖಾಧಿಕಾರಿಗಳು ಮಹಜರು ಪ್ರಕ್ರಿಯೆ ನಡೆಸಬೇಕಿದೆ. ಸೋನು ನಿಗಮ್‌ ವಿಚಾರಣೆಗೆ ಹಾಜರಾದರೆ ಭದ್ರತೆ ಕಲ್ಪಿಸುವುದು ನಮ್ಮ (ಪೊಲೀಸರ) ಕರ್ತವ್ಯ. ಹಾಗಾಗಿ, ಅವರು ಖುದ್ದಾಗಿ ವಿಚಾರಣೆಗೆ ಹಾಜರಾಗಲಿ ಎಂದರು.

ವಿಡಿಯೋ ಕಾನ್ಫರೆನ್ಸ್‌ ಮೂಲಕ ಅರ್ಜಿದಾರರ ಹೇಳಿಕೆ ದಾಖಲಿಸಿಕೊಳ್ಳಬಹುದಲ್ಲವೇ? ಅದಕ್ಕೇನು ಸಮಸ್ಯೆ? ಎಂದು ಸರ್ಕಾರಿ ವಕೀಲರನ್ನು ಪ್ರಶ್ನಿಸಿದ ನ್ಯಾಯಮೂರ್ತಿಗಳು, ತನಿಖಾಧಿಕಾರಿಗಳು ವಿಡಿಯೋ ಕಾನ್ಪರೆನ್ಸ್‌ ಮೂಲಕ ಸೋನು ನಿಗಮ್‌ ಹೇಳಿಕೆ ದಾಖಲಿಸಿಕೊಳ್ಳಬೇಕು. ಇಲ್ಲವಾದರೆ ತನಿಖಾಧಿಕಾರಿಗಳೇ ಸೋನು ನಿಗಮ್‌ ಸ್ಥಳಕ್ಕೆ ತೆರಳಿ ಅವರ ಹೇಳಿಕೆ ದಾಖಲಿಸಿಕೊಳ್ಳಬೇಕು. ಅದಕ್ಕಾಗಿ ಉಂಟಾಗುವ ಖರ್ಚುಗಳನ್ನು ಸೋನು ನಿಗಮ್‌ ಭರಿಸಬೇಕು ಎಂದು ಪೀಠ ಇದೇ ವೇಳೆ ಸೂಚಿಸಿದೆ.

ಬೆಂಗಳೂರಿನ ಈಸ್ಟ್‌ ಪಾಯಿಂಟ್‌ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಜಿಯಲ್ಲಿ ಏ.25 ಮತ್ತು 26ರಂದು ಸಂಗೀತ ಕಾರ್ಯಕ್ರಮ ನಡೆದಿತ್ತು. ಈ ವೇಳೆ ಕನ್ನಡಿಗರು ಕನ್ನಡ ಹಾಡು ಹಾಡುವಂತೆ ಕೋರಿದ್ದರು. ಅದಕ್ಕೆ ಸೋನು ನಿಗಮ್‌ ಇದಕ್ಕಾಗಿಯೇ ಪಹಲ್ಗಾಂ ಘಟನೆ ನಡೆದಿರುವುದು ಎಂದು ಹೇಳಿಕೆ ನೀಡಿದ್ದರು. ಇದರಿಂದ ಕನ್ನಡಿಗರ ಭಾವನೆ ಕೆರಳಿದಿದೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರಿ ಮೇ 2ರಂದು ಕರ್ನಾಟಕ ರಕ್ಷಣಾ ವೇದಿಕೆಯ (ನಾರಾಯಣಗೌಡ ಬಣ) ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎ.ಧರ್ಮರಾಜ ಅವಲಹಳ್ಳಿ ಠಾಣಾ ಪೊಲೀಸರಿಗೆ ದೂರು ನೀಡಿದ್ದರು.ಆ ದೂರು ಅಧರಿಸಿದ ಪೊಲೀಸರು ಸೋನು ನಿಗಮ್‌ ವಿರುದ್ಧ ಮೇ 3ರಂದು ಎಫ್‌ಐಆರ್‌ ದಾಖಲಿಸಿಕೊಂಡು ಮೇ 5ರಂದು ತನಿಖೆಗೆ ಹಾಜರಾಗುವಂತೆ ನೋಟಿಸ್‌ ಜಾರಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸೋನು ನಿಗಮ್‌ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಯಾರಿಗೂ ನೋವುಂಟು ಮಾಡುವ ಉದ್ದೇಶ ಸೋನು ನಿಗಮ್‌ಗೆ ಇರಲಿಲ್ಲ. ಕನ್ನಡ ಹಾಡು ಹಾಡುವಂತೆ ಕೆಲವರು ಒತ್ತಾಯಿಸಿದಕ್ಕೆ ಪ್ರತಿಯಿಸುವಾಗ ಈ ವೇಳೆ ಘಟನೆ ನಡೆದಿದೆ. ದೂರುದಾರರು ಘಟನಾ ಸ್ಥಳದಲ್ಲಿರಲಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿನ ವರದಿ ಆಧರಿಸಿ ದೂರು ದಾಖಲಿಸಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.

ಅದಕ್ಕೆ ಆಕ್ಷೇಪಿಸಿದ ಸರ್ಕಾರಿ ವಕೀಲರು, ಅರ್ಜಿದಾರರಿಗೆ ವಿಚಾರಣೆಗೆ ಹಾಜರಾಗುವಂತೆ ಈಗಾಗಲೇ ಇ-ಮೇಲ್‌ ಹಾಗೂ ಸ್ಪೀಡ್‌ ಪೋಸ್ಟ್‌ ಮೂಲಕ ನೋಟಿಸ್‌ ನೀಡಲಾಗಿದೆ. ಅವರು ಮಾತ್ರ ವಿಚಾರಣೆಗೆ ಹಾಜರಾಗಲಿಲ್ಲ. ಘಟನೆ ಸಂಬಂಧಿಸಿ ವಿರೋಧ ವ್ಯಕ್ತವಾದರೂ, ಮೊದಲಿಗೆ ತನ್ನ ನಡೆ ಸಮರ್ಥಿಸಿಕೊಂಡರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಷೇಧ ಹೇರಿದ ಬಳಿಕ ಕ್ಷಮೆಯಾಚಿಸಿದರು. ವಿಚಾರಣೆಗೆ ಹಾಜರಾದರೆ ಅರ್ಜಿದಾರರ ವಿರುದ್ಧ ಬಲವಂತದ ಕ್ರಮ ಜರುಗಿಸುವುದಿಲ್ಲ ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!