ಕಲಘಟಗಿ: ಪೌರಾಡಳಿತ ಇಲಾಖೆಯಿಂದ ನಗರೋತ್ಥಾನ ಯೋಜನೆಯಡಿ ಕಲಘಟಗಿ ಪಪಂ ಕಟ್ಟಡ ಹಾಗೂ ಗ್ರಂಥಾಲಯ ನಿರ್ಮಾಣಕ್ಕೆ ಪಟ್ಟಣದಲ್ಲಿ ಮೀಸಲಿರುವ ಜಾಗೆಯಲ್ಲಿ ಅಲೆಮಾರಿ ಜನಾಂಗದವರು ಅನಧಿಕೃತವಾಗಿ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿದ್ದ ಸ್ಥಳ ಒತ್ತುವರಿಯನ್ನು ಪಪಂ ಅಧಿಕಾರಿಗಳು ಈಚೆಗೆ ತೆರವುಗೊಳಿಸಿದ್ದರು. ಈ ಕುರಿತು ಸಂತ್ರಸ್ಥತರಿಂದ ಸಚಿವ ಸಂತೋಷ ಲಾಡ್ ಮನವಿ ಸ್ವೀಕರಿಸಿದರು.
ಅನಧಿಕೃತವಾಗಿ ಶೆಡ್ಡ್ ನಿರ್ಮಿಸಿದ್ದ, ತೆರವುಗೊಳಿಸಿದ ಕುಟುಂಬಗಳಿಗೆ ಗಾಂಧಿನಗರ ಹಾಗೂ ಇತರ ಸ್ಥಳಗಳಲ್ಲಿ ತಾತ್ಕಾಲಿಕ ಆಶ್ರಯ ಕಲ್ಪಿಸಲಾಗಿದೆ. ಅಲೆಮಾರಿ ಜನಾಂಗದ ಬಾಧಿತ 13 ಕುಟುಂಬಗಳ ವಾಸಸ್ಥಳ ಹಾಗೂ ಇತರ ಅಧಿಕೃತ ದಾಖಲೆಗಳನ್ನು ಪಡೆದುಕೊಂಡು, ಸ್ಥಾನಿಕ ಚೌಕಸಿ ಮಾಡಿಕೊಂಡು ಪಪಂ ಆಡಳಿತ ಮಂಡಳಿ ಸಭೆಯಲ್ಲಿ ಅನುಮೋದಿಸಿ, ನಿವೇಶನ ನೀಡಲು ತಕ್ಷಣ ಕ್ರಮ ವಹಿಸಲು ಪಪಂ ಮುಖ್ಯಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ಅಲೆಮಾರಿ ಕುಟುಂಬಗಳು ಈಗ ತಾತ್ಕಾಲಿಕವಾಗಿ ನೆಲೆಸಿರುವ ಸ್ಥಳಗಳಿಂದ ವಕ್ಕಲೆಬ್ಬಿಸದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವರು, ಅರ್ಹರಿಗೆ ಅದಷ್ಟು ಬೇಗ ನಿವೇಶನ ನೀಡಲು ಕ್ರಮ ವಹಿಸುವುದಾಗಿ ತಿಳಿಸಿದರು.ಈ ವೇಳೆ ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾ ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ತಹಸೀಲ್ದಾರ್ ಬಸವರಾಜ ಹೊಂಕಣದವರ, ಪಪಂ ಮುಖ್ಯಾಧಿಕಾರಿ ಚಂದ್ರಶೇಖರ. ಬಿ. ಹಾಗೂ ಇತರರು ಇದ್ದರು.