ಮಾಜಿ ಸಚಿವ ಎಚ್.ಆಂಜನೇಯ ಆರೋಪ । ಸಿಎಂ ಸಿದ್ದರಾಮಯ್ಯ ಕ್ರಮಕ್ಕೆ ಸ್ವಾಗತಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಳಮೀಸಲಾತಿ ವಿಷಯದಲ್ಲಿ ರಾಜ್ಯ ಸರ್ಕಾರ ಬಹಳಷ್ಟು ವಿಳಂಬ ನೀತಿ ಮಾಡಿದೆ ಎಂಬ ಆತಂಕ ಮನೆ ಮಾಡಿದೆ. ಈಗಾಗಲೇ ತೆಲಂಗಾಣದಲ್ಲಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ಒಳ ಮೀಸಲಾತಿ ಜಾರಿಗೊಳಿಸಿದ್ದಾರೆ. ಅದೇ ರೀತಿ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲ ಅಡ್ಡಿ ಆತಂಕ ನಿವಾರಿಸಿಕೊಂಡು ಶೀಘ್ರ ಒಳ ಮೀಸಲು ಜಾರಿಗೊಳಿಸಬೇಕು. ಅಡ್ಡದಾರಿಯಲ್ಲಿ ಬ್ಯಾಕ್ ಲಾಗ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಕೈ ಬಿಡಬೇಕೆಂದು ಆಗ್ರಹಿಸಿದರು. ಒಳ ಮೀಸಲಾತಿಗಾಗಿ 30 ವರ್ಷ ಹೋರಾಟ ನಡೆಸಿ, ಅನೇಕರು ನಮ್ಮನ್ನು ಅಗಲಿದ್ದಾರೆ. ಈ ಮಧ್ಯೆ ಮೀಸಲು ಸೌಲಭ್ಯಕ್ಕಾಗಿ ಸಮುದಾಯದವರು ಸರ್ಕಾರದ ಕಡೆ ಆಸೆಗಣ್ಣಿನಲ್ಲಿ ನೋಡುತ್ತಿದ್ದಾರೆ. ತಟ್ಟೆಯಲ್ಲಿ ಅನ್ನ ಇಟ್ಟು, ಊಟ ಹೊಟ್ಟೆ ಸೇರಿದಾಗಲೇ ತೃಪ್ತಿ ಎಂಬಂತೆ ಒಳಮೀಸಲಾತಿ ವಿಷಯದಲ್ಲಿ ಕಳವಳ ಇದೆ. ನ್ಯಾ.ನಾಗಮೋಹನ್ ದಾಸ್ ಆಯೋಗ, ಸರ್ಕಾರಿ ಉದ್ಯೋಗದಲ್ಲಿ ಪರಿಶಿಷ್ಟರಲ್ಲಿ ಯಾವ ಜಾತಿಯವರು ಎಷ್ಟು ಪ್ರಮಾಣದಲ್ಲಿ ಇದ್ದಾರೆಂಬ ಮಾಹಿತಿ ಕೇಳಿದರೂ ಇಲ್ಲಿಯವರೆಗೂ ಕೊಟ್ಟಿಲ್ಲ. ಜೊತೆಗೆ ಸುಪ್ರೀಂ ಕೋರ್ಟ್ ತೀರ್ಪು ಬಳಿಕ ತರಾತುರಿಯಲ್ಲಿ 10 ಸಾವಿರ ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಲಾಗಿದೆ. ಇದೆಲ್ಲವೂ ಕುತಂತ್ರದ ಭಾಗವಾಗಿದೆ ಎಂದರು.
ಈ ಷಡ್ಯಂತ್ರಕ್ಕೆ ಕಡಿವಾಣ ಹಾಕಲು ಸಿದ್ದರಾಮಯ್ಯ ಸರ್ಕಾರಿ ನೇಮಕಾತಿಗೆ ತಡೆ ಹಾಕಿದ್ದಾರೆ. ಜೊತೆಗೆ ಒಳಮೀಸಲಾತಿ ವಿಷಯದಲ್ಲಿ ಆದಿ ಕರ್ನಾಟಕ, ಆದಿದ್ರಾವಿಡ ವಿಷಯ ಬಹಳಷ್ಟು ಗೊಂದಲಕ್ಕೆ ಎಡೆಮಾಡಿಕೊಟ್ಟಿದ್ದು, ಅದನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ಪರಿಶಿಷ್ಟ ಜಾತಿಗೆ ಸೀಮಿತಗೊಳಿಸಿ ಜಾತಿಗಣತಿ ಕಾರ್ಯ ಕೈಗೊಳ್ಳಲು ಸಿದ್ಧತೆ ಆರಂಭಿಸಿರುವುದು ಆಶಾಭಾವನೆ ಮೂಡಿಸಿದೆ ಎಂದು ಆಂಜನೇಯ ಹೇಳಿದರು.ಜಾತಿಗಣತಿ ಕಾರ್ಯ ಹಾಗೂ ಒಳಮೀಸಲಾತಿ ಸಂಬಂದ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದು, ಕೆಲ ಬೇಡಿಕೆಗಳನ್ನು ಮುಂದಿಟ್ಟಿದ್ದೇವೆ. ಬೆಂಗಳೂರು, ಮೈಸೂರು ವಿಭಾಗಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಮಾದಿಗರು ಮತ್ತು ಛಲವಾದಿ ಜಾತಿಯವರು ಆದಿ ಕರ್ನಾಟಕ, ಆದಿ ದ್ರಾವಿಡ ಎಂಬ ಹೆಸರಿನಲ್ಲಿ ಜಾತಿ ಪತ್ರವನ್ನು ಪಡೆದಿದ್ದಾರೆ. ಇದು ಬಹಳಷ್ಟು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ. ಇದನ್ನು ತೊಡೆದು ಹಾಕಲು ಮೂಲ (ಮಾದಿಗ ಅಥವಾ ಛಲವಾದಿ) ಜಾತಿಯನ್ನು ಕಡ್ಡಾಯವಾಗಿ ದಾಖಲಿಸಬೇಕು. ಮೂಲ ಜಾತಿ ನಮೋದಿಸದಿದ್ದರೆ ವೆಬ್‌ಸೈಟ್ ಸ್ವೀಕರಿಸಿದ ರೀತಿ ತಂತ್ರಾಂಶ ಸಿದ್ಧಪಡಿಸಬೇಕು ಎಂದರು.
ಗಣಿತಿದಾರರು ಪ್ರತಿದಿನ ಗಣಿತಿ ಮಾಡಿದ ವಿವರವನ್ನು ಅಂದೇ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಬೇಕು. ನಮ್ಮ ವಿವರ ದಾಖಲಿದೆಯೇ ಎಂದು ಖಚಿತಪಡಿಸಿಕೊಳ್ಳುವ ಅವಕಾಶ ಆಧಾರ್ ಕಾರ್ಡ್ ಲಿಂಕ್‌ಗೆ ಒಳಪಟ್ಟ ವ್ಯಕ್ತಿಗೆ ಇರಬೇಕು. ಪರಿಶಿಷ್ಟ ಸಮುದಾಯದ ಪ್ರತಿ ವ್ಯಕ್ತಿಗೆ ಆಧಾರ್‌ಕಾರ್ಡ್ ರೀತಿ ಗುರುತಿನ ಚೀಟಿ ನೀಡಬೇಕು. ಅದರಲ್ಲಿ ಜಾತಿಗಣತಿಯಲ್ಲಿ ನೋಂದಾಯಿಸಿಕೊಂಡ ಸಂಖ್ಯೆ ಸೇರಿ ಕೆಲ ವಿವರಗಳು ಇರಬೇಕು ಎಂದು ಆಗ್ರಹಿಸಿದರು. ಒಳಮೀಸಲಾತಿ ಜಾರಿ ಬಳಿಕ ಉದ್ಯೋಗ, ಶಿಕ್ಷಣ, ಯೋಜನೆಗಳ ಸೌಲಭ್ಯಗಳನ್ನು ಪಡೆಯುವಾಗ ಮಾದಿಗ, ಛಲವಾದಿ, ಲಂಬಾಣಿ, ಭೋವಿ ಜಾತಿ ಸೂಚಕ ಪ್ರಮಾಣ ಪತ್ರ ಪಡೆಯುವ ಸಂದರ್ಭ ಗುರುತಿನ ಚೀಟಿ ಸಾಕ್ಷಿಯಾಗಿ ಪರಿಗಣಿಸಬಹುದು. ಜಾತಿಗಣತಿ ಕಾರ್ಯಕ್ಕೆ ಪರಿಶಿಷ್ಟ ಜಾತಿಯ ಶಿಕ್ಷಕರನ್ನು ಯಾವುದೇ ಕಾರಣಕ್ಕೂ ನೇಮಿಸಬಾರದು. ಪಟ್ಟಣ, ನಗರ ಪ್ರದೇಶದಲ್ಲಿ ಹರಿದು ಹಂಚಿ ಹೋಗಿರುವ ಪರಿಶಿಷ್ಟರು ಜಾತಿಗಣತಿ ಕಾರ್ಯದಲ್ಲಿ ಪಾಲ್ಗೊಳ್ಳಲು ಸಹಾಯವಾಗುವ ರೀತಿ ನಗರಸಭೆ, ತಾಲೂಕು ಕಚೇರಿ, ಮಹಾನಗರ ಪಾಲಿಕೆಯಲ್ಲಿ ಜಾತಿಗಣತಿ ವಿಭಾಗ ತೆರೆಯಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಲಿಡ್ಕರ್ ಮಾಜಿ ಅಧ್ಯಕ್ಷ ಓ.ಶಂಕರ್, ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಇದ್ದರು.