ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಕೃಷ್ಣಾ ನದಿಯಿಂದ ಒಂದು ಹನಿ ನೀರನ್ನೂ ಬರಪೀಡಿತ ಜಿಲ್ಲೆಗಳಾದ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ತೆಗೆದುಕೊಂಡು ಹೋಗಲು ನಾವು ಬಿಡುವುದಿಲ್ಲ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ನೀಡಿರುವ ಹೇಳಿಕೆಯನ್ನು ಶಾಶ್ವತ ನೀರಾವರಿ ಹೋರಾಟ ಸಮಿತಿ ತೀವ್ರವಾಗಿ ಖಂಡಿಸಿದೆ.ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಶಾಶ್ವತ ನೀರಾವರಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಆರ್.ಆಂಜನೇಯರೆಡ್ಡಿ, 2013 ರಲ್ಲಿ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಪಾಟೀಲರು ಕೊಟ್ಟ ಕೊಡುಗೆ ಶೂನ್ಯ ಎಂದು ಅವರು ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎತ್ತಿನಹೊಳೆಗೆ ಸುರಿದ ಹಣ
ಸುಧೀರ್ಘ ಐದು ವರ್ಷಗಳ ಕಾಲ ಬೃಹತ್ ನೀರಾವರಿ ಸಚಿವರಾಗಿದ್ದ ಪಾಟೀಲರು ಬೊಗಸೆ ನೀರು ಹರಿಯುವ ಖಾತ್ರಿಯಿಲ್ಲದಿದ್ದರೂ ದಲ್ಲಾಳಿಗಳ ಜೊತೆ ಶಾಮೀಲಾಗಿ ಎತ್ತಿನಹೊಳೆ ಯೋಜನೆಗೆ ಸಾವಿರಾರು ಕೋಟಿಗಳ ಪೈಪ್ ಹಾಕಿಸುವುದರಲ್ಲಿ ತಲ್ಲೀನರಾಗಿದ್ದರು. ಬರೋಬ್ಬರಿ 12 ವರ್ಷ ಕಳೆದರೂ ಒಂದು ಹನಿ ನೀರೂ ಸಹಾ ಹರಿಯದಿರುವ ಎತ್ತಿನಹೊಳೆಯ ಬಗ್ಗೆ ಅವರಿಗೆ ಯಾವುದೇ ಪಶ್ಚಾತ್ತಾಪವಿಲ್ಲವೇ ಎಂದು ಪ್ರಶ್ನಿಸಿದ್ದಾರೆ.ವಾಸ್ತವದಲ್ಲಿ 2020 ರಲ್ಲಿಯೇ ಕೇಂದ್ರ ಸರ್ಕಾರದ ರಾಷ್ಟೀಯ ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆ ಯು ಕೃಷ್ಣಾ - ಆಲಮಟ್ಟಿ - ಪೆನ್ನಾರ್ ಜೋಡಣೆಯ ಕೊಂಡಿ ಯೋಜನೆಯಲ್ಲಿ (ದಕ್ಷಿಣ ಪಿನಾಕಿನಿ) ಕರ್ನಾಟಕದ ಪೆನ್ನಾರ್ ನದಿ ಜಲಾನಯನ ಪ್ರದೇಶಕ್ಕೆ ಸೇರಿದ ಕೋಲಾರ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ 1.82 ಲಕ್ಷ ಎಕರೆ ಕೃಷಿ ಭೂಮಿಗೆ ನೀರಾವರಿ ಒದಗಿಸುವ ಯೋಜನೆಗೆ ಕಾರ್ಯಸಾಧ್ಯತಾ ವರದಿಯನ್ನು ತಯಾರಿಸಿ ಕೇಂದ್ರದ ಮನಮೋಹನ್ ಸಿಂಗ್ ಸರ್ಕಾರಕ್ಕೆ ಸಲ್ಲಿಸಲಾಗಿತ್ತು ಎಂದರು. ಸಚಿವ ಹೇಳಿಕೆ ಅಪ್ರಬುದ್ಧ
2015 ರಲ್ಲಿ ಚದಲಪುರ ಕ್ರಾಸ್ ನಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ನಡೆಸಿದ ಅನಿರ್ಧಿಷ್ಠಾವದಿ ಧರಣಿ ವೇದಿಕೆಗೆ ಬಂದಾಗಲೇ ಸದರಿ ವರದಿಯ ಎಲ್ಲಾ ದಾಖಲೆಗಳನ್ನು ಅಂದಿನ ಜಲಸಂಪನ್ಮೂಲ ಸಚಿವರಾಗಿದ್ದ ಎಂ.ಬಿ. ಪಾಟೀಲರಿಗೆ ಹಸ್ತಾಂತರಿಸಿ, ನಮ್ಮ ನೀರಿನ ಪಾಲನ್ನು ಕೊಡುವಂತೆ ಕೋರಲಾಗಿತ್ತು, ಆದರೆ ಇದ್ಯಾವುದಕ್ಕೂ ಓಗೊಡದ ಪಾಟೀಲರು ಎರಡೇ ವರ್ಷಗಳಲ್ಲಿ ಎತ್ತಿನಹೊಳೆಯನ್ನು ಹರಿಸಿ ಎಲ್ಲರಿಗೂ ಸುರಕ್ಷಿತ ಶುದ್ಧ ಕುಡಿಯುವ ನದಿ ಮೂಲದ ನೀರನ್ನುಪೂರೈಸುವುದಾಗಿ ಪುಂಗಿ ಊದಿ ಮಾಯವಾಗಿದ್ದರು. ಅವರು ಇದನ್ನು ಮರೆತಿದ್ದರೆ ಅಥವಾ ನಾವು ಕೊಟ್ಟಿದ್ದ ದಾಖಲೆಗಳನ್ನು ಕಳೆದುಕೊಂಡಿದ್ದರೆ, ಮತ್ತೆ ತಲುಪಿಸಲಾಗುವುದು. ಅವರ ಆತುರದ ಅಪ್ರಬುದ್ದ ಹೇಳಿಕೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸುತ್ತೇವೆಂದರು. ಉತ್ತರ ಕರ್ನಾಟಕದ ಜಾಗೀರು ಎಂದು ಭಾವಿಸಿರುವ ಕೃಷ್ಣಾ ನದಿಯಿಂದ ನೂರಾರು ಟಿಎಂಸಿ ಪ್ರವಾಹದ ರೂಪದಲ್ಲಿ ಆಂದ್ರಕ್ಕೆ ಹರಿದರೆ ಇವರಿಗೇನೂ ನೋವಿಲ್ಲ, ಕರ್ನಾಟಕದ ಬರಪೀಡಿತ ಬಯಲುಸೀಮೆಯ ಜನರಿಗೆ ಕುಡಿಯುವ ನೀರಿಗಾಗಿ ಮಾತ್ರ ಕೃಷ್ಣಾ ನದಿಯಿಂದ ಒಂದು ಹನಿ ನೀರನ್ನು ಹರಿಸಲು ಬಿಡುವುದಿಲ್ಲ ಎಂಬ ದೋರಣೆ ದುರದೃಷ್ಠಕರ ಎಂದುಅರು ತಿಳಿಸಿದ್ದಾರೆ.ಹಿಂದೆ ಅಂದಿನ ಮುಖ್ಯಮಂತ್ರಿ ಎನ್.ಟಿ.ರಾಮರಾವ್ ಮಾನವೀಯತೆ ದೃಷ್ಠಿಯಿಂದ ತೆಲುಗು ಗಂಗಾ ಯೋಜನೆ ರೂಪಿಸಿ ಪಕ್ಕದ ತಮಿಳುನಾಡಿನ ಮದ್ರಾಸ್ ಗೆ ಕುಡಿಯುವ ನೀರನ್ನು ಕೊಟ್ಟಿದ್ದರು. ಅಖಂಡ ಕರ್ನಾಟಕದ ಸಮಗ್ರತೆಯನ್ನು ಮರೆತರೆ ರಾಜಕಾರಣಿಗಳಿಗೆ ಪಾಠ ಕಲಿಸಬೇಕಾಗುತ್ತದೆಂದು ಆಂಜನೇಯರೆಡ್ಡಿ ಕಿಡಿಕಾರಿದ್ದಾರೆ.